Ad Widget

ವ್ಯವಸ್ಥೆಗಳಲ್ಲಿ ಲೋಪವಿರುವಾಗ ಕಾಯಿದೆಗಳನ್ನು ತಿದ್ದುಪಡಿ ಮಾಡಬೇಕಾಗುತ್ತದೆ. ರೈತರ ಅಭಿವೃದ್ಧಿಗಾಗಿ ತಿದ್ದುಪಡಿ ಮಾಡಲಾಗಿದೆ ವಿನಃ ತೊಂದರೆ ನೀಡಲು ಅಲ್ಲ – ಎ.ವಿ. ತೀರ್ಥರಾಮ


ಪ್ರಸ್ತುತ ದೇಶದಾದ್ಯಂತ ರೈತರ ಕೃಷಿ ಮಸೂದೆ ಜಾರಿಗೊಳಿಸಿದ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿದ್ದು, ಇದರ ಅಂಗವಾಗಿ ಭಾರತೀಯ ಜನತಾ ಪಾರ್ಟಿಯ ರೈತ ಮೋರ್ಚಾ ಸಂಘದ ವತಿಯಿಂದ ಇಂದು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಎ.ವಿ ತೀರ್ಥರಾಮ ಈ ಬಗ್ಗೆ ಮಾತನಾಡಿದರು. ಭಾರತೀಯ ಜನತಾ ಪಾರ್ಟಿಯ ರೈತಪರ ನಿಲುವಿನ ವಿರುದ್ಧ ರಾಜಕೀಯ ಪ್ರೇರಿತ ಮಧ್ಯವರ್ತಿಗಳ ಷಡ್ಯಂತ್ರ ಈ ಪ್ರತಿಭಟನೆಗಳ ಭಾಗವಾಗಿದೆ ಎಂದು ಹೇಳಿದರು. ದೇಶದ ಪ್ರಧಾನಿ ನರೇಂದ್ರ ಮೋದಿಯವರು ಕೃಷಿ ಕ್ಷೇತ್ರದ ಸುಧಾರಣೆಗಾಗಿ ದೂರದೃಷ್ಟಿಯ ಅನೇಕ ಯೋಜನೆಗಳನ್ನು ರೂಪಿಸಿದ್ದು ರೈತರ ಆದಾಯವನ್ನು 2022 ರ ಒಳಗೆ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಕೃಷಿ ಸುಧಾರಣೆಗೆ ಸಂಬಂಧಪಟ್ಟಂತೆ ಮೂರು ಮಹತ್ವದ ಮಸೂದೆ ಅನುಷ್ಠಾನಕ್ಕೆ ತಂದಿದ್ದಾರೆ ಎಂದು ಹೇಳಿದರು. ರೈತರ ಉತ್ಪನ್ನ ವ್ಯಾಪಾರ ಮತ್ತು ವಾಣಿಜ್ಯ ಮಸೂದೆ, ರೈತರ ಬೆಳೆಗಳಿಗೆ ಬೆಲೆ,ಭರವಸೆ ಮತ್ತು ಸೇವಾ ಒಪ್ಪಂದ ಮಸೂದೆ, ಅಗತ್ಯ ಸರಕುಗಳ ಮಸೂದೆ ಜಾರಿಗೆ ತಂದಿದ್ದು ಇದು ಜನಪರ ಮಸೂದೆಯೇ ಹೊರತು , ವಿರೋಧ ಪಕ್ಷದವರು ಹೇಳುವ ಕೆಟ್ಟ ಮಸೂದೆಯಲ್ಲ ಎಂದು ಹೇಳಿದರು. ಜನಪರ ಕೆಲಸಗಳನ್ನು ಮಾಡಿ ದೇಶದ ಆರ್ಥಿಕತೆ ಹೆಚ್ಚಿಸುವ ಕೆಲಸವನ್ನು ನಮ್ಮ ಪ್ರಧಾನಮಂತ್ರಿಯವರು ಮಾಡುತ್ತಿದ್ದು, ಶೇಕಡಾ 65 ಭಾಗ ಕೃಷಿ ಕ್ಷೇತ್ರದಲ್ಲಿ ನಮ್ಮ ದೇಶವಿದ್ದು ಜಿಡಿಪಿ ದರವನ್ನು ಹೆಚ್ಚಿಸಿ ರೈತರಿಗೆ ಸಹಾಯವಾಗುವಂತೆ ಮಸೂದೆಗಳನ್ನು ಜಾರಿಗೆ ತರಲಾಗಿದೆ. ಬೇವು ಲೇಪಿತ ಯೂರಿಯಾ ಗೊಬ್ಬರದ ಕೊರತೆ ನೀಗಿದ್ದು ಯೂರಿಯಾ ಗೊಬ್ಬರದ ದುರುಪಯೋಗ ಸಂಪೂರ್ಣವಾಗಿ ನಿಂತಿದೆ. 18000 ಹಳ್ಳಿಗಳು ಸ್ವಾತಂತ್ರ್ಯ ಬಂದ 70 ವರ್ಷಗಳ ನಂತರ ಕೂಡ ವಿದ್ಯುತ್ ಸಂಪರ್ಕ ಪಡೆದಿರಲಿಲ್ಲ, ಈಗ ಸಮಸ್ಯೆ ಪರಿಹರಿಸಲಾಗಿದೆ. ಕಿಸಾನ್ ಕಾರ್ಡುಗಳ ವಿತರಣೆಯ ಮೂಲಕ ರೈತರಿಗೆ ಬ್ಯಾಂಕ್ ಸೌಲಭ್ಯಗಳ ಅವಕಾಶಗಳನ್ನು ವಿಸ್ತರಣೆ ಮಾಡಲಾಗಿದೆ. ರಸಗೊಬ್ಬರ ಉತ್ಪಾದನೆಯಲ್ಲಿ ಸ್ವಾವಲಂಬನೆ ಹೆಚ್ಚಿಸಲು ಈಗಾಗಲೇ ಆರು ಬೃಹತ್ ರಸಗೊಬ್ಬರ ಉತ್ಪಾದನಾ ಘಟಕಗಳ ಸ್ಥಾಪನೆಗೆ 48 ಸಾವಿರ ಕೋಟಿ ರೂಪಾಯಿಗಳ ಬಂಡವಾಳ ಹೂಡಿಕೆ ಮಾಡಲಾಗಿದೆ. ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಮೂಲಕ ಸಂಕಷ್ಟದಲ್ಲಿರುವ ಪ್ರತಿಯೊಬ್ಬ ರೈತರಿಗೂ ಅನುದಾನ ಬಿಡುಗಡೆ ಗೊಳಿಸುವಲ್ಲಿ ಕೇಂದ್ರ ಸರ್ಕಾರ ಯಶಸ್ವಿಯಾಗಿದೆ. ಈ ರೀತಿಯ ಹತ್ತು ಹಲವಾರು ಯೋಜನೆಗಳನ್ನು ರೈತಾಪಿ ವರ್ಗದವರಿಗೆ ಸರ್ಕಾರವು ನೀಡಿದೆ. ಇದೀಗ ರಾಜಕೀಯ ಕುತಂತ್ರದಿಂದ ವಿರೋಧಪಕ್ಷಗಳು ಪ್ರತಿಭಟನೆಯ ನಾಟಕವನ್ನು ಆಡುತ್ತಿದ್ದಾರೆ ಎಂದು ಹೇಳಿದರು. ಇತ್ತೀಚಿನ ದಿನಗಳಲ್ಲಿ ದೇಶದ ಕೆಲವು ಆರ್ಥಿಕ ವ್ಯವಸ್ಥೆಗಳು ಖಾಸಗೀಕರಣಗೊಳಿಸುತ್ತಿರುವ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಇವೆಲ್ಲವೂ ದೇಶದ ಮತ್ತು ದೇಶದ ಜನತೆಯ ಅಭಿವೃದ್ಧಿಗಾಗಿ ಮಾತ್ರ ಎಂದು ಅವರು ಹೇಳಿದರು. ದೇಶದ ಅಭಿವೃದ್ಧಿಯನ್ನು ಸಹಿಸದ ವಿಪಕ್ಷಗಳು ಹತಾಶೆಯಿಂದ ಪ್ರತಿಕ್ರಿಯಿಸುತ್ತಿದ್ದಾರೆ ಎಂದು ಹೇಳಿದರು.

