ನೂತನ ಮುಖ್ಯಮಂತ್ರಿಯಾಗಿ ಬಸವರಾಜ್ ಬೊಮ್ಮಾಯಿ – ನಾಳೆ ಪ್ರಮಾಣವಚನ
ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಗೃಹಸಚಿವರಾಗಿದ್ದ ಬಸವರಾಜ್ ಬೊಮ್ಮಾಯಿ ಸಂಜೆ ನಡೆದ ಶಾಸಕಾಂಗ ಸಭೆಯಲ್ಲಿ ಆಯ್ಕೆಯಾಗಿದ್ದಾರೆ. ನಾಳೆ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯಲಿದೆ.
ಬಿ.ಎಸ್.ಯಡಿಯೂರಪ್ಪ ರಾಜೀನಾಮೆಯಿಂದ ತೆರವಾದ ಮುಖ್ಯಮಂತ್ರಿ ಹುದ್ದೆಗೆ ಲಿಂಗಾಯಿತ ಸಮುದಾಯದ ಪ್ರಭಲ ಮುಖಂಡ, ಮಾಜಿ ಮುಖ್ಯಮಂತ್ರಿ ಎಸ್.ಆರ್.ಬೊಮ್ಮಾಯಿ ಅವರ ಪುತ್ರ ಬಸವರಾಜ ಸೋಮಪ್ಪ ಬೊಮ್ಮಾಯಿ ಆಯ್ಕೆಯಾಗಿದ್ದಾರೆ.
ಹಾವೇಜಿ ಜಿಲ್ಲೆಯ ಶಿಗ್ಗಾನ್ ವಿಧಾನಸಭೆ ಕ್ಷೇತ್ರದ ಶಾಶಕರಾಗಿರುವ ಬೊಮ್ಮಾಯಿ ಹಿಂದಿನ ಸಂಪುಟದಲ್ಲಿ ಗೃಹ ಹಾಗೂ ಸಂಸದೀಯ ವ್ಯವಹಾರಗಳ ಖಾತೆ ಸಚಿವರಾಗಿದ್ದರು. ಬಿಎಸ್ ವೈ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಬೊಮ್ಮಾಯಿ ಆಯ್ಕೆ ಹಿಂದೆ ಸಹಜವಾಗಿಯೇ ಸಮುದಾಯ ಹಾಗೂ ಬಿಎಸ್ ಯಡಿಯೂರಪ್ಪ ಅವರ ಪ್ರಭಾವ ಕೆಲಸ ಮಾಡಿದೆ.
ಬಸವರಾಜ ಬೊಮ್ಮಾಯಿ ಮೂಲತಃ ಜನತಾ ಪರಿವಾರದ ಹಿನ್ನೆಲೆ ಹೊಂದಿದವರು. ತಂದೆ ಎಸ್.ಆರ್.ಬೊಮ್ಮಾಯಿ ಜನತಾ ಪಕ್ಷದ ಪ್ರಭಲ ಮುಖಂಡರಾಗಿ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದವರು. ತಂದೆ ಕಾಲದಲ್ಲಿ ಬಸವರಾಜ ಬೊಮ್ಮಾಯಿ ಸಕ್ರೀಯ ರಾಜಕಾರಣದಲ್ಲಿ ಇಲ್ಲವಾದರೂ ತಂದೆಯ ರಾಜಕೀಯ ಪಯಣಕ್ಕೆ ಸಾಥ್ ನೀಡಿದವರು.
1998 ಹಾಗೂ 2004ರಲ್ಲಿ ಬೊಮ್ಮಾಯಿ ಎರಡು ಅವಧಿಗೆ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಗೆ ಆಯ್ಕೆ ಆಗಿದ್ದರು. ಜನತಾ ದಳದ ಮೂಲಕ ರಾಜಕೀಯ ಆರಂಭಿಸಿದ್ದ ಅವರು 1999 ರಲ್ಲಿ ಜನತಾ ದಳ ವಿಭಜನೆ ಆದಾಗ ಸಂಯುಕ್ತ ಜನತಾ ದಳವನ್ನು ಆಯ್ಕೆ ಮಾಡಿ ರಾಜಕೀಯ ಜೀವನ ಮುಂದುವರಿಸಿದ್ದರು. ಆ ಬಳಿಕ ಅವರು 2008ರಲ್ಲಿ ಬಿಜೆಪಿ ಸೇರಿ ಹಾವೇರಿ ಜಿಲ್ಲೆಯ ಶಿಗ್ಗಾನ್ ನಿಂದ ಶಾಶಕರಾಗಿ ಆಯ್ಕೆ ಆಗಿದ್ದಾರೆ.
2008ರಲ್ಲಿ ಬೃಹತ್ ನೀರಾವರಿ ಸಚಿವರಾಗಿ ಕರ್ತವ್ಯ ನಿರ್ವಹಿಸಿದ್ದ ಬಸವರಾಜ ಬೊಮ್ಮಾಯಿ ಎಂಜಿನಿಯರಿಂಗ್ ಪದವೀಧರರು .