ಮೌಲ್ಯಗಳು ವ್ಯಕ್ತಿಯನ್ನು ಆದರ್ಶ ವ್ಯಕ್ತಿಯಾಗಿ ರೂಪಿಸುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ನಮ್ಮ ದೈನಂದಿನ ಜೀವನಶೈಲಿಯನ್ನು ಮೌಲ್ಯಗಳೆನ್ನಬಹುದು. ಮಾನವೀಯ ಮೌಲ್ಯಗಳು ಬದುಕಿಗೆ ಅವಶ್ಯಕವಾಗಿದ್ದು ಯುವಜನರು ಅವುಗಳನ್ನು ತಮ್ಮಲ್ಲಿ ಅಳವಡಿಸಿಕೊಂಡು ಇತರರಿಗೆ ಮಾದರಿಯಾಗಬೇಕು. ಮೌಲ್ಯಗಳಿಲ್ಲದ ಜೀವನ ವ್ಯರ್ಥ ಅವುಗಳನ್ನು ಅಳವಡಿಸಿಕೊಂಡಾಗ ಜೀವನವು ಸಾರ್ಥಕ ಗೊಳ್ಳುವುದರಲ್ಲಿ ಸಂಶಯವಿಲ್ಲ.
ನಾವು ಜೀವನವೆಂಬ ಪಯಣದ ದೋಣಿಯಲ್ಲಿ ಆದರ್ಶ, ಶಿಸ್ತು, ಸಂಸ್ಕಾರ, ಆಚಾರ – ವಿಚಾರ, ಉತ್ತಮ ನಡವಳಿಕೆಗಳನ್ನು ಮೌಲ್ಯಗಳೆಂದು ಪರಿಗಣಿಸಬಹುದು. ಇವೆಲ್ಲಾವನ್ನು ಗುರು ಹಿರಿಯರಿಂದ ತಿಳಿದುಕೊಂಡಿರುತ್ತೇವೆ.ಆದರೂ ಇವುಗಳನ್ನು ಎಷ್ಟರಮಟ್ಟಿಗೆ ಅನುಸರಿಸುತ್ತೇವೆ ಎನ್ನುವುದು ಮುಖ್ಯ… ಮೌಲ್ಯಗಳನ್ನು ನಾವು ಅಂತರ್ಗತ ಮಾಡಿಕೊಂಡಾಗ ಅದು ಶಕ್ತಿಯುತವಾಗಿ ಬೆಳೆಯಲು ಸಾಧ್ಯವಾಗುವುದು. ಉದಾಹರಣೆಗೆ ತಮ್ಮಲ್ಲಿರುವ ಆಸೆ ಆಕಾಂಕ್ಷೆ ರಹಿತ ಗುಣ, ಸರಳ ಜೀವನ ಶೈಲಿ, ಬಡವರಿಗೆ ಸಹಾಯವನ್ನು ಮಾಡುವ ಮೌಲ್ಯಗಳನ್ನು ಅಳವಡಿಸಿಕೊಂಡಿರುವ ಆದರ್ಶಯುತ ವ್ಯಕ್ತಿಗಳೆಂದರೆ ಗಾಂಧೀಜಿ, ಡಾ / ಎ. ಪಿ. ಜೆ. ಅಬ್ದುಲ್ ಕಲಾಂ, ಮದರ್ ತೆರೇಸಾ ಇವರುಗಳ ಆದರ್ಶಯುತ ಗುಣಗಳು ಇಂದಿಗೂ ಅನುಕರಣೀಯವಾಗಿಸಿವೆ. ಇಂತಹ ಸದ್ಗುಣಗಳನ್ನು ತಮ್ಮಲ್ಲಿ ರೂಢಿಸಿಕೊಳ್ಳಬೇಕು.
ಮಾನವೀಯ ಮೌಲ್ಯಗಳು ಮಾಯವಾಗಲು ಪ್ರಮುಖ ಅಂಶಗಳೆಂದರೆ ಇಂದಿನ ಯುವ ಜನಾಂಗವು ಅದೆಷ್ಟೋ ಜನರ ಇತರರ ಪ್ರಭಾವಕ್ಕೆ ಒಳಗಾಗಿ ಭಯೋತ್ಪಾದನೆ, ಲೂಟಿ, ಕೊಲೆ ಸುಲಿಗೆಗಳಂತಹ ಪೈಶಾಚಿಕ ಕೃತ್ಯಕ್ಕೆ ಒಳಗಾಗುವುದರಿಂದ ಮಾನಸಿಕ ನೆಮ್ಮದಿ, ದೇಶದ ಪ್ರಗತಿ, ಶೈಕ್ಷಣಿಕ ಪ್ರಗತಿ ಕುಂಠಿತಗೊಳ್ಳುತ್ತಿದೆ. ಈಗಿನ ಆಧುನಿಕತೆಯಿಂದಾಗಿ ಮಾನವನು ಮಂಗಳ ಗ್ರಹಕ್ಕೆ ಕಾಲಿಡಲು ಪ್ರಯತ್ನಿಸುತ್ತಿದ್ದಾನೆ. ಆದರೆ ಶೋಚನೀಯವೆಂದರೆ ಮನುಷ್ಯನಲ್ಲಿರಬೇಕಾದ ಮಾನವೀಯ ಬಂಧಗಳು ಮಾಯವಾಗುತ್ತಿವೆ. ಇದಕ್ಕೆ ಮುಖ್ಯ ಕಾರಣವೆಂದರೆ ಮೌಲ್ಯಯುತ ಶಿಕ್ಷಣದ ಕೊರತೆ ಆದ್ದರಿಂದ ಮಕ್ಕಳಿಗೆ ಪಠ್ಯ ಪುಸ್ತಕದ ಜೊತೆಗೆ ಶಿಕ್ಷಕ – ವಿದ್ಯಾರ್ಥಿಗಳ ನಡುವೆ ಉತ್ತಮ ಸಹ ಸಂಬಂಧವನ್ನು ಬೆಳೆಸಿ ಶಾಲಾ ವಾತಾವರಣವನ್ನು ಸಹಕಾರಯುತವಾಗಿರುವಂತೆ ನೋಡಿಕೊಳ್ಳಬೇಕು. ಮಕ್ಕಳಲ್ಲಿ ವಿಶಾಲ ಮನೋಭಾವದ ಜೊತೆಗೆ ಅಹಿಂಸಾ ಪ್ರವೃತ್ತಿಯನ್ನು ಬೆಳೆಸಬೇಕು. ಆದ್ದರಿಂದ ಮೌಲ್ಯಗಳು ನಮ್ಮಲ್ಲಿ ಸಕಾರಾತ್ಮಕ ಶಕ್ತಿಯನ್ನು ಬೆಳೆಸಲು ಮತ್ತು ದುರಭ್ಯಾಸಗಳಿಂದ ದೂರವಿರಲು ಸಹಕಾರಿಯಾಗಿವೆ. ಈ ನಿಟ್ಟಿನಲ್ಲಿ ಯುವ ಸಮುದಾಯವನ್ನು ಮುನ್ನಡೆಸಲು ಮೌಲ್ಯಗಳು ಇಂದು ಅಗತ್ಯವಾಗಿದೆ.
ಕಿಶನ್. ಎಂ
ಪವಿತ್ರನಿಲಯ ಪೆರುವಾಜೆ.. ✍️