ಯೇನೆಕಲ್ಲಿನಲ್ಲಿ ನೆಲೆನಿಂತಿರುವ ಬಚ್ಚನಾಯಕ ದೈವವು ಮೂಲತಃ ಇಲ್ಲಿಯದಲ್ಲ . ಆತನ ಅಂತ್ಯವಾಗಿರುವುದು ಯೇನೆಕಲ್ಲು ಮಾಗಣೆಯ ಬಾನಡ್ಕ ಎಂಬಲ್ಲಿ .ಆದರೆ ಆತನು ಅಕಾಸ್ಮತ್ತಾಗಿ ಹತನಾಗುತ್ತದೆ. ಆತನ ಪೂರ್ವ ಇತಿಹಾಸದ ಬಗ್ಗೆ ಅಧ್ಯಯನ ನಡೆಸುವ ಉzಶದಿಂದ ಆಸ್ತಕರ ತಂಡವೊಂದು ಬಚ್ಚನಾಯಕನ ಹುಟ್ಟೂರಿಗೆ ಭೇಟಿ ನೀಡಿದೆ . ತಂಡದಲ್ಲಿ ಪ್ರಸಿದ್ಧ ಜಾನಪದ ವಿದ್ವಾಂಸ ಶ್ರೀ ಪರ್ಲ ಆನಂದ ಗೌಡ, ಇತಿಹಾಸ ಸಂಶೋಧಕ ಎ.ಕೆ.ಹಿಮಕರ;, ಮಾಗಣೆ ಗೌಡ ಉದಯಕುಮಾರ್ ಬಾನಡ್ಕ, ಬಾನಡ್ಕ ಶಿವರಾಮ ಗೌಡ, ನಿವೃತ್ತ ಯೋಧ, ಬಾನಡ್ಕ ವಾಸುದೇವ ಗೌಡ, ಬಾನಡ್ಕ ಮನೋಜ್, ಉಡ್ದೋಳಿ ಬಾಲಕೃಷ್ಣ ಗೌಡರಿದ್ದರು.
ಅಪ್ರತಿಮ ಯೋಧ, ಸಾಹಸಿ, ಶೂರ, ಧೀರ ಎಂಬೆಲ್ಲಾ ಬಿರುದಾಂಶೀತ ಬಚ್ಚನಾಯಕನ ಹೆಸರು ಮೂಲದಲ್ಲಿ ಬಸ್ಯ ನಾಯಕನೆಂದೂ, ಗುರುತಿಸಲ್ಪಟ್ಟಿದೆ. ಈತನ ಹುಟ್ಟೂರು ಹಾಸನ ಕಿಲ್ಲೆಯ, ಈಗಿನ ಸಕಲೇಶಪುರ ತಾಲೂಕಿನ ಕಾಗಿನಹರೆ ಗ್ರಾಮ. ಇದು ಹಿಂದೆ ಐಗೂರು ಸೀಮೆಗೆ ಒಳಪಟ್ಟ ಪ್ರದೇಶವಾಗಿರುತ್ತದೆ. ಕಾಗಿನ ಹರೆಯು ಇಂದು ತೀರಾ ಕುಗ್ರಾಮದಂತಿದ್ದು ದಕ್ಷಿಣ ಕನ್ನಡ ಮತ್ತು ಹಾಸನ ಜಿಲ್ಲೆಯ ಗಡಿಭಾಗದಲ್ಲಿದೆ. ದಿನವಿಡೀ ಸುತ್ತುವ ಪ್ರಯಾಣಿಕರ ಸರಕಾರಿ ಬಸ್ ಕೊನೆಗೆ ತಂಗುವುದು ಇಲ್ಲಿ. ಸುತ್ತಲೂ ಬೋಳು ಗುಡ್ಡೆಗಳು. ಅಂತಹ ಗುಡ್ಡೆಯೊಂದರ ತುದಿಯಲ್ಲಿ ಕಾಡುಕಲ್ಲಿನಿಂದ ನಿರ್ಮಿಸಿಲಾದ ಕೋಟೆಯಿದೆ. ಕೆಳಭಾಗದಲ್ಲಿ ಅರಮನೆಯೆಂದು ಗುರುತಿಸಲಾಗುತ್ತಿರುವ ಕಟ್ಟಡವಿದ್ದ ಕುರುಹವನ್ನು ಹೊಂದಿರುವ ಸ್ಥಳವಿದೆ. ಬಚ್ಚನಾಯಕ ತಂದೆ ಕಾಗನೂರು ಮಲ್ಲನ ಗೌಡ, ತಾಯಿ ಲೇಲಾವತಿ, ಆತನ ಸಹೋದರರಾದ ಕೋಟಿನಾಟಕ, ನಾಗನಾಯಕ ಮತ್ತು ಅನಾಮದೇಯ ಸಹೋದರಿ (ಶಕೆಯ ಹೆಸರು ತಿಳಿದು ಬರುವುದಿಲ್ಲ) ಇಲ್ಲಿಯೇ ವಾಸಿಸಿದ್ದಿರಬಹುದೆಂದು ನಂಬಲಾಗಿದೆ. ಕೆಳಭಾಗದಲ್ಲಿ ಧಾರಾಳ ನೀರಾಶ್ರಯವಿರುವ ಹಡಿಲುಬಿಟ್ಟ ಗದ್ದೆಗಳಿವೆ. ಅದರಾಚೆಗೆ ಬಚ್ಚನಾಯಕನನ್ನು ಪಂಜ ಸೀಮೆಗೆ ಕರೆತಂದ ಅಮ್ಚೂರು ಮನೆ ನಿವೇಶನವಿದೆ. ಇವೆರಡೆರ ನಡುವೆ ತುಳುನಾಡಿನಲ್ಲಿ ಆರಾಧಿಸಲ್ಪಡುವ ನಾಲ್ಕು ದೈವಗಳ ಕಟ್ಟೆಗಳಿವೆ. ಸ್ಥಳೀಯ ವಕ್ತಾರರಾದ ಸುಬ್ರಹ್ಮಣ್ಯ ಗೌಡ, ಪೊನ್ನಂ ರಾಜು ಮೊದಲಾದವರು ಮಾಹಿತಿ ನೀಡಿ ಸಹಕರಿಸಿದರು. ಇಲ್ಲಿಗೆ ಅನತಿ ದೂರದಲ್ಲಿ ಮೇರ್‍ತಿ ಗುಡ್ಡೆ ಕಾಣಿಸುತ್ತದೆ. ಸಮುದ್ರ ಮಟ್ಟದಿಂದ ಸುಮಾರು ೪೦೦೮ ಅಡಿಗಳಷ್ಟು ಎತ್ತರವಿರುವ ಈ ಬೆಟ್ಟವನ್ನು ಕೊಂಬಾರಿನಿಂದಲೂ ನಾವು ಗಮನಿಸಬಹುದಾಗಿದೆ. ಕಾಗಿನಹರೆಯಿಂದ ಈ ಬೆಟ್ಟ ಸನಿಹದಲ್ಲಿ ಇಳಿದು ಬಂದರೆ ಮೊದಲು ಅಮ್ಚೂರು ಬೈಲು, ಕಟ್ಟೆ, ಮಣಿಮುಂಡ, ಹಾದುಬಂದು ಕೊಂಬಾರು ಗ್ರಾಮದ ಕೆಂಜಾಳವನ್ನು ಸೇರಬಹುದು.