ಕುಟುಂಬ ಯೋಜನೆಯನ್ನು ಸರಿಯಾಗಿ ಪಾಲನೆ ಮಾಡಿದರೇ ಜನಸಂಖ್ಯೆಯನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ. ಆ ನಿಟ್ಟಿನಲ್ಲಿ ಈಗಿನ ವಿಪತ್ತಿನ ಸನ್ನಿವೇಶದಲ್ಲೂ ಜನಸಂಖ್ಯೆಯನ್ನು ನಿಯಂತ್ರಣದಲ್ಲಿಟ್ಟುಕೊಂಡು ಭಾರತದ ಸರ್ವಾಂಗಿಣ ಅಭಿವೃದ್ಧಿಗೆ ಜನರು ಸಹಕರಿಸಬೇಕಿದೆ ಎಂದು ತಾಲೂಕು ಅರೋಗ್ಯ ಅಧಿಕಾರಿ ಡಾ.ನಂದಕುಮಾರ್ ಹೇಳಿದರು.
ಸುಳ್ಯ ಶಾಂತಿನಗರ ಶಾಲೆಯಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆ ಪ್ರಯುಕ್ತ ತಾತ್ಕಾಲಿಕ ಹಾಗೂ ಶಾಶ್ವತ ಕುಟುಂಬ ಯೋಜನೆಯ ಅರ್ಹ ಫಲಾನುಭವಿಗಳಿಗೆ ಕುಟುಂಬ ಯೋಜನೆಯ ಕುರಿತು ಮಾಹಿತಿ ನೀಡಿದರು.
ವಿಪತ್ತಿನಲ್ಲಿಯೂ ಕುಟುಂಬ ಯೋಜನೆ ನಿರ್ವಹಣೆ ಸೇವೆ ಸ್ವಾವಲಂಬಿ ರಾಷ್ಟ್ರ ಮತ್ತು ಕುಟುಂಬಕ್ಕೆ ನಾಂದಿ ಎಂಬುದು ಈ ಬಾರಿಯ ಜನಸಂಖ್ಯಾ ದಿನದ ಧ್ಯೇಯವಾಕ್ಯವಾಗಿದ್ದು ಇದರಂತೆ ಸದ್ಯದ ಕೋವಿಡ್ ನಂತಹ ಕಷ್ಟದ ಸ್ಥಿತಿಯಲ್ಲೂ ಜನಸಂಖ್ಯೆಯ ನಿಯಂತ್ರಣಕ್ಕೆ ಸಹಕರಿಸಿ ದೇಶದ ಆರ್ಥಿಕ,ಸಾಮಾಜಿಕ ಅಭಿವೃದ್ಧಿ ಗೆ ಸಹಕಾರ ನೀಡಬೇಕು ಎಂದರು.
ಈ ಸಂದರ್ಭ ಸುಳ್ಯ ಆರೋಗ್ಯ ಶಿಕ್ಷಣಾಧಿಕಾರಿ ಪ್ರಮಿಳಾ, ಆರೋಗ್ಯ ಸಿಬಂದಿ ಶಶಿಕಲಾ, ಶಾಂತಿನಗರ ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕವರ್ಗದವರು ಉಪಸ್ಥಿತರಿದ್ದರು.