



ಬದುಕಿನಲ್ಲಿ ಭಯ ಭಕ್ತಿಯನ್ನು ಬೆಳೆಸಿಕೊಂಡಾಗ ನೆಮ್ಮದಿಯ ಜೀವನ ನಡೆಸಲು ಸಾಧ್ಯ ಎಂದು ಸಚಿವರಾದ ಎಸ್. ಅಂಗಾರ ಹೇಳಿದರು.
ಅವರು ಕಂದ್ರಪ್ಪಾಡಿ ಶ್ರೀ ರಾಜ್ಯದೈವ ಮತ್ತು ಪುರುಷ ದೈವ ದೈವಸ್ಥಾನದ ಜಾತ್ರೋತ್ಸವದ ಅಂಗವಾಗಿ ಮಾ.14 ರಂದು ನಡೆದ ಅಭಿನಂದನಾ ಸಮಾರಂಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಪ್ರತಿಭೆಗಳನ್ನು ಗೌರವಿಸಿ ಮಾತನಾಡಿದರು.
ಜನರಲ್ಲಿ ಭಯ ಭಕ್ತಿಯನ್ನು ಬೆಳೆಸಿಕೊಳ್ಳಲು ದೈವಸ್ಥಾನಗಳು ಕಾರಣಕರ್ತವಾಗಿದೆ. ಇಂದು ಮನಪೂರ್ವಕವಾದ ಭಯ ಭಕ್ತಿ ಮೂಡಬೇಕಾಗಿದೆ. ಅಧಿಕಾರ ಎನ್ನುವುದು ಕರ್ತವ್ಯ ಎಂದು ತಿಳಿದು ಭಯ ಭಕ್ತಿ ಇದ್ದಾಗ ಮಾತ್ರ ನೆಮ್ಮದಿ ಕಾಣಲು ಸಾಧ್ಯ ಎಂದರು.
ಕುಟುಂಬದ ದೈವಸ್ಥಾನ, ತರವಾಡು ಮನೆಗಳ ಅಭಿವೃದ್ಧಿ ಸಂದರ್ಭ ಪ್ರತಿಷ್ಠೆಯನ್ನು ಬದಿಗೊತ್ತಿ ಆಚರಣೆಗಳು ಮುಂದೆಗೆ ತೊಂದರೆಯಾಗದಂತೆ ಗಮನ ಹರಿಸುವ ಅಗತ್ಯವಿದೆ ಎಂದು ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಎ.ವಿ.ತೀರ್ಥರಾಮ ಅಭಿಪ್ರಾಯಪಟ್ಟರು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕಾಳಿಕಾ ಪ್ರಸಾದ್ ಮುಂಡೋಡಿ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಕುಕ್ಕೆ ಶೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್ ರಾಮ್ ಸುಳ್ಳಿ , ರಾಜ್ಯ ದೈವ ಮತ್ತು ಪುರುಷ ದೈವ ದೈವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ದೇವಚಳ್ಳ ಗ್ರಾ.ಪಂ.ಅಧ್ಯಕ್ಷೆ ಶ್ರೀಮತಿ ಸುಲೋಚನ ದೇವ ಹಾಗೂ ವ್ಯವಸ್ಥಾಪನಾ ಸಮಿತಿ ಸದಸ್ಯರುಗಳು ಉಪಸ್ಥಿತರಿದ್ದರು.
ನಿರಂಜನಾ ಕಡ್ಲಾರ್ ಸಾಹಿತ್ಯದಲ್ಲಿ ಮೂಡಿಬಂದ ದೈವಸ್ಥಾನದ ಭಕ್ತಿಗೀತೆಯನ್ನು ಸಚಿವರು ಈ ಸಂದರ್ಭದಲ್ಲಿ ಬಿಡುಗಡೆಗೊಳಿಸಿದರು. ರಾಜ್ಯ ಪ್ರಶಸ್ತಿ ಪುರಸ್ಕೃತ ರಮೇಶ್ ಮೆಟ್ಟಿನಡ್ಕ, ಕರಾಟೆ ಪಟು ಚೇತನ್ ಮುಂಡೋಡಿ ಹಾಗೂ ನಿರಂಜನ ಕಡ್ಲಾರು ಅವರನ್ನು ಸಚಿವರು ಸನ್ಮಾನಿಸಿದರು.
ಶಾಲಾ ಮಕ್ಕಳು, ಅಂಗನವಾಡಿ ಮಕ್ಕಳು ಹಾಗೂ ಊರವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು.
ಕಾಳಿಕಾ ಪ್ರಸಾದ್ ಮುಂಡೋಡಿ ಸ್ವಾಗತಿಸಿ, ದಿವಾಕರ ಮುಂಡೋಡಿ ವಂದಿಸಿದರು. ವಿನಯಕುಮಾರ್ ಮುಳುಗಾಡು ನಿರೂಪಿಸಿದರು.