ಸುಳ್ಯದ ಮುಖ್ಯ ರಸ್ತೆಯಲ್ಲಿ ಪಾದಚಾರಿ ಮಾರ್ಗವೇ ಇಲ್ಲ! ವಿದ್ಯಾರ್ಥಿಗಳು, ಸಾರ್ವಜನಿಕರ ಜೀವಕ್ಕೆ ಅಪಾಯ ; ಕಟ್ಟೆಕಾರ್‌ನಿಂದ ಎಪಿಎಂಸಿವರೆಗೆ ಅವ್ಯವಸ್ಥೆಯ ಆಗರ – ಚರಂಡಿ, ಕಾಲುದಾರಿ ನಿರ್ಮಾಣಕ್ಕೆ ಸಾರ್ವಜನಿಕರ ಆಗ್ರಹ

ಸುಳ್ಯ: ಅಭಿವೃದ್ಧಿ ಹೊಂದುತ್ತಿರುವ ನಗರಗಳಲ್ಲಿ ಒಂದೆಂದು ಗುರುತಿಸಿಕೊಂಡಿರುವ ಸುಳ್ಯದಲ್ಲಿ ಮೂಲಭೂತ ರಸ್ತೆ ಸೌಲಭ್ಯಗಳೇ ಸಮರ್ಪಕವಾಗಿಲ್ಲದಿರುವುದು ವಿಪರ್ಯಾಸದ ಸಂಗತಿಯಾಗಿದೆ. ನಗರದ ಕಟ್ಟೆಕಾರ್‌ನಿಂದ ಎಪಿಎಂಸಿವರೆಗೆ ಸಾಗುವ ಪ್ರಮುಖ ರಸ್ತೆಯಲ್ಲಿ ಪಾದಚಾರಿ ಮಾರ್ಗದ ವ್ಯವಸ್ಥೆಯೇ ಇಲ್ಲದೆ ಸಾವಿರಾರು ವಿದ್ಯಾರ್ಥಿಗಳು, ಉದ್ಯೋಗಿಗಳು ಹಾಗೂ ಸಾರ್ವಜನಿಕರು ಪ್ರತಿನಿತ್ಯ ಜೀವ ಕೈಯಲ್ಲಿ ಹಿಡಿದು ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

. . . . . . . . .

ನಗರದ ಪ್ರಮುಖ ಸಂಪರ್ಕ ರಸ್ತೆಯಾಗಿರುವ ಈ ಮಾರ್ಗದಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆ ಹಾಗೂ ಕಾಲುದಾರಿಗಳಿಲ್ಲದಿರುವುದು ಸಾರ್ವಜನಿಕರಿಗೆ ತೀವ್ರ ತೊಂದರೆಯಾಗಿದೆ. ಇದರೊಂದಿಗೆ ರಸ್ತೆಯ ಇಕ್ಕೆಲಗಳಲ್ಲಿ ಎಲ್ಲೆಂದರಲ್ಲಿ ಲಾರಿ, ಬಸ್ ಹಾಗೂ ಇತರ ವಾಹನಗಳನ್ನು ನಿಲುಗಡೆ ಮಾಡುವುದರಿಂದ ವಾಹನ ಸಂಚಾರಕ್ಕೂ ಅಡ್ಡಿಯಾಗುತ್ತಿದೆ. ರಸ್ತೆ ಬದಿಯ ವಿದ್ಯುತ್ ಕಂಬಗಳು, ವಿದ್ಯುತ್ ಪರಿವರ್ತಕಗಳು ಹಾಗೂ ಕಾಲುದಾರಿಯನ್ನು ಆಕ್ರಮಿಸಿಕೊಂಡಿರುವ ಅಂಗಡಿಗಳಿಂದಾಗಿ ಪಾದಚಾರಿಗಳು ರಸ್ತೆಯಲ್ಲೇ ನಡೆದುಕೊಂಡು ಹೋಗಬೇಕಾದ ಅನಿವಾರ್ಯತೆ ಎದುರಾಗಿದೆ.

. . . . . . .

ವಿಶೇಷವಾಗಿ ಶಾಲಾ-ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಹಾಗೂ ಕೆಲಸಕ್ಕೆ ಹೋಗುವ ಉದ್ಯೋಗಿಗಳು ಈ ರಸ್ತೆಯಲ್ಲಿ ಸಂಚರಿಸುವಾಗ ಎದುರು ಬರುತ್ತಿರುವ ವಾಹನಗಳನ್ನು ಗಮನಿಸುತ್ತಾ, ಕೆಲವೊಮ್ಮೆ ಹಿಂದಿರುಗಿ ನೋಡುತ್ತಾ ಎಚ್ಚರಿಕೆಯಿಂದ ಹೆಜ್ಜೆ ಹಾಕಬೇಕಾದ ದುಸ್ಥಿತಿ ಇದೆ. ಪಾದಚಾರಿಗಳಿಗೆ ಸುರಕ್ಷಿತವಾಗಿ ನಡೆಯಲು ಜಾಗವಿಲ್ಲದಿರುವುದು ಅಪಘಾತದ ಆತಂಕವನ್ನು ಹೆಚ್ಚಿಸಿದೆ.

ಇನ್ನು ಎಪಿಎಂಸಿ ಸಮೀಪದಲ್ಲಿರುವ ವಿದ್ಯುತ್ ಪರಿವರ್ತಕವು ವಾಹನ ಸಂಚಾರಕ್ಕೆ ಮತ್ತಷ್ಟು ಅಡಚಣೆಯಾಗಿದೆ ಎಂಬುದು ಸಾರ್ವಜನಿಕರ ಅಳಲಾಗಿದೆ. ಎಪಿಎಂಸಿಗೆ ಸರಕು ಸಾಗಣೆಗಾಗಿ ಬರುವ ಬೃಹತ್ ಲಾರಿಗಳು ಒಳಗೆ ಪ್ರವೇಶಿಸುವಾಗ ಹಾಗೂ ಹೊರಬರುವಾಗ ರಸ್ತೆಯ ಸಂಚಾರವೇ ಸಂಪೂರ್ಣ ಅಸ್ತವ್ಯಸ್ತವಾಗುತ್ತದೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading