ಇವತ್ತು ಹೀಗೆ ವಾಟ್ಸಾಪ್ ಸ್ಟೇಟಸ್ ನೋಡುತ್ತಿರುವಾಗ ಗೆಳೆಯರೊಬ್ಬರ ಸ್ಟೇಟಸ್ ನಲ್ಲಿ ಒಂದು ವಾಕ್ಯವನ್ನು ನೋಡಿದೆ. ಆ ವಾಕ್ಯ ಹೀಗಿತ್ತು “ಇಲ್ಲಿ ಸಿಗುವ ಪಾತ್ರಕ್ಕಿಂತ ಅವಕಾಶ ದೊಡ್ಡದು” ಅಂತ…
ಈ ವಾಕ್ಯ ಅದೆಷ್ಟು ನಿಜ ಅಲ್ವಾ… ಏಕೆಂದರೆ ಪ್ರತಿಯೊಬ್ಬರಿಗೂ ಕೂಡ ಜೀವನದಲ್ಲಿ ಏನಾದ್ರೂ ಸಾಧಿಸ್ಬೇಕು ಅನ್ನೋ ಹಠ ಇರುತ್ತದೆ, ಹಠ ಇದ್ದವನಿಗೆ ಅವಕಾಶಗಳು ಕೂಡ ಸಿಕ್ಕೇ ಸಿಗುತ್ತವೆ. ಆ ಅವಕಾಶದಲ್ಲಿ ನಮ್ಮ ಪಾತ್ರ ಚಿಕ್ಕದೇ ಇರಬಹುದು ಅಥವಾ ದೊಡ್ಡದೇ ಇರಬಹುದು. ನಾವು ಪಾತ್ರವನ್ನು ನೋಡಿ ಆ ಅವಕಾಶವನ್ನು ಎಂದಿಗೂ ತಿರಸ್ಕರಿಸಬಾರದು. ಏಕೆಂದರೆ ದೊಡ್ಡವರು ಹೇಳಿದ “ಮಿಂಚಿ ಹೋದ ಸಮಯಕ್ಕೆ ಚಿಂತಿಸಿ ಫಲವಿಲ್ಲ” ಎಂಬ ಮಾತಿನಂತೆ ನಾವು ನಮಗೆ ಸಿಕ್ಕ ಅವಕಾಶವನ್ನು ತಿರಸ್ಕರಿಸಿದರೆ ಮತ್ತೆ ನಮಗೆ ಅಂತಹ ಅವಕಾಶ ಸಿಗುತ್ತದೆ ಎನ್ನುವ ಖಾತ್ರಿ ಇಲ್ಲ. ಆದ್ದರಿಂದ ನಾವು ಜೀವನದಲ್ಲಿ ಸಾಧಿಸ್ಬೇಕು ಎಂದು ತೀರ್ಮಾನಿಸಿದ ಮೇಲೆ ಪಾತ್ರಗಳ ಬಗ್ಗೆ ಚಿಂತಿಸದೇ ಸಿಕ್ಕ ಅವಕಾಶಗಳನ್ನು ಸ್ವೀಕರಿಸಿ ಆ ಅವಕಾಶದಲ್ಲಿ ನಮ್ಮ ಪಾತ್ರ ದೊಡ್ಡದಾಗಿದ್ದರೂ ಅಥವಾ ಚಿಕ್ಕದಾಗಿದ್ದರೂ ನಾವು ನಮ್ಮ ಪಾತ್ರವನ್ನು ಸಮರ್ಥವಾಗಿ ನಿರ್ವಹಿಸಿ ಮುನ್ನಡೆದರೆ ಮುಂದೊಂದು ದಿನ ನಮ್ಮ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕೇ ಸಿಗುತ್ತದೆ.
ಈ ಜಗತ್ತಿನಲ್ಲಿ ಯಾವೊಬ್ಬ ಸಾಧಕನೂ ಕೂಡ ಒಮ್ಮಿಂದೊಮ್ಮೆಲೇ ಸಾಧಿಸಿ ಸಾಧಕನಾಗಿಲ್ಲ. ಅವನ ಆ ಸಾಧನೆಯ ಹಿಂದೆ ಹಲವಾರು ವರ್ಷಗಳ ಕಠಿಣ ಪರಿಶ್ರಮವಿದೆ. ಅವನೂ ಕೂಡ ತನಗೆ ಸಿಕ್ಕ ಪ್ರತಿಯೊಂದು ಅವಕಾಶಗಳನ್ನು ತಿರಸ್ಕರಿಸದೇ ಆ ಅವಕಾಶದಲ್ಲಿನ ತನ್ನ ಪಾತ್ರವನ್ನು ಸಮರ್ಥವಾಗಿ ನಿರ್ವಹಿಸಿ ಇಂದು ಸಾಧಕನಾಗಿ ನಿಂತಿದ್ದಾನೆ. ಆದ್ದರಿಂದ ನಾವು ಜೀವನದಲ್ಲಿ ಏನಾದರೂ ಸಾಧಿಸಲು ಹೊರಟಾಗ ನಮಗೆ ಸಿಕ್ಕ ಪಾತ್ರಗಳ ಬಗ್ಗೆ ಚಿಂತಿಸದೇ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳೋಣ…
✍️ಉಲ್ಲಾಸ್ ಕಜ್ಜೋಡಿ