ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕ್ರೈಸ್ತ ಸಮುದಾಯವು ತನ್ನದೇ ರೀತಿಯಲ್ಲಿ ಸಾಮಾಜಿಕ ಸೇವೆಯನ್ನು ನಡೆಸಿಕೊಂಡು ಬರುತ್ತಿದೆ. ಶೈಕ್ಷಣಿಕ, ಆರೋಗ್ಯ ಹಾಗೂ ಸೇವಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದೆ. ಅತ್ಯಂತ ಸಾಮರಸ್ಯದಿಂದ ಜಿಲ್ಲೆಯಲ್ಲಿ ಎಲ್ಲಾ ಸಮುದಾಯದೊಂದಿಗೆ ಬದುಕುತ್ತಿದೆ. ಆದರೆ ಇತ್ತೀಚೆಗೆ ಪುತ್ತೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪುತ್ತೂರಿನ ಪ್ರಸಿದ್ಧ ವೈದ್ಯರಾಗಿರುವ ಡಾ.ಪ್ರಸಾದ್ ಭಂಡಾರಿ ಅವರು ಕ್ರೈಸ್ತ ಸಮುದಾಯದ ಬಗ್ಗೆ ಹಾಗೂ ಶಿಕ್ಷಣ ಸಂಸ್ಥೆಗಳ ಬಗ್ಗೆ ಆಡಿರುವ ಮಾತುಗಳು ಮಾಧ್ಯಮಗಳ ಮೂಲಕ ತಿಳಿದಿದೆ. ಅವರ ಹೇಳಿಕೆಯಿಂದ ಕ್ರೈಸ್ತ ಸಮುದಾಯಕ್ಕೆ ತೀರಾ ನೋವಾಗಿದೆ. ಪುತ್ತೂರಿನಲ್ಲಿ ನಡೆಯುವ ಕ್ರೈಸ್ತ ಸಮುದಾಯದ ಕಾರ್ಯಕ್ರಮಗಳಿಗೆ ಅತ್ಯಂತ ಗೌರವದಿಂದ ಡಾ.ಪ್ರಸಾದ್ ಭಂಡಾರಿ ಅವರನ್ನು ಆಹ್ವಾನಿಸಿದಾಗಲೂ ಅವರು ಭಾಗವಹಿಸಿ ಮೆಚ್ಚುಗೆಯ ಮಾತುಗಳನ್ನಾಡಿದ್ದರು. ಕ್ರೈಸ್ತ ಸಮುದಾಯವೂ ಅವರನ್ನು ಗೌರವಿಸುತ್ತದೆ. ಪುತ್ತೂರಿನ ಕ್ರೈಸ್ತ ಸಮುದಾಯದ ಶಿಕ್ಷಣ ಸಂಸ್ಥೆಯ ಮೂಲಕ ವ್ಯಾಸಾಂಗ ಮಾಡಿರುವ ಹಲವಾರು ಮಂದಿ ಇಂದು ಉನ್ನತ ಹುದ್ದೆಯಲ್ಲಿದ್ದಾರೆ. ಡಿ ವಿ ಸದಾನಂದ ಗೌಡ, ಶೋಭಾ ಕರಂದ್ಲಾಜೆ ಸಹಿತ ಹಲವಾರು ಮಂದಿ ಪುತ್ತೂರಿನ ಶಿಕ್ಷಣ ಸಂಸ್ಥೆಯಲ್ಲಿ ವ್ಯಾಸಾಂಗ ಮಾಡಿದವರು. ಸ್ವತ: ಡಾ.ಪ್ರಸಾದ್ ಭಂಡಾರಿ ಅವರೂ ಕೂಡಾ ಕ್ರೈಸ್ತ ಶಿಕ್ಷಣ ಸಂಸ್ಥೆಯಲ್ಲಿ ಓದಿದವರು ಎನ್ನುವುದು ನಮ್ಮೆಲ್ಲರ ಹೆಮ್ಮೆಯೂ ಹೌದು. ಸಾಮಾಜಿಕ ಸೇವೆ ಹಾಗೂ ಕಾಳಜಿಯ ಕಾರಣಗಳಿಗಾಗಿ ಇಲ್ಲಿ ಜಮೀನು ಪಡೆಯಲಾಗಿದೆ. ಆದರೆ ಯಾವುದೇ ಸಮಸ್ಯೆಯನ್ನು ಇದುವರೆಗೂ ಮಾಡಿಲ್ಲ ಎಂದು ಕ್ರೈಸ್ತ ಸಮುದಾಯ ಅಭಿಪ್ರಾಯ ಪಟ್ಟಿದೆ. ಹೀಗಿದ್ದರೂ ಡಾ.ಪ್ರಸಾದ್ ಭಂಡಾರಿ ಅವರ ಹೇಳಿಕೆಯು ಕ್ರೈಸ್ತ ಸಮುದಾಯಕ್ಕೆ ತೀವ್ರ ನೋವು ತಂದಿದೆ ಎಂದು ಬೆಳ್ತಂಗಡಿ ಧರ್ಮಪ್ರಾಂತ್ಯದ ಶ್ರೀಸಾಮಾನ್ಯರ ಸಂಘಟನೆ “ ಕರ್ನಾಟಕ ಸೀರೊ ಮಲಬಾರ್ ಕ್ಯಥೊಲಿಕ್ ಎಸೊಸಿಯೇಷನ್( ಕೆ ಎಸ್ ಎಂ ಸಿ ಎ ) ಬೆಳ್ತಂಗಡಿ ಇದರ ಅಧ್ಯಕ್ಷರಾದ ಬಿಟ್ಟಿ ಬಿ ನೆಡುನಿಲಂ ಖಂಡನೆ ವ್ಯಕ್ತಪಡಿಸಿದ್ದಾರೆ.
ಬಿಟ್ಟಿ ನೆಡುನಿಲಂ ರವರ ಅಧ್ಯಕ್ಷತೆಯಲ್ಲಿ ನಡೆದ ಖಂಡನಾ ಸಭೆಯಲ್ಲಿ ಪ್ರಧಾನ ಕಾರ್ಯದಶಿ ಸೆಬಾಸ್ಟ್ಯನ್ ಎಂ ಜೆ, ನಿರ್ದೇಶಕರಾದ ಫಾ. ಷಾಜಿ ಮಾಥ್ಯು, ಜಿಮ್ಮಿ ಗುಂಡ್ಯ, ಸೆಬಾಸ್ಟನ್ ಪೊಕ್ಕಂತಾಡಿ, ರೀನಾಶಿಬಿ, ಅಲ್ಫೋನ್ಸಾ , ಜೋರ್ಜ್ ಟಿ ವಿ, ಹಾಗೂ ಪದಾಧಿಕಾರಿಗಳು ಭಾಗವಹಿಸಿದ್ದರು.
- Saturday
- November 23rd, 2024