
ದೆಹಲಿ ಮಿತ್ರ ಶ್ರೀ ವಸಂತ ಶೆಟ್ಟಿ ಬೆಳ್ಳಾರೆಯವರ ಆಶಯದಂತೆ ಕಳಂಜ ಗ್ರಾಮದ ಸುತ್ತಮುತ್ತಲಿನ ಜನರಿಗೆ ಅವರ ಗ್ರಾಮದ ಕಿಟಕಿಯಿಂದಲೇ ಸಾಂಸ್ಕೃತಿಕ ಜಗತ್ತಿನ ದರ್ಶನ ಮಾಡುವ ವಿಶಿಷ್ಟ ಪರಿಕಲ್ಪನೆಯೊಂದಿಗೆ, ಕಳಂಜ ಗ್ರಾಮದ ತಂಟೆಪ್ಪಾಡಿಯಲ್ಲಿ ‘ನಿನಾದ ಸಾಂಸ್ಕೃತಿಕ ಕೇಂದ್ರ’ವು ರೂಪುಗೊಂಡಿದ್ದು, ಇದರ ಉದ್ಘಾಟನಾ ಸಮಾರಂಭವು ಡಿ.05 ರಂದು ಜರುಗಿತು. ಉದ್ಘಾಟನೆಯನ್ನು ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟಿನ ಅಧ್ಯಕ್ಷರಾದ ಶ್ರೀ ಪಟ್ಲ ಸತೀಶ್ ಶೆಟ್ಟಿ ನೆರವೇರಿಸಿ ಮಾತನಾಡುತ್ತಾ ಗ್ರಾಮೀಣ ಪ್ರತಿಭೆಗಳ ಕಲಾ ಪ್ರದರ್ಶನಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ರೂಪುಗೊಂಡಿರುವ ನಿನಾದ ಸಾಂಸ್ಕೃತಿಕ ಕೇಂದ್ರವು ಅತ್ಯುತ್ತಮ ಕಲಾವಿದರನ್ನು ನಾಡಿಗೆ ನೀಡುವಂತಾಗಲಿ, ನಿನಾದ ಎಲ್ಲಾ ವರ್ಗದ ಜನರಿಗೆ ಮಾದರಿಯಾಗಿದ್ದು ವಿಶ್ವಮಟ್ಟದ ಕಲಾವಿದರು ರೂಪುಗೊಳ್ಳುವಲ್ಲಿ ಸಹಕಾರಿಯಾಗಲಿ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಧಾನಪರಿಷತ್ ಮಾಜಿ ಸದಸ್ಯರಾದ ಶ್ರೀ ಅಣ್ಣಾ ವಿನಯಚಂದ್ರ ಮಾತನಾಡಿ ಹಳ್ಳಿ ಸೊಗಡಿನ ನೈಜ ಪ್ರತಿಭೆಗಳಿಗೆ ಅತ್ಯುತ್ತಮ ವೇದಿಕೆಯನ್ನು ಒದಗಿಸುವುದರ ಮೂಲಕ ನಿನಾದ ಸಾಂಸ್ಕೃತಿಕ ಕೇಂದ್ರವು ಭಾರತೀಯ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಸಹಕಾರಿಯಾಗಲಿ ಎಂದು ಶುಭಹಾರೈಸಿದರು.

ಮುಖ್ಯ ಅತಿಥಿ ನೆಲೆಯಲ್ಲಿ ವಿಡಿಯೋ ಸಂವಾದದ ಮೂಲಕ ಮಾತನಾಡಿದ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು ಹಾಗೂ ಕರ್ನಾಟಕ ನಾಟಕ ಅಕಾಡೆಮಿಯ ಮಾಜಿ ಅಧ್ಯಕ್ಷರಾದ ಶ್ರೀ ಶ್ರೀನಿವಾಸ ಜಿ. ಕಪ್ಪಣ್ಣ ‘ನಿನಾದ’ವು ಸಾಂಸ್ಕೃತಿಕವಾಗಿ ಸ್ಥಳೀಯ ಪ್ರತಿಭೆಗಳ ಪ್ರತಿಭಾ ಪ್ರದರ್ಶನಕ್ಕೆ ಅವಕಾಶ ನೀಡುವುದರೊಂದಿಗೆ ಅವರಲ್ಲಿ ಅಡಕವಾಗಿರುವ ಸುಪ್ತ ಕಲೆಗೆ ಪ್ರೋತ್ಸಾಹ ನೀಡುವಲ್ಲಿಯೂ ಮಹತ್ವದ ಕಾರ್ಯಗಳನ್ನು ಮಾಡುವಂತಾಗಲಿ ಎಂದು ನುಡಿದರು.
ವೇದಿಕೆಯಲ್ಲಿ ಟ್ರಸ್ಟ್‌ನ ಅಧ್ಯಕ್ಷರಾದ ಐತ್ತಪ್ಪ ಶೆಟ್ಟಿ.ಪಿ ಉಪಸ್ಥಿತರಿದ್ದರು. ಟ್ರಸ್ಟ್‌ನ ಕಾರ್ಯದರ್ಶಿ ಹಾಗೂ ನಿನಾದ ಸಾಂಸ್ಕೃತಿಕ ಕೇಂದ್ರದ ಮುಂದಾಳು ವಸಂತ ಶೆಟ್ಟಿ ಬೆಳ್ಳಾರೆಯವರು ಪ್ರಸ್ತಾವನೆಗೈದರು. ಕಾರ್ಯಕ್ರಮದಲ್ಲಿ ವಿಶ್ಮಿತಾ ಶೆಟ್ಟಿ ಪ್ರಾರ್ಥಿಸಿ, ಐತ್ತಪ್ಪ ಶೆಟ್ಟಿ ಸ್ವಾಗತಿಸಿ, ಶ್ರೀಮತಿ ವಿನಯ.ವಿ ಶೆಟ್ಟಿ ವಂದಿಸಿದರು. ಶಿಕ್ಷಕರಾದ ರಾಮಕೃಷ್ಣ ಭಟ್ ಚೂಂತಾರು ನಿರೂಪಿಸಿದರು.
