


ಆಲೆಟ್ಟಿ ಗ್ರಾಮದ ರಂಗತ್ತಮಲೆ ಪರಿಸರದ ಸುಮಾರು ನೂರಕ್ಕೂ ಹೆಚ್ಚು ದಲಿತ ನಿವಾಸಿಗಳು ರಸ್ತೆ ಅಭಿವೃದ್ಧಿ ಮತ್ತು ಕುಡಿಯುವ ನೀರಿನ ಸಮಸ್ಯೆ ಈಡೇರಿಸುವಂತೆ ಹಾಗೂ ಕುಡಿಯುವ ನೀರಿನ ಟ್ಯಾಂಕ್ ದುರ್ಬಳಕೆ, ಮೂಲಭೂತ ಅವಶ್ಯಕತೆಗಳನ್ನು ಅಧಿಕಾರಿಗಳು ಈಡೇರಿಸದಿದ್ದರೇ ಮತದಾನ ಬಹಿಷ್ಕಾರ ನಡೆಸುವುದೆಂದೂ ತೀರ್ಮಾನಿಸಿ ರಂಗತ್ತಮಲೆ ಸರ್ಕಾರಿ ಶಾಲೆಯ ಬಳಿ ಮತದಾನ ಬಹಿಷ್ಕಾರದ ಬ್ಯಾನರ್ ಅಳವಡಿಸಿ ಕಳೆದ ಮೂರು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದರು. ಪ್ರತಿಭಟನಾ ಸ್ಥಳಕ್ಕೆ ಸಂಬಂಧಪಟ್ಟ ಗ್ರಾಮ ಪಂಚಾಯತ್ ಅಧಿಕಾರಿಗಳು, ಸುಳ್ಯ ತಾಲೂಕು ಆಡಳಿತ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿಲ್ಲ ಎಂದು , ತಮ್ಮ ಸಹಾಯಕ್ಕೆ ಬರುವಂತೆ ಅಂಬೇಡ್ಕರ್ ರಕ್ಷಣಾ ವೇದಿಕೆಯ ಜಿಲ್ಲಾ ಅಧ್ಯಕ್ಷ ಸುಂದರ ಪಾಟಾಜೆ ರವರಿಗೆ ಮನವಿ ಮಾಡಿದ್ದರು. ಇದರ ಹಿನ್ನೆಲೆಯಲ್ಲಿ ಡಿಸೆಂಬರ್ 16ರಂದು ಸ್ಥಳಕ್ಕೆ ಭೇಟಿ ನೀಡಿದ ದ ಕ ಜಿಲ್ಲಾ ಅಂಬೇಡ್ಕರ್ ರಕ್ಷಣಾ ವೇದಿಕೆಯ ಅಧ್ಯಕ್ಷ ಸುಂದರ ಪಾಟಾಜೆ, ಸುಳ್ಯ ತಾಲೂಕು ಸಮಿತಿ ಅಧ್ಯಕ್ಷ ಮೋಹನ್ ಕುಮಾರ್ ಗ್ರಾಮಸ್ಥರ ಅಹವಾಲುಗಳನ್ನು ಸ್ವೀಕರಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿಯನ್ನು ನೀಡಿದರು. ಸ್ಥಳಕ್ಕೆ ಭೇಟಿ ನೀಡಿ ಸ್ಥಳೀಯ ದಲಿತ ಕುಟುಂಬದವರ ಸಮಸ್ಯೆಗಳಿಗೆ ಸ್ಪಂದಿಸುವಂತೆ ದೂರವಾಣಿ ಮೂಲಕ ಮನವಿ ಮಾಡಿಕೊಂಡರು. ಈ ಮನವಿಯ ಹಿನ್ನೆಲೆಯಲ್ಲಿ ಸುಳ್ಯ ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಭವಾನಿ ಶಂಕರ್, ಎ ಆರ್ ಡಬ್ಲ್ಯೂ ಸುರೇಶ್, ಸಹಾಯಕ ಇಂಜಿನಿಯರ್ ಮಣಿಕಂಠ, ಆಲೆಟ್ಟಿ ಗ್ರಾಪಂ ಸಿಬ್ಬಂದಿ ಸೀತಾರಾಮ್, ಆಲೆಟ್ಟಿ ಗ್ರಾ ಪಂ ಮಾಜಿ ಅಧ್ಯಕ್ಷ ಹರೀಶ್ ಗೌಡ, ಸುಳ್ಯ ಪೊಲೀಸ್ ಠಾಣಾ ಎಸ್ ಐ ಎಂ.ಆರ್. ಹರೀಶ್ ಸ್ಥಳಕ್ಕೆ ಭೇಟಿ ನೀಡಿ ಗ್ರಾಮಸ್ಥರ ಬೇಡಿಕೆಗಳನ್ನು ಆಲಿಸಿದರು. ಅಧಿಕಾರಿಗಳನ್ನು ಕಂಡ ಗ್ರಾಮಸ್ಥರು ಗ್ರಾಮದಲ್ಲಿ ಉಂಟಾಗಿರುವ ಕುಡಿಯುವ ನೀರಿನ ಸಮಸ್ಯೆ, ಸಂಚಾರಕ್ಕೆ ಯೋಗ್ಯ ವಿಲ್ಲದ ರಸ್ತೆಗಳು, ನೀರಿನ ಸಂಪರ್ಕಕ್ಕಾಗಿ ನಿರ್ಮಿಸಿದ ಟ್ಯಾಂಕ್ ಕೆಲಸಕ್ಕೆ ಬಾರದೇ ಇರುವುದು ಇವೆಲ್ಲದರ ಬಗ್ಗೆ ಮಾಹಿತಿಗಳನ್ನು ನೀಡಿದರು. ದಲಿತ ಕುಟುಂಬದವರನ್ನು ಸ್ಥಳೀಯ ಗ್ರಾಮ ಪಂಚಾಯತ್ ನ ಅಧಿಕಾರಿಗಳು ಕಡೆಗಣಿಸಿದ್ದಾರೆ ಎಂದು ಆಕ್ರೋಶವನ್ನು ವ್ಯಕ್ತಪಡಿಸಿದರು. ನಮಗೆ ಬೇಕಾಗಿರುವುದು ನೀರು ಮತ್ತು ನಡೆದಾಡಲು ಉತ್ತಮ ರಸ್ತೆಯನ್ನು ಮಾತ್ರ ಕೇಳುತ್ತಿದ್ದೇವೆ. ಇದನ್ನು ಸರಿಪಡಿಸಿ ಕೊಡುವವರೆಗೆ ನಾವು ಈ ಪ್ರತಿಭಟನೆಯನ್ನು ಕೈಬಿಡುವುದಿಲ್ಲ ಎಂದು ಎಚ್ಚರಿಕೆಯನ್ನು ನೀಡಿದರು. ಈ ಸಂದರ್ಭದಲ್ಲಿ ಸಿಇಓ ಭವಾನಿ ಶಂಕರ್ ರವರು ತಮ್ಮಂದಿಗೆ ಬಂದಿದ್ದ ಅಧಿಕಾರಿಗಳೊಂದಿಗೆ ಚರ್ಚಿಸಿ ಜನವರಿ 15 ರಿಂದ ಕುಡಿಯುವ ನೀರಿನ ಯೋಜನೆಯ ಕೆಲಸವನ್ನು ಆರಂಭಿಸಿ ಅದೇ ತಿಂಗಳ 30ರ ಒಳಗೆ ಮನೆಗಳಿಗೆ ನೀರಿನ ವ್ಯವಸ್ಥೆ ಮಾಡಿಕೊಡುತ್ತೇವೆ ಎಂದು ಭರವಸೆಯನ್ನು ನೀಡಿದರು.

