ಸುಳ್ಯ ನಗರ ಪಂಚಾಯತ್ ಅಧ್ಯಕ್ಷರಾಗಿ ಈಗಾಗಲೇ ಆಯ್ಕೆಗೊಂಡಿರುವ ವಿನಯ ಕುಮಾರ್ ಕಂದಡ್ಕ ರವರು ಕಳೆದ ಕೆಲವು ದಿನಗಳ ಹಿಂದೆ ನಗರದ ವಿವಿಧ ಸಮಸ್ಯೆಗಳ ಬಗ್ಗೆ ಸುಳ್ಯ ತಾಲೂಕು ಪತ್ರಕರ್ತರೊಂದಿಗೆ ಸಂವಾದ ಕಾರ್ಯಕ್ರಮ ನಡೆಸಿದ್ದರು.ಅದೇ ರೀತಿ ಇಂದು ನಗರ ಪಂಚಾಯತ್ ಸಭಾಂಗಣದಲ್ಲಿ ಸುಳ್ಯದ ವಿವಿಧ ಸಂಘ ಸಂಸ್ಥೆಗಳ ಮುಖಂಡರು, ನಗರ ಪಂಚಾಯತ್ ಮಾಜಿ ಅಧ್ಯಕ್ಷರುಗಳೊಂದಿಗೆ ನಗರದ ಅಭಿವೃದ್ಧಿ ಕಾರ್ಯಕ್ರಮಗಳ ಕುರಿತು, ಸ್ಥಳೀಯ ಮುಖಂಡರುಗಳ ಸಲಹೆ-ಸೂಚನೆಗಳನ್ನು ಸ್ವೀಕರಿಸಿಕೊಂಡು ಸಂವಾದ ಕಾರ್ಯಕ್ರಮ ನಗರ ಪಂಚಾಯತ್ ಸಭಾಂಗಣದಲ್ಲಿ ನಡೆಸಿದರು.
ವೇದಿಕೆಯಲ್ಲಿ ನಪಂ ಅಧ್ಯಕ್ಷ ವಿನಯ್ ಕುಮಾರ್ ಕಂದಡ್ಕ, ಉಪಾಧ್ಯಕ್ಷೆ ಸರೋಜಿನಿ ಪೆಲ್ತಡ್ಕ, ಮುಖ್ಯಾಧಿಕಾರಿ ಎಮ್ಆರ್ ಸ್ವಾಮಿ ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ಮುಖಂಡರುಗಳಾದ ಎಂಬಿ ಸದಾಶಿವ, ಡಾ. ಜ್ಞಾನೇಶ್, ಡಾ. ಲೀಲಾಧರ, ಪದ್ಮಶ್ರೀ ಭಾರದ್ವಾಜ್, ವಿಲಿಯಂ ಲಸ್ರಾದೊ, ಡಾ. ಚಂದ್ರಶೇಖರ ದಾಮ್ಲೆ, ಪಿ.ಎ. ಮಹಮ್ಮದ್, ಮುಸ್ತಫ ಜನತಾ, ಡಿ.ಎಂ. ಶಾರಿಕ್, ನಪಂ ಮಾಜಿ ಅಧ್ಯಕ್ಷ ಎನ್.ಎ. ರಾಮಚಂದ್ರ, ಶೀಲಾವತಿ , ರಶೀದ್ ಜಟ್ಟಿಪಳ್ಳ, ಭವಾನಿಶಂಕರ್ ಅಡ್ತಲೆ, ಶಿಕ್ಷಕರಾದ ಪ್ರಕಾಶ್ ಮುಡಿತ್ತಾಯ ಮೊದಲಾದವರು ಭಾಗವಹಿಸಿದ್ದರು. ಸಭೆಯಲ್ಲಿ ನಗರದ ಮೂಲ ಸಮಸ್ಯೆಗಳಾದ ಕಸ ವಿಲೇವಾರಿ, ಚರಂಡಿ ವ್ಯವಸ್ಥೆಗಳ ಬಗ್ಗೆ, ಫುಟ್ಪಾತ್ ಅಸೌಕರ್ಯಗಳ ಬಗ್ಗೆ, ಹೆಚ್ಚಾಗಿರುವ ನಗರ ಪಂಚಾಯತ್ ಟ್ಯಾಕ್ಸ್ಗಳ ಬಗ್ಗೆ, ಕುಡಿಯುವ ನೀರಿನ ಪೈಪುಗಳ ದುರಸ್ತಿ ಗಳ ಬಗ್ಗೆ, ಸುಳ್ಯದ ಮುಖ್ಯರಸ್ತೆಯಲ್ಲಿ ಇರುವ ಅವೈಜ್ಞಾನಿಕ ಸ್ಲ್ಯಾಬ್ ನಿರ್ಮಾಣದ ಬಗ್ಗೆ, ಪಯಸ್ವಿನಿ ನದಿಗೆ ಕಿಂಡಿ ಅಣೆಕಟ್ಟು ರೂಪಿಸುವ ಬಗ್ಗೆ, ನಗರದ ಮೂಲೆಮೂಲೆಗಳಲ್ಲಿ ಕಸದ ರಾಶಿಗಳನ್ನು ನಿರ್ಮಿಸಿರುವ ಬಗ್ಗೆ, ನಗರದ ಕ್ರೀಡಾಂಗಣಗಳನ್ನು ಅಭಿವೃದ್ಧಿಪಡಿಸುವ ಬಗ್ಗೆ, ನಗರದಲ್ಲಿ ಸ್ವಿಮ್ಮಿಂಗ್ ಪೂಲ್ ನಿರ್ಮಿಸುವ ಬಗ್ಗೆ, ವಿಶಾಲವಾದ ಪಾರ್ಕ್ ರಚಿಸುವ ಬಗ್ಗೆ, ಕೆವಿಜಿ ಪುರಭವನ ಅಭಿವೃದ್ಧಿಗೊಳಿಸುವ ಬಗ್ಗೆ, ಇನ್ನು ಮುಂತಾದ ನಗರ ಅಭಿವೃದ್ಧಿ ವಿಚಾರಗಳ ಕುರಿತು ಸಂವಾದ ಕಾರ್ಯಕ್ರಮ ನಡೆಯಿತು. ಇವೆಲ್ಲವನ್ನೂ ಮಾಹಿತಿ ಪಡೆದುಕೊಂಡ ಸಭಾ ಅಧ್ಯಕ್ಷ ವಿನಯ್ ಕುಮಾರ್ ಕಂದಡ್ಕ ಮುಂದಿನ ದಿನಗಳಲ್ಲಿ ನಗರದ ಪ್ರತಿಯೊಬ್ಬರ ಸಹಕಾರವನ್ನು ಪಡೆದುಕೊಂಡು ಹಂತ ಹಂತವಾಗಿ ನಗರ ಅಭಿವೃದ್ಧಿಪಡಿಸುವಲ್ಲಿ ತೊಡಗಿಸಿಕೊಳ್ಳುವ ಭರವಸೆಯನ್ನು ನೀಡಿದರು. ಕಸ ವಿಲೇವಾರಿಯ ಬಗ್ಗೆ ಮಾತನಾಡಿ ಎರಡು ವರ್ಷಗಳಿಂದ ತುಂಬಿರುವ ಕಸಕ್ಕೆ ಕನಿಷ್ಠ ಎರಡು ತಿಂಗಳ ಕಾಲಾವಕಾಶವನ್ನು ನೀಡುವಂತೆ ಕೇಳಿಕೊಂಡರು. ನಗರಾಡಳಿತ ಕ್ಕೆ ಸೇರಿರುವ ಸರಕಾರಿ ಸ್ಥಳಗಳನ್ನು ತಾಲೂಕು ಕಂದಾಯ ಇಲಾಖೆಗಳಿಂದ ಅನುಮತಿ ಪಡೆದು ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಬಳಸಲು ಸಹಕಾರಿಯಾಗುವಂತೆ ಮುಂದಿನ ದಿನಗಳಲ್ಲಿ ಪ್ರಯತ್ನ ಮಾಡುವುದಾಗಿ ಹೇಳಿದರು.
