ಮಡಪ್ಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತ ಇದರ ಸಂಘದ 2019-20 ನೇ ಸಾಲಿನ ವಾರ್ಷಿಕ ಮಹಾಸಭೆಯು ಡಿ 13 ರಂದು ಸಂಘದ ಅಧ್ಯಕ್ಷ ಪಿ.ಸಿ.ಜಯರಾಮ ಇವರು ಅಧ್ಯಕ್ಷತೆಯಲ್ಲಿ ಯುವಕ ಮಂಡಲ ಸಭಾಭವನದಲ್ಲಿ ನಡೆಯಿತು. ವಾರ್ಷಿಕ ಕಾರ್ಯನಿರ್ವಹಣಾ ವರದಿ ಮತ್ತು ಕಾರ್ಯಸೂಚಿಗಳನ್ನು ಮಂಡಿಸಿದ ಅಧ್ಯಕ್ಷರು ನಮ್ಮ ಸಂಘವು ಈ ಆರ್ಥಿಕ ವರ್ಷದಲ್ಲಿ ವಾರ್ಷಿಕ 22,79,672.90 ನಿವ್ವಳ ಲಾಭ ಗಳಿಸಿದದ್ದು, ಸಂಘದ ಸದಸ್ಯರಿಗೆ ಶೇ 8 ಡಿವಿಡೆಂಡ್ ವಿತರಿಸುವುದೆಂದು ಘೋಷಿಸಿದರು. ಗುತ್ತಿಗಾರು ರಬ್ಬರ್ ಸೊಸೈಟಿ ಮತ್ತು ಸುಳ್ಯ ಟಿಎಪಿಸಿಎಂಎಸ್ ನ ಅಧ್ಯಕ್ಷರಾದ ನಿತ್ಯಾನಂದ ಮುಂಡೋಡಿ ಹಾಗೂ ದಿನೇಶ್ ಮಡಪ್ಪಾಡಿ ಮಾತನಾಡಿ ರೈತರಿಗೆ ಮಾರಕವಾಗುವ ಸರಕಾರದ ಹೊಸ ಸಹಕಾರಿ ಕಾನೂನು ಹಾಗೂ ಸುತ್ತೋಲೆ ಗಳನ್ನು ತಿದ್ದುಪಡಿ ಮಾಡಲು ಸರ್ಕಾರವನ್ನು ಒತ್ತಾಯಿಸಲು ನಿರ್ಣಯ ಕೈಗೊಳ್ಳುವಂತೆ ಒತ್ತಾಯಿಸಿದರು. ಅದರಂತೆ ನಿರ್ಣಯ ಕೈಗೊಳ್ಳಲಾಯಿತು. ನಂತರ ಈ ಶೈಕ್ಷಣಿಕ ವರ್ಷದಲ್ಲಿ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದ ಸಂಘದ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು ಜೊತೆಗೆ ಸರಕಾರಿ ಪ್ರೌಢಶಾಲೆ ಎಲಿಮಲೆ ಇಲ್ಲಿ ವಿಶೇಷ ಸಾಧನೆ ಮಾಡಿದ ವಿದ್ಯಾರ್ಥಿಯನ್ನು ಸನ್ಮಾನಿಸಲಾಯಿತು. ಸಂಘದ ಮೂಲಕ ಕ್ಯಾಂಪ್ಕೋದಲ್ಲಿ ಹೆಚ್ಚು ಅಡಿಕೆ ಮಾರಾಟ ಮಾಡಿದ ಸದಸ್ಯರುಗಳನ್ನು ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಸಂಘದ ಆಡಳಿತ ಮಂಡಳಿಯ ನಿರ್ದೇಶಕರು, ಸದಸ್ಯರು ಸಿಬ್ಬಂದಿ ವರ್ಗ ಸಂಘದ ಸದಸ್ಯರು ಭಾಗವಹಿಸಿದ್ದರು. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪ್ರಶಾಂತ್ ಪೂಂಬಾಡಿ ಸ್ವಾಗತಿಸಿ, ಸಂಘದ ಉಪಾಧ್ಯಕ್ಷ ಮಿತ್ರದೇವ ಮಡಪ್ಪಾಡಿ ವಂದಿಸಿದರು.
- Thursday
- November 21st, 2024