ರೈತ ಕಾರ್ಮಿಕ ದಲಿತ ಒಕ್ಕೂಟವು ರಾಷ್ಟ್ರೀಯ ಮಟ್ಟದಲ್ಲಿ ದೇಶದಾದ್ಯಂತ ಕೇಂದ್ರ ಸರಕಾರದ ಕೃಷಿ ಕಾಯ್ದೆ 2020 ಹಿಂಪಡೆಯಲು ಆಗ್ರಹಿಸಿ ಡಿ.8 ರಂದು ಭಾರತ ಬಂದ್ ಘೋಷಣೆಗೆ ಬೆಂಬಲ ವ್ಯಕ್ತಪಡಿಸಿ, ಸುಳ್ಯ ಜ್ಯೋತಿ ವೃತ್ತದಿಂದ ಗಾಂಧಿನಗರ ತನಕ ಮೌನ ಪ್ರತಿಭಟನಾ ಮೆರವಣಿಗೆ ನಡೆಸಿ ಸುಳ್ಯ ಖಾಸಗಿ ಬಸ್ ನಿಲ್ದಾಣ ಬಳಿ ಸಭೆ ನಡೆಸಲಾಯಿತು.
ಕೃಷಿ ಕಾಯ್ದೆ 2020 ಹಿಂಪಡೆಯುವಂತೆ ಆಗ್ರಹಿಸಿ ಭಾರತ್ ಬಂದ್ ಯಶಸ್ವಿಗೆ ಸಹಕರಿಸಲು ಈ ಪ್ರತಿಭಟನಾ ಸಭೆಯನ್ನು ಆಯೋಜಿಸಲಾಗಿದೆ ಎಂದು ಸಂಘಟಕರು ತಿಳಿಸಿದರು. ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕಾರ್ಮಿಕ ಮುಖಂಡ ಕೆಪಿ ಜೋನಿ ನೂತನ ಕೃಷಿ ಕಾಯ್ದೆಗಳು ಗುತ್ತಿಗೆ ಕೃಷಿ ಪದ್ಧತಿಯ ಮೂಲಕ ಕಾರ್ಪೊರೇಟ್ ದಲ್ಲಾಳಿಗಳಿಗೆ ಮುಕ್ತ ಅವಕಾಶವನ್ನು ಒದಗಿಸುತ್ತದೆ. ಮತ್ತೊಂದೆಡೆಯಲ್ಲಿ ಜನಸಾಮಾನ್ಯರ ದೈನಂದಿನ ಜೀವನದಲ್ಲಿ ಬಳಕೆಯಾಗುವ ಕೃಷಿ ಉತ್ಪನ್ನಗಳನ್ನು ಅವಶ್ಯ ವಸ್ತುಗಳ ತಿದ್ದುಪಡಿ ಕಾಯ್ದೆಯ ಮೂಲಕ ಗೊಳಿಸಲಾಗುತ್ತಿದೆ ಆಹಾರ ಧಾನ್ಯಗಳು ಬೇಳೆಕಾಳುಗಳು ಈರುಳ್ಳಿ ಆಲೂಗಡ್ಡೆ ಎಣ್ಣೆ ಬೀಜ ಇವೆಲ್ಲವೂ ಅವಶ್ಯ ವಸ್ತುಗಳ ಪರಿಧಿಯಿಂದ ಹೊರತಾಗುತ್ತವೆ. ಈ ಪದಾರ್ಥಗಳನ್ನು ಸಗಟು ಮಾರುಕಟ್ಟೆಯಲ್ಲಿ ಖರೀದಿಸಿ ದಾಸ್ತಾನು ಮಾಡುವ ಸಾಮರ್ಥ್ಯ ಇರುವ ಕಾರ್ಪೊರೇಟ್ ಉದ್ಯಮಿಗಳು ಮಾರುಕಟ್ಟೆಯಲ್ಲಿ ಈ ಪದಾರ್ಥಗಳ ಬೆಲೆಗಳನ್ನು ನಿಯಂತ್ರಿಸುವರಾಗಿರುತ್ತಾರೆ ಎಂದು ಹೇಳಿದರು.ಇಂದು ದೇಶವನ್ನು ಕಾಡುತ್ತಿರುವ ಅರೆ-ಊಳಿಗಮಾನ್ಯ ವ್ಯವಸ್ಥೆ ಕೃಷಿಕ ಸಮುದಾಯದಲ್ಲಿ ಆರ್ಥಿಕ ತಾರತಮ್ಯ ಮತ್ತು ಅಂತರಗಳನ್ನು ಹಿಗ್ಗಿಸು ತ್ತಿರುವುದನ್ನು ಗಮನಿಸಬಹುದು ಎಂದು ಅವರು ಹೇಳಿದರು.
