ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದ ಉಪ ಮುಖ್ಯಮಂತ್ರಿ ಅಶ್ವಥ್ ನಾರಾಯಣ್
ಕುಕ್ಕೆ ಸುಬ್ರಹ್ಮಣ್ಯದ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ರಾಜ್ಯದ ಉಪಮುಖ್ಯಮಂತ್ರಿ, ಉನ್ನತ ಶಿಕ್ಷಣ , ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ, ಜೀವನೋಪಾಯ ಇಲಾಖಾ ಸಚಿವ ಡಾ.ಅಶ್ವಥ್ ನಾರಾಯಣ್ ಸಿ.ಎನ್. ಮಂಗಳವಾರ ಕುಟುಂಬ ಸಮೇತರಾಗಿ ಭೇಟಿ ನೀಡಿದರು. ಶ್ರೀ ಕ್ಷೇತ್ರಕ್ಕೆ ಆಗಮಿಸಿದ ಉಪಮುಖ್ಯಮಂತ್ರಿಗಳನ್ನು ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ ಸ್ವಾಗತಿಸಿದರು. ಬಳಿಕ ಶ್ರೀ ದೇವಳದಲ್ಲಿ ಅವರು ಆಶ್ಲೇಷ ಬಲಿ ಮತ್ತು ಪಂಚಾಮೃತ ಮಹಾಭಿಷೇಕ ಸೇವೆ ನೆರವೇರಿಸಿದರು. ಹೆಲಿಕಾಪ್ಟರ್ ಮೂಲಕ ಬಿಳಿನೆಲೆ ಶ್ರೀ ಗೋಪಾಲಕೃಷ್ಣ ಶಾಲಾ ಮೈದಾನದಲ್ಲಿ ಬಂದಿಳಿದ ಅವರು ಬಳಿಕ ಕಾರಿನ ಮೂಲಕ ಕುಕ್ಕೆಗೆ ಪ್ರಯಾಣಿಸಿದರು. ಶ್ರೀ ದೇವಳಕ್ಕೆ ಆಗಮಿಸಿದ ಸಚಿವರು ಶ್ರೀ ದೇವರ ದರುಶನ ಪಡೆದರು. ಬಳಿಕ ಸಂಕಲ್ಪ ನೆರವೇರಿಸಿ ಆಶ್ಲೇಷ ಬಲಿ ಸೇವೆ ಸಮರ್ಪಿಸಿದರು.ನಂತರ ಪಂಚಾಮೃತ ಮಹಾಭಿಷೇಕ ಸೇವೆ ನೆರವೇರಿಸಿದರು. ಬಳಿಕ ಶ್ರೀ ದೇವರ ಮಹಾಪೂಜೆ ವೀಕ್ಷಿಸಿ ಪ್ರಸಾದ ಸ್ವೀಕರಿಸಿದರು. ಶ್ರೀ ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಸೀತಾರಾಮ ಎಡಪಡಿತ್ತಾಯರು ಉಪಮುಖ್ಯಮಂತ್ರಿಗಳಿಗೆ ಶಾಲು ಹೊದಿಸಿ ಶ್ರೀ ದೇವರ ಮಹಾಪ್ರಸಾದ ನೀಡಿದರು.ಬಳಿಕ ಶ್ರೀ ದೇವಳದಲ್ಲಿ ಪ್ರಸಾದ ಬೋಜನ ಸ್ವೀಕರಿಸಿದರು.ನಂತರ ಹೊಸಳಿಗಮ್ಮನ ದರುಶನ ಪಡೆದು ಪ್ರಸಾದ ಸ್ವೀಕರಿಸಿದರು. ಅಶ್ವಥ್ ನಾರಾಯಣ್ ಅವರೊಂದಿಗೆ ಅವರ ಪತ್ನಿ ಶೃತಿ ಅಶ್ವಥ್ ನಾರಾಯಣ್, ಪುತ್ರಿ ಆಕಾಂಕ್ಷ, ಪುತ್ರ ಅಮೋಘ್, ಸಹೋದರ ಸತೀಶ್ ಆಗಮಿಸಿದ್ದರು. ಬಳಿಕ ಶ್ರೀ ದೇವಳದ ಆಡಳಿತ ಕಚೇರಿಗೆ ಆಗಮಿಸಿದ ಉಪಮುಖ್ಯಮಂತ್ರಿಗಳನ್ನು ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ ಶಾಲು ಹೊದಿಸಿ ಶ್ರೀ ದೇವರ ಪ್ರಸಾದ ನೀಡಿ ಗೌರವಿಸಿದರು.ಈ ಸಂದರ್ಭ ದೇವಳದ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಪುಷ್ಪಲತಾ ರಾವ್, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಪ್ರಸನ್ನ ದರ್ಬೆ, ಶೋಭಾ ಗಿರಿಧರ್,ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯ ಮನೋಜ್ ಸುಬ್ರಹ್ಮಣ್ಯ, ಮೀನುಗಾರಿಕಾ ನಿಗಮದ ಅಧ್ಯಕ್ಷ ಎ.ವಿ.ತೀರ್ಥರಾಮ, ಗ್ರಾ.ಪಂ.ಸದಸ್ಯೆ ಭಾರತಿ ದಿನೇಶ್, ಲೋಕೋಪಯೋಗಿ ಅಭಿಯಂತರ ಪ್ರಮೋದ್ ಕುಮಾರ್, ದೇವಸ್ಥಾನದ ಶಿಷ್ಠಚಾರ ಅಧಿಕಾರಿ ಜಯರಾಮ ರಾವ್, ಶಿಷ್ಠಾಚಾರ ವಿಭಾಗದ ಕೆ.ಎಂ.ಗೋಪಿನಾಥ್ ನಂಬೀಶನ್, ಪ್ರಮೋದ್ ಕುಮಾರ್ ಎಸ್, ನವೀನ್, ಸುಬ್ರಹ್ಮಣ್ಯ ಠಾಣಾಧಿಕಾರಿಗಳಾದ ಮಂಜುನಾಥ್ ಎಸ್.ಟಿ, ಮುರಳೀಧರ್, ಎಎಸ್‌ಐ ಕರುಣಾಕರ್ ಉಪಸ್ಥಿತರಿದ್ದರು.