ಅಧಿಕಾರಿಗಳ ಬೇಜವಾಬ್ದಾರಿಯಿಂದ ನೀರಿನ ಬಿಲ್ ಅನ್ನು ಹಲವು ವರ್ಷಗಳಾದರೂ ನ.ಪಂ. ನಿಂದ ವಸೂಲಿ ಮಾಡಲು ಸಾಧ್ಯವಾಗಿಲ್ಲ. ೧.೫ ಕೋಟಿ ನೀರಿನ ಬಿಲ್ ಸೇರಿದಂತೆ ಹಲವು ಬಿಲ್‌ಗಳು ವಸೂಲಿಯಾಗಲು ಬಾಕಿಯಿದೆ. ಇನ್ನು ಒಂದು ತಿಂಗಳೊಳಗೆ ಬಿಲ್ ವಸೂಲಾತಿಯಾಗದಿದ್ದರೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ನ.ಪಂ. ಅಧ್ಯಕ್ಷ ವಿನಯ್ ಕುಮಾರ್ ಕಂದಡ್ಕ ಎಚ್ಚರಿಕೆ ನೀಡಿದರು.
ಸುಳ್ಯ ನ.ಪಂ. ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕೆಲವು ಮನೆಗಳಲ್ಲಿ ಕಳೆದ ೧೦ ವರ್ಷಗಳಿಂದ ವಾಸವಿಲ್ಲದಿದ್ದದವರಿಗೂ ನಿರಂತರ ಬಿಲ್ ಮಾಡಿ ೩೩,೦೦೦ ಬಿಲ್ ಮಾಡಲಾಗಿದೆ. ಈ ರೀತಿಯ ಹಲವು ಗೊಂದಲಗಳಿವೆ ಎಂದರು. ನ.ಪಂ. ಸದಸ್ಯ ಎಂ.ವೆಂಕಪ್ಪ ಗೌಡ ಮಾತನಾಡಿ ಅಧಿಕಾರಿಗಳ ನಿರ್ಲಕ್ಷದಿಂದ ಅಭಿವೃದ್ಧಿಗೆ ತೊಡಕಾಗಿ ಪರಿಣಮಿಸುತ್ತಿದೆ. ಒಂದು ತಿಂಗಳ ಒಳಗಾಗಿ ಬಿಲ್ ವಾಪಸಾತಿ ಮಾಡಲಾಗದಿದ್ದರೆ ಅಽಕಾರಿಗಳ ವೇತನದಿಂದ ಬಿಲ್‌ನ್ನು ವಸೂಲಾತಿ ಮಾಡುವ ಕ್ರಮ ಕೈಗೊಳ್ಳಬೇಕು ಎಂದರು.
ಕೆ.ಎಸ್.ಉಮ್ಮರ್ ಮಾತನಾಡಿ ಕಳೆದ ಎರಡು ವರ್ಷದಿಂದ ತನ್ನ ವಾರ್ಡ್ ಗೆ ಒಂದು ರೂ ಅನುದಾನ ಬಂದಿಲ್ಲ. ಜನರು ನಮ್ಮನ್ನು ಪ್ರಶ್ನಿಸುತ್ತಿದ್ದಾರೆ. ಈ ಬಾರಿ ೧೦ ಲಕ್ಷ ರೂ ಅನುದಾನ ನೀಡದಿದ್ದಾರೆ ನಗರ ಪಂಚಾಯತ್ ಸಭೆಯಲ್ಲಿ ಧರಣಿ ನಡೆಸುತ್ತೇನೆ ಎಂದು ವಿಪಕ್ಷ ಸದಸ್ಯ ಕೆ.ಎಸ್.ಉಮ್ಮರ್ ಹೇಳಿದರು.
ಬಿ.ಎಸ್.ಯಡಿಯೂರಪ್ಪ ಅವಧಿಯಲ್ಲಿ ದ.ಕ.ಜಿಲ್ಲೆಗೆ ೯೫ ಕೋಟಿ ವಿಶೇಷ ಅನುದಾನ ನೀಡಿದ್ದಾರೆ.ಆದರೆ ಆ ಪಟ್ಟಿಯಲ್ಲಿ ಸುಳ್ಯದ ಹೆಸರಿಲ್ಲ, ಸುಳ್ಯಕ್ಕೆ ಈ ವಿಶೇಷ ಅನುದಾನ ಯಾಕೆ ದೊರೆತಿಲ್ಲ ಎಂದು ಅವರು ಪ್ರಶ್ನಿಸಿದರು.
