ಗ್ರಾಮ ಪಂಚಾಯತ್ ಟಿಕೇಟ್ ಹಂಚಿಕೆಯಲ್ಲಿ ಮಂಡಲ ಸಮಿತಿ ಉಪಾಧ್ಯಕ್ಷರ ಮಾತನ್ನು ಕಡೆಗಣಿಸಿ ಪಕ್ಷ ವಿರೋಧಿ ಚಟುವಟಿಕೆ ಮಾಡಿದವರಿಗೆ ನೀಡಿದ್ದಾರೆಂದು ಇದರಿಂದ ಬೇಸರಗೊಂಡು ಬಿಜೆಪಿ ಮಂಡಲ ಸಮಿತಿಯ ಉಪಾಧ್ಯಕ್ಷ ಸ್ಥಾನಕ್ಕೆ ಗಣೇಶ್ ಭಟ್ ಇಡ್ಯಡ್ಕ ರಾಜೀನಾಮೆ ನೀಡಿದ ಘಟನೆ ನಿನ್ನೆ ನಡೆದಿದೆ.
ಕೊಲ್ಲಮೊಗ್ರ ಹರಿಹರ ಸೊಸೈಟಿ ಚುನಾವಣೆಯಲ್ಲಿ ಕಲ್ಮಕಾರು ಭಾಗದಿಂದ ಗಣೇಶ್ ಭಟ್ ಇಡ್ಯಡ್ಕ ಸ್ಪರ್ಧಿಸಿದ್ದರು. ಇವರ ವಿರುದ್ಧ ಅಶ್ವಥ್ ಯಾಲದಾಳು ಪಕ್ಷವಿರೋಧಿ ಚಟುವಟಿಕೆ ನಡೆಸಿ ಇವರ ಸೋಲಿಗೆ ಹಾಗೂ ಕಾಂಗ್ರೆಸ್ ಗೆಲುವಿಗೆ ಕಾರಣರಾಗಿದ್ದರು. ಆದರೇ ಈ ಬಾರಿ ಕಲ್ಮಕಾರು ವಾರ್ಡ್ ನಿಂದ ಅಶ್ವಥ್ ಯಾಲದಾಳು ಅವರಿಗೆ ಪಕ್ಷ ಟಿಕೇಟ್ ನೀಡಿದೆ. ಇದನ್ನು ಗಣೇಶ್ ಭಟ್ ಮತ್ತು ಕಾರ್ಯಕರ್ತರು ವಿರೋಧಿಸಿದ್ದರು. ಆದರೇ ಉಪಾಧ್ಯಕ್ಷ ರಾಗಿರುವ ಇವರ ಮಾತನ್ನು ಕಡೆಗಣಿಸಿರುವ ಮಂಡಲ ಸಮಿತಿಯ ಧೋರಣೆಯ ಬಗ್ಗೆ ಬೇಸತ್ತು ಡಿ.17 ರಂದು ರಾಜೀನಾಮೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಡಿ.19 ವರೆಗೆ ಕಾದರೂ ಮಂಡಲ ಸಮಿತಿ ಯಾವುದೇ ಪ್ರತಿಕ್ರಿಯೆ ನೀಡದ ಕಾರಣ ಇಂದು ಅಮರ ಸುದ್ದಿ ಹೇಳಿಕೆ ನೀಡಿದ್ದಾರೆ.
ಈ ಬಗ್ಗೆ ಹೇಳಿಕೆ ನೀಡಿದ ಅವರು ಪಕ್ಷ ವಿರೋಧಿ ಚಟುವಟಿಕೆ ನಡೆಸುವವರಿಗೆ ಪಂಚಾಯತ್ ಚುನಾವಣೆಯಲ್ಲಿ ಟಿಕೆಟ್ ನೀಡಿರುವುದು, ಮಂಡಲ ಸಮಿತಿ ಉಪಾಧ್ಯಕ್ಷನಾಗಿದ್ದರೂ ತನ್ನ ಮಾತಿಗೆ ಬೆಲೆ ನೀಡದಿರುವುದು ಹಾಗೂ ಇತ್ತೀಚೆಗಿನ ಬೆಳವಣಿಗೆಗೆ ಬೇಸತ್ತು ರಾಜೀನಾಮೆ ಸಲ್ಲಿಸುತ್ತಿದ್ದೇನೆ ಎಂದಿದ್ದಾರೆ.