ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಎಲ್ಲಾ ಕ್ಷೇತ್ರಗಳಲ್ಲಿ ಸ್ಪರ್ಧೆ ನಡೆಸಲಿದ್ದು ಈ ಬಾರಿ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಿ ಹೆಚ್ಚಿನ ಪಂಚಾಯತ್ ಗಳಲ್ಲಿ ಅಧಿಕಾರಕ್ಕೆ ಬರುವ ವಿಶ್ವಾಸ ಇದೆ ಎಂದು ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್ ಜಯಪ್ರಕಾಶ್ ರೈ ಡಿ.12 ರಂದು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಕಳೆದ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿಗಳು 25ರಲ್ಲಿ ಐದು ಸ್ಥಾನಗಳನ್ನು ಪಡೆದಿದ್ದು, ಇದೀಗ ತಾಲೂಕು ವಿಭಜನೆಯ ನಂತರ 23 ಸ್ಥಾನಗಳಲ್ಲಿ ಚುನಾವಣೆ ನಡೆಯಲಿದ್ದು ಈ ಎಲ್ಲಾ ಕಡೆಗಳಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ಪಟ್ಟಿ ಬಹುತೇಕ ಪೂರ್ಣಗೊಂಡಿದೆ. ಮೀಸಲು ಕ್ಷೇತ್ರಗಳಲ್ಲಿ ಸೂಕ್ತ ಅಭ್ಯರ್ಥಿಗಳು ಸಿಗದ ಕಾರಣ ಕೆಲವೊಂದು ವಾರ್ಡ್ ಗಳಲ್ಲಿ ಬಾಕಿ ಇದೆ. ಸಾಮಾನ್ಯ ಕ್ಷೇತ್ರಗಳ ಪೈಕಿ ಕೆಲವೆಡೆ ಹೆಚ್ಚು ಆಕಾಂಕ್ಷಿಗಳು ಇರುವಲ್ಲಿ ಒಂದೆರಡು ದಿನದಲ್ಲಿ ಅಭ್ಯರ್ಥಿ ಪಟ್ಟಿ ಅಂತಿಮಗೊಳಿಸಲಾಗುವುದು.ಪ್ರತಿಯೊಂದು ಗ್ರಾಮಗಳಿಗೂ ಗ್ರಾಮ ಸಮಿತಿ ಅಧ್ಯಕ್ಷರು, ಗ್ರಾಮ ಉಸ್ತುವಾರಿ ಗಳನ್ನು ನೇಮಿಸಲಾಗಿದೆ. ಎಲ್ಲಾ ಕಡೆಗಳಲ್ಲಿ ಉತ್ತಮ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗಿದೆ. ಈ ಬಾರಿಯ ಚುನಾವಣೆಯಲ್ಲಿ ಮತದಾರರು ಬದಲಾವಣೆ ಬಯಸಿದ್ದಾರೆ.
ಕೇವಲ ಭಾವನೆಗಳ ಆಧಾರದಲ್ಲಿ ಮತ ಪಡೆಯುವ ಬಿಜೆಪಿಯ ಜನಪ್ರಿಯತೆ ಈಗ ಕುಸಿಯುತಿದೆ. ಎಪಿಎಂಸಿ ತಿದ್ದುಪಡಿ ಬಗ್ಗೆ ದೇಶದಾದ್ಯಂತ ಪ್ರತಿಭಟನೆಗಳು ನಡೆಯುತ್ತಿದ್ದು ಬ್ರಿಟಿಷರಂತೆ ವರ್ತಿಸುವುದು ಸರಿಯಲ್ಲ ಎಂದು ಹೇಳಿದರು.ಸರಕಾರಗಳು ವ್ಯವಸ್ಥೆಗಳನ್ನು ಸರಿಪಡಿಸಬೇಕು ವಿನಹ ಖಾಸಗಿ ಕಂಪನಿಗಳಿಗೆ ನೀಡಿ ದೇಶದ ಜನತೆಯನ್ನು ಗುಲಾಮಗಿರಿಗೆ ತಳ್ಳುವುದು ಸರಿಯಲ್ಲ ಎಂದರು. ಗ್ರಾಮದ ಅಭಿವೃದ್ಧಿಯನ್ನು ಬಿಜೆಪಿ ಸರಕಾರ ಸಂಪೂರ್ಣ ಮರೆತಿದೆ. ಬಡವರಿಗೆ ನೀಡುವ ಅಕ್ಕಿಯನ್ನು ಕಡಿತ ಮಾಡಿದೆ. ವಸತಿ ಯೋಜನೆಗಳಲ್ಲಿ ಮನೆ ನೀಡುತ್ತಿಲ್ಲ. ಹಣ ಬಾರದೆ ಮನೆ ಅರ್ಧಕ್ಕೆ ನಿಂತ ಕುಟುಂಬಗಳು ಬೀದಿಗೆ ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಪೆಟ್ರೋಲ್, ಡೀಸಿಲ್ , ಗ್ಯಾಸ್ ಬೆಲೆ ಏರಿಕೆಯಾದಾಗ ರಸ್ತೆ ಬದಿಗಳಲ್ಲಿ ಸ್ಟವ್ ಗಳನ್ನು ಇಟ್ಟು ಅಡುಗೆ ಮಾಡಿದ ಬಿಜೆಪಿಯ ಮುಖಂಡರು ಈಗ ಎಲ್ಲಿ ಹೋಗಿದ್ದಾರೆ ಎಂದು ಕೇಳಿದರು. ಕಸ್ತೂರಿರಂಗನ್ ವರದಿಯ ಬಗ್ಗೆ ಕೇಂದ್ರ ಸರಕಾರ ಪುನರ್ ಪರಿಶೀಲನೆ ನಡೆಸಿ ಸಾಧಕ ಬಾದಕಗಳನ್ನು ತಿಳಿದು ಜನರಿಗೆ ತೊಂದರೆಯಾಗದಂತೆ ಅನುಷ್ಠಾನ ಮಾಡಬೇಕು ಎಂದು ಅವರು ಒತ್ತಾಯಿಸಿದರು. ಕೆ.ಎಫ್.ಡಿ.ಸಿ. ಕಾರ್ಮಿಕರಿಗೆ ನಿಯಮದಂತೆ ಶೇ.20 ಬೋನಸ್ ಸಿಗಬೇಕು. ಆದರೆ ಈ ಬಾರಿ 8.33 ಶೇ. ಮಾತ್ರ ನೀಡಲಾಗಿದೆ. ಈ ಕ್ರಮ ಸರಿಯಲ್ಲ. ಕಾರ್ಮಿಕರಿಗೆ ಕೊಡಬೇಕಾದುದನ್ನು ನೀಡಬೇಕು ಎಂದು ಪತ್ರಿಕಾಗೋಷ್ಠಿ ಯಲ್ಲಿದ್ದ ಜೀವರತ್ನ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ನಗರ ಕಾಂಗ್ರೆಸ್ ಅಧ್ಯಕ್ಷ ಶಶಿಧರ.ಎಂ.ಜೆ, ಮುಖಂಡರಾದ ಎಸ್.ಸಂಶುದ್ದೀನ್, ನಂದರಾಜ ಸಂಕೇಶ, ಭವಾನಿಶಂಕರ ಕಲ್ಮಡ್ಕ, ಚೇತನ್ ಕಜೆಗದ್ದೆ ಉಪಸ್ಥಿತರಿದ್ದರು.
- Thursday
- November 21st, 2024