. . . . . . .


ವಿದ್ಯುತ್ ಖಾಸಗೀಕರಣ ಕುರಿತು ಕೇಳಿದಾಗ ಸರಕಾರವು ಉಚಿತವಾಗಿ ಕೃಷಿಕರಿಗೆ ನೀಡುವ ವಿದ್ಯುತ್ ಮುಂದೆಯೂ ಉಚಿತವಾಗಿ ನೀಡಲಾಗುವುದು. ಅದರಲ್ಲಿ ಕೃಷಿಕರಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ರೈತ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಮಹೇಶ್ ರೈ ಮೇನಾಲ, ತಾಲೂಕು ಪಂಚಾಯತ್ ಅಧ್ಯಕ್ಷ ಚನಿಯ ಕಲ್ತಡ್ಕ, ಮುಖಂಡರಾದ ಜಯರಾಮ ಮುಂಡೋಳಿ ಮೂಲೆ, ಬಾಲಚಂದ್ರ ಬಿ.ಎಚ್., ಪ್ರಶಾಂತ್ ಪಾನತ್ತಿಲ, ಸತೀಶ್ ಮೊದಲಾದವರು ಉಪಸ್ಥಿತರಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

Comments (1)

  1. ಕೆಲವೆಲ್ಲಾ ಸತ್ಯಗಳನ್ನು ಬಿಜೆಪಿಯವರು ಒಪ್ಪಿಕೊಂಡದ್ದಕ್ಕೆ ದನ್ಯವಾದಗಳು ವಿದ್ಯುತ್ ಖಾಸಾಗೀಕರಣ ಮಾಡ್ತಾರೆನ್ನೋದು ಗ್ಯಾರೆಂಟಿ ಆಯ್ತು ಹಾಗೇ ಸಾರ್ವಜನಿಕ ಸಂಸ್ಥೆಗಳನ್ನು ಖಾಸಾಗಿಯವರಿಗೆ ಮಾರೋದನ್ನು ಒಪ್ಪಿಕೊಂಡರು ಇದಕ್ಕೆ ಬಿಜೆಪಿಯವರಿಗೆ ದನ್ಯವಾದಗಳು

error: Content is protected !!