ಕಲ್ಚರ್ಪೆಯಲ್ಲಿನ ಕಸ ತ್ಯಾಜ್ಯದ ನಿರ್ವಹಣೆಗಾಗಿ ೯೦ ಸೆಂಟ್ಸ್ ಜಾಗಕ್ಕಾಗಿ ಇದುವರೆಗೆ ೧ಕೋಟಿ ೨೩ ಲಕ್ಷ ದ ೫೦ ಸಾವಿರ ರೂ. ಖರ್ಚಾಗಿದೆ. ಆದ್ದರಿಂದ ಕಲ್ಚರ್ಪೆಯಲ್ಲಿರುವ ಪಂಚಾಯತ್ ನ ಕಸ ವಿಲೇವಾರಿ ಘಟಕದ ಸ್ಥಳವನ್ನು ಸ್ವಾಧೀನಪಡಿಸಬೇಕು ಎಂದು ಉಮ್ಮರ್ ಹೇಳಿದರು. ೩ ಎಕ್ರೆ ಸ್ಥಳ ಮಂಜೂರಾಗಿದ್ದರೂ ಗಡಿ ಗುರುತು ಆಗಿಲ್ಲ ಎಂದು ಅಧ್ಯಕ್ಷ ರು ಹೇಳಿದರು. ಕಂದಾಯ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳನ್ನು ಸೇರಿಸಿ ಜಂಟಿ ಸರ್ವೆ ಮಾಡಿಸಬೇಕು ಎಂದು ವೆಂಕಪ್ಪ ಗೌಡ ಸಲಹೆ ನೀಡಿದರು.
ಸುಳ್ಯ ನಗರದ ಮೀನು ಮಾರುಕಟ್ಟೆಯಲ್ಲಿ ಮೀನಿನ ಬೆಲೆ ಗಗನಕ್ಕೆ ಏರಿದೆ. ಬಂಗುಡೆಗೆ ಕೆ.ಜಿ.ಗೆ ೪೦೦ರೂ ಆಗಿದ್ದು ಚಿನ್ನದ ಬೆಲೆ ಆಗಿದೆ.ಇದಲ್ಲದೆ ಟೆಂಡರ್ ಪ್ರಕ್ರಿಯೆಯಲ್ಲೂ ಲಾಭಿಗಳಾಗುತ್ತಿದೆ. ಸಾಮಾನ್ಯರು ಟೆಂಡರ್ ಪಡೆಯಲು ಹೋದರೆ ಅದಕ್ಕೂ ತಡೆ ತರುವ ಕಾರ್ಯ ಆಗುತ್ತಿದೆ ಇದರ ಕುರಿತು ಸೂಕ್ತ ಕ್ರಮ ಆಗಬೇಕು ಎಂದು ಎಂ.ವೆಂಕಪ್ಪ ಗೌಡ ಹೇಳಿದರು. ಇದರಿಂದ ಜನ ಸಾಮಾನ್ಯರಿಗೆ ತೀವ್ರ ತೊಂದರೆ ಆಗಿದೆ. ಮೀನಿನ ಸ್ಟಾಲ್ ಗಳು ಕಡಿಮೆ ಆದ ಕಾರಣ ಬೆಲೆ ಏರಿದೆ. ಹೆಚ್ಚು ಸ್ಟಾಲ್ ಗಳನ್ನು ಹೆಚ್ಚಿಸಿ ಎಂದರು. ಮೀನುಗಾರಿಕಾ ಸಚಿವರ ಊರಿನಲ್ಲೇ ಮೀನಿಗೆ ಚಿನ್ನದ ಬೆಲೆ ಆಗಿದೆ ಎಂದು ಸದಸ್ಯರು ಹೇಳಿದರು.
ಕೊರೊನಾ ಲಸಿಕೆ ಸಮಸ್ಯೆ ಪರಿಹಾರಕ್ಕೆ ಕ್ರಮ: ಸದ್ಯ ಪುರಭವನದಲ್ಲಿ ನೀಡುತ್ತಿರುವ ಲಸಿಕೆಯ ವೇಳೆ ಸಾರ್ವಜನಿಕರಿಗೆ ತೊಂದರೆಗಳಾಗುತ್ತಿವೆ. ನ.ಪಂ. ಈ ಕುರಿತು ಸೂಕ್ತ ಮಾಹಿತಿ ನೀಡಬೇಕು ಎಂದು ಸದಸ್ಯರು ಆಗ್ರಹಿಸಿದರು. ಆರೋಗ್ಯ ಅಧಿಕಾರಿ ಮಾತನಾಡಿ ಸೂಕ್ತವಾದ ಕ್ರಮ ಕೈಗೊಳ್ಳುತ್ತೇವೆ ಎಂದರು.
ಇದಲ್ಲದೇ ಕೊರೊನಾ ನಿರ್ವಹಣೆ, ಚರಂಡಿ ದುರಸ್ತಿ,ರಸ್ತೆ ಕಾಮಗಾರಿಗಳ ಕುರಿತು ಚರ್ಚೆಗಳು ನಡೆದವು.
ಈ ಸಂದರ್ಭ ನ.ಪಂ. ಮುಖ್ಯಾಧಿಕಾರಿ ಎಂ.ಆರ್.ಸ್ವಾಮಿ,ನ.ಪಂ. ಉಪಾಧ್ಯಕ್ಷೆ ಸರೋಜಿನಿ ಪೆಲ್ತಡ್ಕ ಸ್ಥಾಯಿ ಸಮಿತಿ ಅಧ್ಯಕ್ಷ ಬುದ್ದನಾಯ್ಕ , ನ.ಪಂ. ಸದಸ್ಯರು ಉಪಸ್ಥಿತರಿದ್ದರು.