ರೈತ ಸಂಘದ ಪ್ರಧಾನ ಕಾರ್ಯದರ್ಶಿ ಭರತ್ ಕುಮಾರ್ ಮಾತನಾಡಿ ರೈತರ ವಿರೋಧವಿರುವ ಈ ಮೂರು ಮಸೂದೆಗಳು ರೈತರಿಗೆ ಶಾಪ ವಾಗಲಿದ್ದು ರೈತಾಪಿ ವರ್ಗದವರನ್ನು ಅಳಿವಿನ ಅಂಚಿಗೆ ಕೊಂಡೊಯ್ಯಲು ಈಗಿನ ಸರ್ಕಾರಗಳು ಪ್ರಯತ್ನಿಸುತ್ತಿದೆ ಎಂದು ಹೇಳಿದರು. ಪ್ರತಿಭಟನಾ ಸಭೆಯಲ್ಲಿ ರೈತ ಸಂಘದ ಮುಖಂಡರಾದ ಪದ್ಮನಾಭ ಗೌಡ, ಮಾಧವ ಸುಳ್ಯಕೋಡಿ, ತೀರ್ಥರಾಮ ಉಳುವಾರು, ರೈತಸಂಘದ ಮಾಧ್ಯಮ ಮುಖ್ಯಸ್ಥ ಅಶೋಕ ಎಡಮಲೆ, ಎಎಪಿ ಪಕ್ಷದ ಮುಖಂಡ ರಶೀದ್ ಜಟ್ಟಿಪಳ್ಳ, ನ್ಯಾಯವಾದಿ ಪ್ರದೀಪ್ ಕುಮಾರ್ ಕೆ, ಕಾರ್ಮಿಕ ಸಂಘಟನೆಯ ಮುಖಂಡ ಶ್ರೀಧರ ಕಡೆಪಾಲ, ಮೊದಲಾದವರು ಸಭೆಯನ್ನು ಉದ್ದೇಶಿಸಿ ಮಾತನಾಡಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು. ರೈತ ಸಂಘದ ಜಿಲ್ಲಾ ಸಮಿತಿ ಉಪಾಧ್ಯಕ್ಷ ದಿವಾಕರ ಪೈ, ಜೊತೆ ಕಾರ್ಯದರ್ಶಿ ಚನ್ನಕೇಶವ ಕಣಿಪಿಲ, ರೈತ ಸಂಘಟನೆಯ ಮುಖಂಡರುಗಳು, ಕಾರ್ಮಿಕ ಸಂಘಟನೆಯ ನೇತಾರರು, ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಇದರ ಸುಳ್ಯ ಸಮಿತಿ ಅಧ್ಯಕ್ಷ ಕಲಂದರ್ ಎಲಿಮಲೆ, ಸಾಮಾಜಿಕ ಕಾರ್ಯಕರ್ತ ಡಿಎಂಶಾರಿಖ್, ಮೊದಲಾದವರು ಉಪಸ್ಥಿತರಿದ್ದರು. ಪ್ರತಿಭಟನಾ ಸಭೆಯಲ್ಲಿ ಸುಳ್ಯ ರೈತ ಸಂಘಟನೆಯ ಸಂಚಾಲಕ ಸೆಬಾಸ್ಟಿಯನ್ ಪ್ರಧಾನಿ ನರೇಂದ್ರ ಮೋದಿ ಅವರ ಶೈಲಿಯಲ್ಲಿ ಹಿಂದಿಯಲ್ಲಿ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿ ಜನರ ಗಮನ ಸೆಳೆದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಮೋದಿಯವರು ಬಾಯಿಯೋ ಬೆಹನೋ ಎಂದು ಹೇಳಿ ದೇಶದ ಸಂಪತ್ತನ್ನು ಕಾರ್ಪೊರೇಟರ್ ಗಳಿಗೆ ಹಂಚುತ್ತಿದ್ದಾರೆ ಎಂದು ಹೇಳಿದರು. ಭರತ್ ಕುಮಾರ್ ಕೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಇದಕ್ಕೂ ಮುನ್ನ ಜ್ಯೋತಿವೃತ್ತದಿಂದ ನಡೆದ ಮೆರವಣಿಗೆಯಲ್ಲಿ ಮತ್ತು ಪ್ರತಿಭಟನಾ ಸಭೆಯಲ್ಲಿ ಸೇರಿದ ಜನರ ಸಂಖ್ಯೆ ಬಹಳ ವಿರಳವಾಗಿತ್ತು.