ರಸ್ತೆ ಅಭಿವೃದ್ಧಿಯ ಬಗ್ಗೆ ಮಾತನಾಡಿದ ಅವರು ಸರ್ಕಾರದಿಂದ ದಲಿತ ಕಾಲೋನಿಗಳ ಅಭಿವೃದ್ಧಿಗೆ ಬರುವ ಅನುದಾನಗಳನ್ನು ತರಿಸಿ ಮುಂದಿನ ದಿನಗಳಲ್ಲಿ ರಸ್ತೆಯ ಬಗ್ಗೆ ಗಮನ ಹರಿಸುವುದಾಗಿ ಹೇಳಿದರು. ಈ ಎಲ್ಲಾ ಕಾರ್ಯಗಳು ಹಂತ ಹಂತವಾಗಿ ನಿರ್ವಹಿಸಿ ತಮಗಾಗಿರುವ ಮೂಲಭೂತ ಸಮಸ್ಯೆಗಳಿಗೆ ಸ್ಪಂದಿಸುವುದಾಗಿ ಭರವಸೆಯನ್ನು ನೀಡಿದರು. ಈ ಸಂದರ್ಭದಲ್ಲಿ ಸ್ಥಳೀಯರು ತಾವು ನೀಡಿರುವ ಭರವಸೆಗಳನ್ನು ಲಿಖಿತ ರೂಪದಲ್ಲಿ ನೀಡುವಂತೆ ಒತ್ತಾಯಿಸಿದರು. ಇದಕ್ಕೆ ಒಪ್ಪಿಕೊಂಡ ಸಿಇಓ ಸ್ಥಳೀಯ ಗ್ರಾಪಂ ಸಿಬ್ಬಂದಿ ಸೀತಾರಾಮ ರವರಿಗೆ ಲಿಖಿತ ರೂಪದಲ್ಲಿ ನೀಡುವಂತೆ ಸೂಚನೆ ನೀಡಿದರು. ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ನಿಂದ ನಿರ್ಮಿಸಿರುವ ನೀರಿನ ಟ್ಯಾಂಕ್ ದೇವಕಿ ಎಂಬವರ ಜಾಗದಲ್ಲಿ ಇದ್ದು ಈ ಸ್ಥಳದ ಪರವಾಗಿ ಅವರಿಗೆ ಪಂಚಾಯತ್ ವತಿಯಿಂದ ಪರಿಹಾರ ನೀಡುವಂತೆ ಒತ್ತಾಯಿಸಿದರು. ಇದಕ್ಕೆ ಅಧಿಕಾರಿಗಳು ಆ ಟ್ಯಾಂಕಿನಿಂದ ದೇವಕಿ ಅವರ ಮನೆಗೆ ನೀರಿನ ಸಂಪರ್ಕವನ್ನು ಉಚಿತವಾಗಿ ಕೊಡಿಸುವುದಾಗಿ ಭರವಸೆಯನ್ನು ನೀಡಿದರು. ಎಲ್ಲಾ ಭರವಸೆಗಳಿಂದ ಸಂತುಷ್ಟರಾದ ಗ್ರಾಮಸ್ಥರು ಅಧಿಕಾರಿಗಳ ಮುಂದೆಯೇ ತಾವು ಅಳವಡಿಸಿದ್ದ ಮತದಾನ ಬಹಿಷ್ಕಾರದ ಬ್ಯಾನರ್ ಅನ್ನು ತೆರವುಗೊಳಿಸಿದರು. ಇದೇ ಸಂದರ್ಭದಲ್ಲಿ ಸ್ಥಳೀಯ ಮಹಿಳೆಯೋರ್ವರು ನಮ್ಮೂರಿನ ರಸ್ತೆಯ ಸಮಸ್ಯೆಯಿಂದಾಗಿ ಈ ಊರಿನವರಿಗೆ ಮದುವೆ ಮಾಡಿ ಹೆಣ್ಣು ಕೊಡಲು ಹಿಂದೇಟು ಹಾಕುತ್ತಾರೆ ಎಂದು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರು. ಈ ಸಂದರ್ಭದಲ್ಲಿ ಮಾತನಾಡಿದ ಅಂಬೇಡ್ಕರ್ ರಕ್ಷಣಾ ವೇದಿಕೆಯ ಅಧ್ಯಕ್ಷ ಸುಂದರ ಪಾಟಾಜೆ ದಲಿತ ಸಮುದಾಯದವರಿಗೆ ಅನ್ಯಾಯವಾದಾಗ ಅವರ ಪರ ಹೋರಾಟ ಮಾಡಲು ನಮ್ಮ ಸಂಘಟನೆ ಮುಂದೆ ಬರುತ್ತದೆ. ರಂಗತ್ತಮಲೆ ದಲಿತ ಕಾಲೋನಿಯ ಗ್ರಾಮಸ್ಥರು ತಮ್ಮ ಸಮಸ್ಯೆಗಳನ್ನು ನಮ್ಮಲ್ಲಿ ಹಂಚಿಕೊಂಡಾಗ ಅದನ್ನು ಅಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸಿದ್ದೇವೆ ಎಂದರು.
