ದ.ಕ. ಜಿಲ್ಲಾ ಗೃಹರಕ್ಷಕ ದಳದ ಪೊಲೀಸ್ ಅಧೀಕ್ಷಕರ ವ್ಯಾಪ್ತಿಯಲ್ಲಿ ಬರುವ ಘಟಕಗಳಿಗೆ ಚುನಾವಣಾ ಪೂರ್ವಸಿದ್ಧತಾ ತಯಾರಿ ಸಲುವಾಗಿ 25 ಗೃಹರಕ್ಷಕರನ್ನು ಸಿ ಫಾರಂ ನೀಡಿ ಫೆ.28ರಂದು ನೇಮಕ ಮಾಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು ರವರು ವಹಿಸಿ ಮಾತನಾಡಿ ಶಿಸ್ತುಬದ್ಧವಾಗಿ ಇಲಾಖಾ ನಿಯಮಾನುಸಾರ ಸಮವಸ್ತ್ರ ಧರಿಸಿ ಹಾಗೂ ಜವಾಬ್ದಾರಿಯುತವಾಗಿ ಕಾನೂನು ಸುವ್ಯವಸ್ಥೆ ಕರ್ತವ್ಯ ಮಾಡುವಂತೆ ಸೂಚಿಸಿದರು. ಮುಂಬರುವ ಚುನಾವಣಾ ಕರ್ತವ್ಯಕ್ಕೆ ಕಡ್ಡಾಯವಾಗಿ ಹಾಜರಾಗುವಂತೆ ಸೂಚಿಸಿದರು. 10 ದಿನಗಳ ಮೂಲತರಬೇತಿ ಶಿಬಿರವನ್ನು ಆಯೋಜಿಸಲಾಗುವುದು. ಸದರಿ ತರಬೇತಿ ಶಿಬಿರದಲ್ಲಿ ಪ್ರಥಮ ಚಿಕಿತ್ಸೆ ತರಬೇತಿ, ಸಂಚಾರಿ ನಿಯಂತ್ರಣ, ಮೂಲ ಅಗ್ನಿಶಮನ ತರಬೇತಿ, ರೈಫಲ್ ಡ್ರಿಲ್ ತರಬೇತಿ ಮುಂತಾದ ಸಮಗ್ರ ತರಬೇತಿಗಳನ್ನು ನೀಡಲಾಗುವುದು ಎಂದು ವಿವರಿಸಿದರು. ಸಮವಸ್ತ್ರವನ್ನು ಎಲ್ಲೂ ದುರುಪಯೋಗಪಡಿಸಿಕೊಳ್ಳದಂತೆ ಎಚ್ಚರಿಕೆಯನ್ನು ನೀಡಿದರು. ಉಪಸಮಾದೇಷ್ಟ ರಮೇಶ್ ರವರು ಹೊಸದಾಗಿ ನೇಮಕಗೊಂಡ ಗೃಹರಕ್ಷಕರಿಗೆ ಇಲಾಖಾ ನಿಯಮಗಳ ಬಗ್ಗೆ ಮಾಹಿತಿ ನೀಡಿ ತರಬೇತಿಯನ್ನು ನೀಡಿದರು. ಈ ಸಂದರ್ಭದಲ್ಲಿ ಕಛೇರಿ ಅಧೀಕ್ಷಕರಾದ ಶ್ರೀಮತಿ ಕವಿತಾ ಕೆ.ಸಿ,, ಪ್ರಥಮ ದರ್ಜೆ ಸಹಾಯಕಿ ಶ್ರೀಮತಿ ಅನಿತಾ ಟಿ.ಎಸ್, ಮುಂತಾದವರು ಉಪಸ್ಥಿತರಿದ್ದರು.
- Wednesday
- December 4th, 2024