ಬೆಂಗಳೂರು: ಲಾಕ್ ಡೌನ್ ಕಾರಣದಿಂದ ರಾಜ್ಯದ ದೇವಾಲಯಗಳಲ್ಲಿ ಧಾರ್ಮಿಕ ಚಟುವಟಿಕೆಗಳನ್ನು ನಿಲ್ಲಿಸಲಾಗಿದೆ. ಇದರಿಂದಾಗಿ ಭಕ್ತರು ಸ್ವಲ್ಪಮಟ್ಟಿನ ಸಂಕಷ್ಟಕ್ಕೆ ಒಳಗಾಗಿದ್ದರು. ಆದರೆ ಇದನ್ನು ಪರಿಹರಿಸುವ ಸಲುವಾಗಿ ಧಾರ್ಮಿಕ ದತ್ತಿ ಇಲಾಖೆ ಕೆಲವು ದೇವಸ್ಥಾನಗಳಲ್ಲಿ ಆನ್ ಲೈನ್ ಪೂಜೆಗೆ ಭಕ್ತರಿಗೆ ಅವಕಾಶ ನೀಡಿದೆ.
ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿರುವ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು, ಮುಜರಾಯಿ ದೇವಾಲಯಗಳಲ್ಲಿ ಆನ್ ಲೈನ್ ಮೂಲಕವೇ ಪೂಜೆಗೆ ಅವಕಾಶ ಕಲ್ಪಿಸಲಾಗುತ್ತದೆ. ಅಲ್ಲದೇ ಭಕ್ತರು ಮನೆಯಲ್ಲಿಯೇ ಕುಳಿತು ಪೂಜೆಯ ನೇರ ಪ್ರಸಾರವನ್ನು ವೀಕ್ಷಿಸಬಹುದಾಗಿದೆ. ಮಂಗಳಾರತಿ, ಕುಂಕುಮಾರ್ಚನೆ ಸೇರಿದಂತೆ 15 ಬಗೆಯ ಪೂಜಾ ಸೇವೆಗಳನ್ನು ಭಕ್ತರು ಆನ್ ಲೈನ್ ಮೂಲಕವೇ ನೆರವೇರಿಸಬಹುದಾಗಿದೆ. ಪೂಜಾ ಪ್ರಸಾದವನ್ನು ಮನೆಗೆ ತಲುಪಿಸುವ ವ್ಯವಸ್ಥೆ ಮಾಡಲಾಗುವುದು ಎಂದರು.
ಪ್ರಮುಖವಾಗಿ ಕುಕ್ಕೆ ಸುಬ್ರಹ್ಮಣ್ಯ, ಕಟೀಲಿನ ದುರ್ಗಾಪರಮೇಶ್ವರಿ ದೇವಸ್ಥಾನ, ಬೆಂಗಳೂರಿನ ಬನಶಂಕರಿ ದೇವಸ್ಥಾನ, ಸವದತ್ತಿಯ ಯಲ್ಲಮನ ದೇವಸ್ಥಾನ, ನಂಜನಗೂಡಿನ ಶ್ರೀಕಂಠ ದೇವಸ್ಥಾನ, ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನ ಸೇರಿದಂತೆ ರಾಜ್ಯದ ಪ್ರಮುಖ ದೇವಸ್ಥಾನಗಳಲ್ಲಿ ಆನ್ ಲೈನ್ ಪೂಜೆ ನೆರವೇರಿಸಲಾಗುತ್ತದೆ ಎಂದು ತಿಳಿದುಬಂದಿದೆ.