ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚಿನ ದಿನಗಳಲ್ಲಿ ವೆಬ್ಸೈಟ್ ಚಾನೆಲ್ ಗಳಲ್ಲಿ ದೇಶ-ವಿದೇಶದ ಸುದ್ದಿಗಳು ಕ್ಷಣ-ಕ್ಷಣದ ಮಾಹಿತಿಗಳನ್ನು ನೀಡುತ್ತಿದ್ದರು ಸ್ಥಳೀಯ ವೆಬ್ಸೈಟ್ ಗಳ ಸುದ್ದಿಗಳಿಗೆ ಅಧಿಕ ಮಾನ್ಯತೆ ಇದೆ ಎಂದು ಡಿವೈಎಸ್ಪಿ ದಿನಕರ ಶೆಟ್ಟಿ ಸುಳ್ಯದಲ್ಲಿ ನೂತನವಾಗಿ ಆರಂಭಗೊಂಡ ಅಮರ ಸುಳ್ಯ ಸುದ್ದಿ ವೆಬ್ಸೈಟ್ ಗೆ ಚಾಲನೆ ನೀಡುತ್ತಾ ಮಾತನಾಡಿದರು.
ಮೊಬೈಲ್ ಗಳಲ್ಲಿ ಹಲವಾರು ಸುಳ್ಳು ಸುದ್ದಿಗಳನ್ನು ಹಬ್ಬಿಸಿ ಜನರನ್ನು ಭಯದ ವಾತಾವರಣದಲ್ಲಿ ಜೀವಿಸುವಂತೆ ಇತ್ತೀಚಿನ ದಿನಗಳಲ್ಲಿ ಕಂಡು ಬರುತ್ತಿದೆ. ಯಾವುದೇ ಪತ್ರಿಕೆಗಳಾಗಲಿ ನೈಜ್ಯ ಸುದ್ದಿಯನ್ನು ನೀಡುವುದು ಮತ್ತು ಸ್ಥಳೀಯ ವಿಷಯಗಳನ್ನು ಸಂಗ್ರಹಿಸಿ ಮಾಹಿತಿ ನೀಡುವುದು ಉತ್ತಮ ಕೆಲಸ ಎಂದು ಅವರು ಹೇಳಿದರು. ಆನ್ಲೈನ್ ಮೂಲಕ ಕ್ಲಪ್ತ ಸಮಯದಲ್ಲಿ ವರದಿ ಬಿತ್ತರಿಸುವ ಕಾರ್ಯಕ್ಕೆ ಅಮರಸುಳ್ಯ ಸುದ್ದಿಪತ್ರಿಕೆ ಕೈಹಾಕಿದೆ ಯಶಸ್ವಿಯಾಗಿ ಮುನ್ನಡೆಯಲಿ. ಅದೇರೀತಿ ಆದಷ್ಟು ಶೀಘ್ರ, ಶೀಘ್ರವಾಗಿ ನ್ಯೂಸ್ ಗಳನ್ನು ನೀಡುವಂತಾಗಲಿ ಎಂದು ಹಾರೈಸಿದರು.
ಕಳೆದ ಎರಡು ತಿಂಗಳಿನಿಂದ ಮಹಾಮಾರಿ ಕರೋನವೈರಸ್ ನಿಂದಾಗಿ ದೇಶಾದ್ಯಂತ ಜನತೆಯಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದ್ದು ಕಣ್ಣಿಗೆ ಕಾಣದ ಈ ವೈರಸ್ ಮನುಷ್ಯ ಕುಲವನ್ನೇ ಬೆಚ್ಚಿಬೀಳಿಸುವಂತೆ ಮಾಡಿದೆ ಎಂದರು. ನಾವು ಚಿಕ್ಕವಯಸ್ಸಿನಲ್ಲಿ ಇತರ ಮಕ್ಕಳೊಂದಿಗೆ ಸಂಕೋಚ ಗಳಿಲ್ಲದೆ ಯಾವುದೇ ರೀತಿಯ ಭಯವಿಲ್ಲದೆ ಒಟ್ಟೊಟ್ಟಿಗೆ ಆಟವಾಡಿಕೊಂಡು ಕಾಲ ಕಳೆಯುತ್ತಿದ್ದೆವು .ಆದರೆ ಈ ರೀತಿಯ ಮಹಾಮಾರಿ ವೈರಸ್ಸಿನಿಂದ ಆಗಿ ಇಂದಿನ ಮಕ್ಕಳು ಇತರ ಮಕ್ಕಳೊಂದಿಗೆ ಆಟವಾಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಕ್ಷಣ ಕ್ಷಣ ದಲ್ಲಿ ಯಾವ ರೀತಿಯ ತೊಂದರೆ ಉಂಟಾಗುತ್ತದೆ ಎಂಬುದಕ್ಕೆ ಹೇಳಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ ಜೀವನ ಸಾಗಿಸುವ ಕಾಲ ಬಂದಿದೆ. ಈ ಮಹಾಮಾರಿಯು ಎಲ್ಲ ಜನರನ್ನು ಕಟ್ಟಿಹಾಕಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದು ಅಮರ ಸುದ್ದಿ ವೆಬ್ಸೈಟ್ ಗೆ ಶುಭಹಾರೈಸಿದ ಎಂ ಬಿ ಫೌಂಡೇಶನ್ ಅಧ್ಯಕ್ಷ ಎಂ ಬಿ ಸದಾಶಿವ ಮಾತನಾಡಿ ಸ್ಥಳೀಯ ಪತ್ರಿಕೆಗಳ ವರದಿಗಳು ವಿಭಿನ್ನ ರೀತಿಯಲ್ಲಿ ಕೂಡಿರಬೇಕು .ಅದಲ್ಲದೆ ಎಲ್ಲಾ ಮಾಧ್ಯಮಗಳು ನೀಡುವ ವರದಿಗಳು ಒಂದೇ ರೀತಿಯಲ್ಲಿ ಇದ್ದು ಒಂದರಿಂದ ನಕಲಿ ಮಾಡಿ ಒಂದೇ ರೀತಿಯ ವಿಷಯಗಳನ್ನು ಬೇರೆಬೇರೆ ವೆಬ್ಸೈಟ್ ಗಳಲ್ಲಿ ಬಿತ್ತರಿಸಿದ ರೀತಿಯಲ್ಲಿ ಇರುತ್ತದೆ.ಈ ರೀತಿಯಾಗಿ ಇರಬಾರದು ಎಂದು ಹೇಳಿದರು. ಸ್ಥಳೀಯ ಪತ್ರಿಕೆಗಳಲ್ಲಿ ಅಮರ ಸುಳ್ಯ ಸುದ್ದಿ ಪತ್ರಿಕೆಯು ಉತ್ತಮ ಕೆಲಸ ಕಾರ್ಯಗಳನ್ನು ಮಾಡುತ್ತಾ ಬರುತ್ತಿದ್ದು ಈ ಪತ್ರಿಕೆಯ ವೆಬ್ಸೈಟ್ ಮುಂದಿನ ದಿನಗಳಲ್ಲಿ ಯಶಸ್ವಿಯಾಗಿ ಮೂಡಿ ಬರಲಿ ಎಂದು ಹಾರೈಸಿದರು.