ಸಭೆಯಲ್ಲಿ ಸರಕಾರಿ ಶಾಲೆಗಳ ಜಾಗಗಳು ಒತ್ತುವರಿ ಆಗುವ ಕುರಿತು ಚರ್ಚೆಗಳು ನಡೆದವು. ಸರಕಾರಿ ಜಾಗಗಳನ್ನು ಉಳಿಸಿಕೊಳ್ಳಲು ಸಭೆಯಲ್ಲಿ ಉಪಸ್ಥಿತರಿದ್ದ ಶಿಕ್ಷಕರಿಂದ ಮನವಿ ನೀಡಲಾಯಿತು. ಸುಳ್ಯದ ಜೀವನದಿ ಪಯಸ್ವಿನಿ ನದಿಗೆ ತ್ಯಾಜ್ಯಗಳನ್ನು ಸುರಿದು ಮಾಲಿನ್ಯ ಗೊಳಿಸುವ ಬಗ್ಗೆ ಕಠಿಣ ಕ್ರಮವನ್ನು ಕೈಗೊಳ್ಳುವಂತೆ ಸಭೆಯಲ್ಲಿ ಮುಖಂಡರು ಅಧ್ಯಕ್ಷರಲ್ಲಿ ಕೇಳಿಕೊಂಡರು. ಈ ರೀತಿಯ ಸೂಕ್ಷ್ಮ ಸ್ಥಳಗಳಿಗೆ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿ ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ವಿನಂತಿಸಿಕೊಂಡರು. ನಗರದಲ್ಲಿ ಪಾರ್ಕಿಂಗ್ ವ್ಯವಸ್ಥೆಗಳ ಕುರಿತು ಚರ್ಚೆಗಳು ನಡೆದವು. ಕೆಲವು ಪಾರ್ಕಿಂಗ್ ಸ್ಥಳಗಳು ಒತ್ತುವರಿ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಪಾರ್ಕಿಂಗ್ ಸಮಸ್ಯೆ ಎದ್ದು ಕಾಣುತ್ತಿದೆ ಎಂದು ಸಭೆಯಲ್ಲಿ ನ.ಪಂ ಮಾಜಿ ಸದಸ್ಯ ಮುಸ್ತಫ ಜನತಾ ತಿಳಿಸಿದರು. ಇದಕ್ಕೆಲ್ಲ ಉತ್ತರಿಸಿದ ನಪಂ ಅಧ್ಯಕ್ಷ ಕಾನೂನು ಪಾಲನೆಯಲ್ಲಿ ನಾವೆಲ್ಲರೂ ಕೈಜೋಡಿಸಿ ಕೊಳ್ಳಬೇಕು, ನಿಯಮಗಳನ್ನು ಅನುಸರಿಸಿ, ಇತರರಿಗೆ ನಿಯಮಗಳ ಬಗ್ಗೆ ಮಾಹಿತಿಯನ್ನು ನೀಡಿ, ನಿಯಮಗಳನ್ನು ಅರಿತವರು ಅದಕ್ಕೆ ಬೆಲೆ ಕಲ್ಪಿಸದೆ ಇದ್ದಲ್ಲಿ ಭ್ರಷ್ಟಾಚಾರಕ್ಕೆ ಕಾರಣವಾಗುತ್ತದೆ. ಆದ್ದರಿಂದ ಎಲ್ಲರೂ ನಿಯಮ ಮತ್ತು ಕಾನೂನುಗಳನ್ನು ಪಾಲಿಸಿ ನಗರದ ಅಭಿವೃದ್ಧಿಗೆ ಶ್ರಮಿಸೋಣ ಎಂದು ಹೇಳಿದರು. ಮುಖ್ಯಾಧಿಕಾರಿ ಎಮ್ಆರ್ ಸ್ವಾಮಿ ಸ್ವಾಗತಿಸಿ ವಂದಿಸಿದರು.
ಒಟ್ಟಿನಲ್ಲಿ ಸಭೆಯ ಉದ್ದೇಶ ಮತ್ತು ಮುಖಂಡರ ನಡುವಿನ ಸಂವಾದ ಕಾರ್ಯಕ್ರಮಗಳು ಯಶಸ್ವಿಯಾದಲ್ಲಿ ಸುಂದರ ಸುಳ್ಯ ನಿರ್ಮಾಣಗೊಂಡು ಸುಳ್ಯದ ಜನತೆ ಇದರ ಲಾಭವನ್ನು ಅನುಭವಿಸಲು ಸಾಧ್ಯ ಎಂಬುವುದರಲ್ಲಿ ಎರಡು ಮಾತುಗಳಿಲ್ಲ.