
ದ.ಕ. ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತ ಗುತ್ತಿಗಾರು, ಗ್ರಾಮಪಂಚಾಯತ್ ದೇವಚಳ್ಳ ಇವುಗಳ ಸಂಯುಕ್ತ ಆಶ್ರಯದಲ್ಲಿ ಜು.17 ರಂದು ದೇವಚಳ್ಳ ಗ್ರಾಮ ಪಂಚಾಯತ್ ನಲ್ಲಿ ಅಪೌಷ್ಟಿಕ ಮಕ್ಕಳ ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ವಿಶ್ವ ಜನಸಂಖ್ಯಾ ದಿನಾಚರಣೆ ಹಮ್ಮಿಕೊಳ್ಳಲಾಯಿತು.
ಗ್ರಾಮಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ರಾಜೇಶ್ವರಿ ಮಣಿಕಂಠ ಇವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಗುತ್ತಿಗಾರು ಇದರ ನಿರ್ದೇಶಕರಾದ ಕೃಷ್ಣಯ್ಯ ಮೂಲೆತೋಟ ಉದ್ಘಾಟಿಸಿ ಮಾತನಾಡಿ ತಮ್ಮ ಸಹಕಾರಿ ಸಂಘವು ಅನೇಕ ಸಮಾಜಮುಖಿ ಕೆಲಸಗಳನ್ನು ನಿರ್ವಹಿಸುತ್ತಿದ್ದು ಕೋವಿಡ್-19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಗ್ರಾಮದಲ್ಲಿರುವ ಅಪೌಷ್ಟಿಕ ಮಕ್ಕಳಿಗೆ ಪೌಷ್ಟಿಕ ಕಿಟ್ ನೀಡಲು ಸಹ ಅವಕಾಶ ದೊರಕಿರುವುದು ಸ್ವಾಗತಾರ್ಹ ಎಂದರು. ಹಾಜರಿದ್ದ ಎಲ್ಲಾ ಮಕ್ಕಳನ್ನು ಕೊಲ್ಲಮೊಗ್ರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಅಶೋಕ್ ಇವರು ಆರೋಗ್ಯ ತಪಾಸಣೆ ನಡೆಸಿದರು. ಪೋಷಕರಿಗೆ ತಮ್ಮ ಮಕ್ಕಳ ಪೋಷಣೆ ಬಗ್ಗೆ ಸೂಕ್ತ ಆರೋಗ್ಯ ಸಲಹೆ ನೀಡಿದರಲ್ಲದೇ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವತಿಯಿಂದ ಉಚಿತವಾಗಿ ನೀಡಿರುವ ಪ್ರೋಟೀನ್ ಪೌಡರ್ ಅನ್ನು ಮಕ್ಕಳಿಗೆ ನೀಡುವ ಬಗ್ಗೆ ಮಾರ್ಗದರ್ಶನ ನೀಡಿದರು.ವಲಯ ಮೇಲ್ವಿಚಾರಕಿ ವಿಜಯರವರು ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿ ಕೋವಿಡ್-19 ಮೂರನೇ ಅಲೆಯಲ್ಲಿ ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾಗಿರುವುದರಿಂದ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು. ಗ್ರಂಥಾಲಯ ಮೇಲ್ವಿಚಾರಕಿ , ಸಾವಿತ್ರಿ ಕಣೆಮರಡ್ಕ ನಿರೂಪಿಸಿದರು.