
ಎಂ. ಚೆಂಬು ಗ್ರಾಮದ ಕುದ್ರೆಪಾಯ ಮಹಾವಿಷ್ಣುಮೂರ್ತಿ ದೈವಸ್ಥಾನದಿಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಟ್ಟಪ್ಪಾರೆ, ಕುರುಂಜಿ, ಉಂಬಾಳೆ ಊರುಗಳಿಗೆ ಸಂಪರ್ಕಿಸುವ ಪ್ರಮುಖ ರಸ್ತೆ ಇದಾಗಿದ್ದು ದಿನನಿತ್ಯ ನೂರಾರು ವಾಹನಗಳು ಸಂಚರಿಸುತ್ತಿವೆ. ರಸ್ತೆ ಅಭಿವೃದ್ಧಿ ನೆಪದಲ್ಲಿ ರಸ್ತೆಯನ್ನು ಪ್ರತಿ ವರ್ಷವೂ ಜೆಸಿಬಿ ಬಳಸಿ ಅಗಲಗೊಳಿಸುವುದು, ಚರಂಡಿ ನಿರ್ಮಾಣ ಇತ್ಯಾದಿ ಮಾಡುತ್ತಿರುವುದರಿಂದ ಮಳೆಗಾಲದಲ್ಲಿ ಕೆಸರುಮಯವಾಗಿ ಕಂಬಳದ ಗದ್ದೆಯಂತಾಗಿದೆ. ರಸ್ತೆಯಲ್ಲಿ ನಡೆದಾಡಲೂ ಕಷ್ಟವಾಗುತ್ತಿದೆ. ಜನಪ್ರತಿನಿಧಿಗಳು ಈ ಕುರಿತು ಗಮನ ಹರಿಸಿ ಈ ರಸ್ತೆಯನ್ನು ಸರ್ವಋತು ರಸ್ತೆಯನ್ನಾಗಿ ಅಭಿವೃದ್ಧಿ ಪಡಿಸಬೇಕಾಗಿ ಕುದ್ರೆಪಾಯದ ನಾಗರಿಕರು ಒತ್ತಾಯಿಸಿದ್ದಾರೆ.