
ಐವರ್ನಾಡು ಮುಹಿದ್ದೀನ್ ಜುಮಾ ಮಸೀದಿ ವತಿಯಿಂದ ನಿರ್ಮಿಸಿದ ವಸತಿ ಸಮುಚ್ಚಯ ಮತ್ತು ಆಧುನೀಕೃತ ಮದರಸ ಉದ್ಘಾಟನೆಯನ್ನು ಪ್ರಸಿದ್ಧ ಸೂಪಿ ವರ್ಯರಾದ ಸಯ್ಯದ್ ಅಹ್ಮದ್ ಪೂಕೋಯ ತಂಙಳ್ ಪುತ್ತೂರು,ಮೌಲೂದ್ ಪರಾಯಣ ರೊಂದಿಗೆ ಡಿಸೆಂಬರ್ 20 ರಂದು ನೆರವೇರಿಸಿದರು. ಕಂಪ್ಯೂಟರ್ ಕೊಠಡಿಯನ್ನು ಅರಂತೋಡು ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ಹಾಗೂ ಕೆ.ಪಿ.ಸಿ.ಸಿ.ಯ ಮಾಜಿ ಕಾರ್ಯದರ್ಶಿ ಟಿ.ಎಂ.ಶಾಹೀದ್ ತೆಕ್ಕಿಲ್ ಉದ್ಘಾಟಿಸಿ ಐವರ್ನಾಡುನಂತಹ ಗ್ರಾಮೀಣ ಪ್ರದೇಶದಲ್ಲಿ ಅತ್ಯಂತ ಕಡಿಮೆ ಜನಸಂಖ್ಯೆ ಇರುವ ಈ ಪ್ರದೇಶದಲ್ಲಿ ದಿ. ಎನ್.ಎಂ. ಬಾಲಕೃಷ್ಣ ಗೌಡರವರು ಮುತುವರ್ಜಿವಹಿಸಿ ಮಸೀದಿ, ಮದರಸ ಮಾಡಲು ಸ್ಥಳದಾನ ನೀಡಿದಲ್ಲದೆ ಕೋಮು ಸೌಹಾರ್ಧತೆ ಬೆಳೆಯಲು ಭದ್ರ ಬುನಾದಿ ಹಾಕಿದವರು. ನಾವೆಲ್ಲರು ಜಾತ್ಯಾತೀತ ಮನೋಭಾವದಿಂದ ಪರ ಧರ್ಮ ಸಹಿಷ್ಣುತೆಯೊಂದಿಗೆ ಹೃದಯ ವೈಶಾಲ್ಯ ಮತ್ತು ಶಾಂತಿ ಸಹಬಾಳ್ವೆಯಿಂದ ಜೀವನ ನಡೆಸಬೇಕು, ಮದರಸದಲ್ಲಿ ಆಧುನಿಕತೆಗೆ ತಕ್ಕಂತೆ ಕಂಪ್ಯೂಟರ್ ನಂತಹ ಯೋಗ್ಯ ಶಿಕ್ಷಣ ನೀಡಿ ಉತ್ತಮ ಸಮಾಜವನ್ನು ನಿರ್ಮಾಣ ಮಾಡಬೇಕೆಂದು ಟಿ.ಎಂ.ಶಾಹೀದ್ ಹೇಳಿದರು. ಮಾಜಿ ಸಚಿವ ಜಮೀರ್ ಅಹ್ಮದ್ ಸುಳ್ಯಕ್ಕೆ ಬಂದಾಗ ಈ ಮಸೀದಿಗೆ ಭೇಟಿ ನೀಡಿದರ ಫಲವಾಗಿ ಈ ಮಸೀದಿ ಮತ್ತು ಮದರಸಕ್ಕೆ ಸುಮಾರು ರೂ 20 ಲಕ್ಷ ಅನುದಾನ ಬಂದಿರುತ್ತದೆ ಹಾಗೂ ಜೊತೆಗೆ ಜಮಾಅತ್ ನ ಎಲ್ಲರೂ ಸೇರಿ ಉತ್ತಮ ಕೆಲಸವನ್ನು ಮಾಡಿದ್ದೀರಿ ಎಂದರು. ಇದೇ ಸಂದರ್ಭದಲ್ಲಿ ಮಾಡನ್ನೂರು ನೂರಲ್ ಹುಧಾ ಎಜುಕೇಶನ್ ಸೆಂಟರ್ ನಲ್ಲಿ ಉನ್ನತ ವಿದ್ಯಾಭ್ಯಾಸವನ್ನು ಪಡೆದ ಸ್ಥಳೀಯ ಖತೀಬರಾದ ಅಬ್ದುಲ್ ಖಾದರ್ ಫೈಝಿ ಯವರ ಸುಪುತ್ರ ಅಬ್ದುಲ್ ರಹಿಮಾನ್ ಶಹೀಮ್ ಇವರನ್ನು ಟಿ.ಎಂ.ಶಾಹೀದ್ ಸನ್ಮಾನಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಜಮಾಅತ್ ಅಧ್ಯಕ್ಷ ಜುನೈದ್ ನಿಡುಬೆ ವಹಿಸಿದರು. ಖತೀಬ್ ಅಬ್ದುಲ್ ಖಾದರ್ ಫೈಝಿ ದುವಾ ನೆರವೇರಿಸಿದರು ವೇದಿಕೆಯಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ಎಸ್.ಎನ್.ಮನ್ಮಥ್, ಸುಳ್ಯ ನಗರ ಪಂಚಾಯತ್ ನ ಮಾಜಿ ಸದಸ್ಯ ಹಾಜಿ ಕೆ.ಎಂ.ಮುಸ್ತಫ, ನಗರ ಪಂಚಾಯತ್ ಮಾಜಿ ಅಧ್ಯಕ್ಷ ಸಂಶುದ್ದೀನ್, ನ್ಯಾಯಾವಾದಿ ಮತ್ತು ನೊಟರಿ ಫವಾಝ್ ಕನಕಮಜಲು, ಸಿದ್ದೀಕ್ ಕೊಕ್ಕೊ ಮೊದಲಾದವರು ಉಪಸ್ಥಿತರಿದ್ದರು. ನಂತರ ಧಾರ್ಮಿಕ ಉಪನ್ಯಾಸ ನಡೆಯಿತು. ಪ್ರಸಿದ್ದ ವಾಗ್ಮಿ ವಿ.ಕೆ.ಹನೀಫ್ ನಿಝಾಮಿ ಮೊಗ್ರಾಲ್ ಪುತ್ತೂರು ಅವರಿಂದ ಪ್ರಭಾಷಣ ನಡೆಯಿತು.