ದಿನಾ ೪ ಗಂಟೆ ಪಿ ಪಿ ಇ ಕಿಟ್ ಧರಿಸಿ ಕೋವಿಡ್ ಸೋಂಕಿತರ ಜೊತೆ ಕೆಲಸ. ನಿರಂತರ ಕೆಲಸ ಮಾಡಿದರೂ ದಣಿವರಿಯದ ಸೇವೆ. ಕೋವಿಡ್ ವಾರಿಯರ್ಸ್ ಆಗಿ ದುಡಿಯುತ್ತಿರುವ ಪ್ರತೀ ವೈದ್ಯಕೀಯ ಸಿಬ್ಬಂದಿಗಳ ಕರ್ತವ್ಯ ಹಾಗೂ ಈ ಮಹಾಸೇವೆಯೇ ಸದ್ಯ ದೇಶವನ್ನು ಕಾಯುತ್ತಿರುವುದು. ಈ ವಾರಿಯರ್ಸ್ ಸಾಲಿನಲ್ಲಿ ತನ್ನ ಸ್ಥಾನಪಡೆದುಕೊಂಡಿದ್ದಾರೆ ಸುಳ್ಯ ತಾಲೂಕಿನ ಮಡಪ್ಪಾಡಿ ಗ್ರಾಮದ ಭುವನ ಭರತ್ ಪರಮಲೆ.
ಕಳೆದ ಎಂಟು ವರ್ಷಗಳಿಂದ ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಯಲ್ಲಿ ನರ್ಸ್ ಆಗಿ ಸೇವೆ ಸಲ್ಲಿಸುತ್ತಿರುವ ಇವರು ಕಳೆದ ಎರಡೂವರೆ ತಿಂಗಳಿನಿಂದ ಕೊರೊನಾ ವಾರಿಯರ್ಸ್ ಆಗಿ ಕೆಲಸ ಮಾಡುತ್ತಿದ್ದಾರೆ. ಮೊದಲು ಕೋವಿಡ್ ೧೯ ಪಾಸಿಟಿವ್ ವಾರ್ಡ್ ನಲ್ಲಿ ಡ್ಯೂಟಿ ಮಾಡುತ್ತಿದ್ದ ಭುವನ ಮೇಡಂ, ನಂತರದಲ್ಲಿ ಐಸಿಯು ನಲ್ಲಿ ಡ್ಯೂಟಿ ನಿರ್ವಹಿಸುತ್ತಿದ್ದಾರೆ. ಮೊದಲು ಭಯ ಪಟ್ಟಿದ್ದ ಇವರು ಸದ್ಯ ಯಾವುದೇ ಭಯವಿಲ್ಲದೇ ಕೆಲಸ ಮಾಡುತ್ತಿದ್ದಾರೆ. ಬಿಸಿ ರೋಡ್ ನಲ್ಲಿ ವಾಸ್ತವ್ಯವಿರುವ ಇವರಿಗೆ ಸದ್ಯ ಮನೆಗೆ ಹೋಗುವ ಅವಕಾಶವೇ ಇಲ್ಲ. ವಾರಕ್ಕೊಮ್ಮೆ ಪತಿ ಭರತ್ ಪರಮಲೆ ಮಂಗಳೂರಿಗೆ ಬಂದು ಪತ್ನಿಯನ್ನು ವಿಚಾರಿಸಿ ತೆರಳುತ್ತಾರೆ. ಪ್ರತೀ ನಿತ್ಯ ನಾಲ್ಕುಗಂಟೆಗಳ ಕಾಲ ಪಿಪಿಇ ಕಿಟ್ ಧರಿಸುವುದೇ ಸವಾಲಾಗಿದೆ. ಅತೀ ಜಾಗ್ರತೆಯಿಂದ ಕರ್ತವ್ಯ ನಿರ್ವಹಿಸಬೇಕಿದ್ದು, ಯಾವುದೇ ಸಮಯದಲ್ಲೂ ಪ್ರಾಣಕ್ಕೆ ಮಾರಕವಾಗುವ ಸಾಧ್ಯತೆ ಇದೆ.
ಕುಗ್ರಾಮ ಮಡಪ್ಪಾಡಿಯ ಸೊಸೆ ಭುವನ ಭರತ್ ಕೋವಿಡ್ ವಾರಿಯರ್ಸ್ ಆಗಿ ಸೇವೆ ಸಲ್ಲಿಸುತ್ತಿರುವುದು ಗ್ರಾಮಕ್ಕೆ, ತಾಲೂಕಿಗೆ ಹೆಮ್ಮೆಯ ಸಂಗತಿ.