ರಕ್ತದಾನ ಜೀವ ಉಳಿಸುವುದರ ಜೊತೆಗೆ ರಕ್ತದಾನಿಗಳ ಆರೋಗ್ಯವನ್ನು ಕಾಪಾಡುತ್ತದೆ. ಆ ನಿಟ್ಟಿನಲ್ಲಿ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವದ ಆಚರಣೆಯ ಈ ಸಂದರ್ಭದಲ್ಲಿ ರಕ್ತದಾನ ಶಿಬಿರವನ್ನು ಏರ್ಪಡಿಸುವ ಮೂಲಕ ಯುವ ರೆಡ್ ಕ್ರಾಸ್ ಘಟಕದ ಕಾರ್ಯ ಅವಿಸ್ಮರಣೀಯವಾಗಿದೆ
ಎಂದು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್ ನ ಅಧ್ಯಕ್ಷರಾದ ಡಾ. ಕೆ. ವಿ ಚಿದಾನಂದ ಅವರು ಅಭಿಪ್ರಾಯಪಟ್ಟರು. ಅವರು ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಯುವ ರೆಡ್ ಕ್ರಾಸ್ ಘಟಕದ ವತಿಯಿಂದ 75ನೇ ಸ್ವಾತಂತ್ರೋತ್ಸವ ಪ್ರಯುಕ್ತ ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಸಹಯೋಗದೊಂದಿಗೆ ಕೆವಿಜಿ ರಕ್ತದಾನ ಕೇಂದ್ರದಲ್ಲಿ ಹಮ್ಮಿಕೊಂಡ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡುವ ಮೂಲಕ ನಿಮ್ಮ ಆರೋಗ್ಯ ವೃದ್ಧಿಯಾಗುವುದರೊಂದಿಗೆ ಇತರರಿಗೆ ಜೀವದಾನ ಮಾಡಿದ ಒಳ್ಳೆಯ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಂತಾಗುತ್ತದೆ ಎಂದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಡೀನ್ ಡಾ. ನೀಲಂಬಿಕೈ ನಟರಾಜನ್, ಬ್ಲಡ್ ಬ್ಯಾಂಕ್ ಇನ್ಚಾರ್ಜ್ ಆಫೀಸರ್ ಗಳಾದ ಡಾ. ಗೋಪಿನಾಥ ರಾಜೇಶ್ ಹಾಗೂ ಡಾ. ನವ್ಯಾ ಬಿ ಎನ್, ನೆಹರೂ ಮೆಮೋರಿಯಲ್ ಕಾಲೇಜಿನ ಶೈಕ್ಷಣಿಕ ಸಲಹೆಗಾರ ಬಾಲಚಂದ್ರ ಗೌಡ ಕೆ, ಕ್ಯಾಂಪಸ್ ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ಜವರೇಗೌಡ ಡಿ, ಕಾಲೇಜಿನ ಪ್ರಾಂಶುಪಾಲ ರುದ್ರಕುಮಾರ್ ಎಂ ಎಂ, ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ತಿಪ್ಪೇಸ್ವಾಮಿ ಡಿ ಹೆಚ್, ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಸಿಬ್ಬಂದಿ ವರ್ಗ, ರೆಡ್ ಕ್ರಾಸ್ ಸದಸ್ಯರು, ರಕ್ತದಾನಿಗಳು ಮೊದಲಾದವರು ಉಪಸ್ಥಿತರಿದ್ದರು. ಯುವ ರೆಡ್ ಕ್ರಾಸ್ ಘಟಕದ ಕಾರ್ಯಕ್ರಮಾಧಿಕಾರಿ ಡಾ. ಅನುರಾಧಾ ಕುರುಂಜಿಯವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿ, ಯುವ ರೆಡ್ ಕ್ರಾಸ್ ಸದಸ್ಯ ಪುನೀತ್ ಕುಮಾರ್ ರಕ್ತದಾನ ಮಾಡುವ ಮೂಲಕ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಲಾಯಿತು. ಕಾಲೇಜಿನ ರೆಡ್ ಕ್ರಾಸ್ ಘಟಕದ ವತಿಯಿಂದ ಸಂಗ್ರಹಿಸಿದ 134 ಜನ ರಕ್ತದಾನಿಗಳ ಪಟ್ಟಿಯನ್ನು ಅಗತ್ಯ ಬಿದ್ದಾಗ ರಕ್ತದಾನ ಮಾಡಲು ಪ್ರಾಂಶುಪಾಲರು ಡಾ. ಕೆ. ವಿ ಚಿದಾನಂದ ಅವರಿಗೆ ಹಸ್ತಾಂತರಿಸಿದರು. ಕೆ ವಿ ಜಿ ಮೆಡಿಕಲ್ ಕಾಲೇಜಿನ ಸಾರ್ವಜನಿಕ ಸಂಪರ್ಕ ಅಧಿಕಾರಿಗಳಾದ ಕೌಶಲ್ ಮತ್ತು ಶಶಿಧರ ಹಾಗೂ ಕಾಲೇಜಿನ ರೆಡ್ ಕ್ರಾಸ್ ಸದಸ್ಯರು ಸಹಕರಿಸಿದರು.
- Friday
- November 1st, 2024