
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಸುಳ್ಯ ತಾಲೂಕು ಪಂಚಾಯತ್, ಮಡಪ್ಪಾಡಿ ಗ್ರಾಮ ಪಂಚಾಯತ್, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಪತ್ರಕರ್ತರ ಸಂಘದ ವತಿಯಿಂದ ಗ್ರಾಮ ವಾಸ್ತವ್ಯ ಮಾಡಿದ ಸುಳ್ಯ ತಾಲೂಕಿನ ಮಡಪ್ಪಾಡಿ ಗ್ರಾಮವನ್ನು ಪ್ಲಾಸ್ಟಿಕ್ ಮುಕ್ತ ಗ್ರಾಮ ಮಾಡುವ ಅಭಿಯಾನಕ್ಕೆ ಡಿ.5 ರಂದು ಚಾಲನೆ ನೀಡಲಾಯಿತು.

ಮಡಪ್ಪಾಡಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಪುತ್ತೂರು ತಾ.ಪಂ. ಪ್ರಭಾರ ಕಾರ್ಯನಿರ್ವಹಣಾಧಿಕಾರಿ (ಪ್ರೋಬೆಷನರಿ ಐ.ಎ.ಎಸ್) ಮೋನಾ ರೋತ್ ಉದ್ಘಾಟಿಸಿ, ಪ್ಲಾಸ್ಟಿಕ್ ಸಂಗ್ರಹಿಸಿ ತಂದವರಿಗೆ ಪ್ರತಿಯಾಗಿ ಅಕ್ಕಿ ವಿತರಿಸಿ ಮಾತನಾಡಿದರು. ಕರಾವಳಿ ಭಾಗದಲ್ಲಿ ಪ್ಲಾಸ್ಟಿಕ್ ಕಸದ ಸಮಸ್ಯೆ ಹೆಚ್ಚಿದೆ, ನಾವೆಲ್ಲರೂ ಸೇರಿ ಈ ಪ್ಲಾಸ್ಟಿಕ್ ನಿರ್ಮೂಲನ ಕಾರ್ಯದಲ್ಲಿ ಕೈ ಜೋಡಿಸಬೇಕೆಂದರು.
ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಅಧ್ಯಕ್ಷತೆ ವಹಿಸಿದ್ದರು. ಸುಳ್ಯ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಎನ್.ಭವಾನಿಶಂಕರ್, ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೃಷ್ಣ ಬೆಟ್ಟ, ಮಡಪ್ಪಾಡಿ ಗ್ರಾ.ಪಂ.ಆಡಳಿತಾಧಿಕಾರಿ ಸುರೇಶ್ , ಪಿಡಿಓ ಧನಪತಿ ಬಿ. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಕಾರ್ಯಕ್ರಮ ದಲ್ಲಿ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆ, ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ಪತ್ರಕರ್ತರ ಸಂಘದ ಜಿಲ್ಲಾ ನಿರ್ದೇಶಕ ಗಂಗಾಧರ ಕಲ್ಲಪ್ಪಳ್ಳಿ ಸ್ವಾಗತಿಸಿ, ಜಿಲ್ಲಾ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ವಂದಿಸಿದರು. ಲೋಕೇಶ್ ಪೆರ್ಲಂಪಾಡಿ ಕಾರ್ಯಕ್ರಮ ನಿರೂಪಿಸಿದರು.



ಈ ಕಾರ್ಯಕ್ರಮದಲ್ಲಿ ಒಂದು ಕೆ.ಜಿ ಪ್ಲಾಸ್ಟಿಕ್ ತರುವ ಗ್ರಾಮಸ್ಥರಿಗೆ 10 ಕೆ.ಜಿ.ಅಕ್ಕಿ, 500 ಗ್ರಾಂ. ಪ್ಲಾಸ್ಟಿಕ್ ಗೆ 5 ಕೆ.ಜಿ.ಅಕ್ಕಿ, 100 ಗ್ರಾಂ. ಪ್ಲಾಸ್ಟಿಕ್ ನೀಡಿದವರಿಗೆ 1 ಕೆ.ಜಿ. ಅಕ್ಕಿಯನ್ನು ವಿತರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪ್ಲಾಸ್ಟಿಕ್ ಸಂಗ್ರಹಿಸಿ ತಂದ ಆಶಾ ಕಾರ್ಯಕರ್ತೆ ಉಮಾವತಿ, ಅಂಗನವಾಡಿ ಕಾರ್ಯಕರ್ತೆ ಹವ್ಯ, ಕೀರ್ತನ್ ಕೊಡಪಾಲ ಅಕ್ಕಿಯನ್ನು ಪಡೆದುಕೊಂಡರು.