ಶ್ರೀ ವೆಂಕಟರಮಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಮಹಾಸಭೆ | ₹2.64 ಕೋಟಿ ನಿವ್ವಳ ಲಾಭ – ಶೇ.16 ಡಿವಿಡೆಂಡ್ ಘೋಷಣೆ

ಸುಳ್ಯ: ಶ್ರೀ ವೆಂಕಟರಮಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಪ್ರಸಕ್ತ ಸಹಕಾರಿ ವರ್ಷದಲ್ಲಿ ₹2.64 ಕೋಟಿ ನಿವ್ವಳ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ. 16ರಷ್ಟು ಡಿವಿಡೆಂಡ್ ವಿತರಿಸಲಾಗುವುದು ಎಂದು ಸೊಸೈಟಿ ಅಧ್ಯಕ್ಷ ಕೆ.ಸಿ. ಸದಾನಂದ ತಿಳಿಸಿದರು.

. . . . . . . . .

ಕೊಡಿಯಾಲಬೈಲ್ ಗೌಡ ಸಮುದಾಯ ಭವನದಲ್ಲಿ ಸೆ. 6ರಂದು ನಡೆದ ಸೊಸೈಟಿಯ 25ನೇ ವಾರ್ಷಿಕ ಮಹಾಸಭೆಯ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ ಸಂಸ್ಥೆಯ ಸಾಧನೆ ಹಾಗೂ ಮುಂದಿನ ಯೋಜನೆಗಳ ಕುರಿತು ಮಾಹಿತಿ ನೀಡಿದರು.

. . . . . . .

1997ರಲ್ಲಿ ಗೌಡರ ಯುವ ಸೇವಾ ಸಂಘ (ರಿ.), ಸುಳ್ಯ ಇವರಿಂದ ಪ್ರವರ್ತಿಸಲ್ಪಟ್ಟ ಶ್ರೀ ವೆಂಕಟರಮಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಆರಂಭದಲ್ಲಿ 435 ಸದಸ್ಯರನ್ನು ಹೊಂದಿತ್ತು. ಪ್ರಸ್ತುತ ವಿವಿಧ ವರ್ಗಗಳ 23,124 ಸದಸ್ಯರನ್ನು ಹೊಂದಿದ್ದು, ₹5.30 ಕೋಟಿ ಪಾಲು ಬಂಡವಾಳ ಸಂಗ್ರಹಿಸಿದೆ. ಸದಸ್ಯರ ಅನುಕೂಲಕ್ಕಾಗಿ ವಾಹನ ಸಾಲ, ಚಿನ್ನಾಭರಣ ಈಡಿನ ಸಾಲ, ಭದ್ರತಾ ಸಾಲ, ಗೃಹ ಸಾಲ, ವೇತನ ಸಾಲ, ಜಮೀನು ಅಡವು ಸಾಲ, ವ್ಯಾಪಾರ ಸಾಲ ಹಾಗೂ ಜಾಮೀನು ಸಾಲ ಸೇರಿದಂತೆ ವಿವಿಧ ಸಾಲ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಇ-ಸ್ಟಾಂಪಿಂಗ್, ಆರ್‌ಟಿಜಿಎಸ್ ಹಾಗೂ ಎನ್‌ಇಎಫ್‌ಟಿ ಸೌಲಭ್ಯಗಳನ್ನೂ ನೀಡಲಾಗುತ್ತಿದೆ.

ಸಂಸ್ಥೆಯ ಕಾರ್ಯವ್ಯಾಪ್ತಿ ರಾಜ್ಯಮಟ್ಟದಲ್ಲಿದ್ದು, ರಾಜ್ಯದ ವಿವಿಧ ಭಾಗಗಳಲ್ಲಿ ಈಗಾಗಲೇ 24 ಶಾಖೆಗಳು ಕಾರ್ಯನಿರ್ವಹಿಸುತ್ತಿವೆ. ವರದಿ ವರ್ಷದಲ್ಲಿ ₹278.92 ಕೋಟಿ ಠೇವಣಿ ಹೊಂದಿದ್ದು, ಒಟ್ಟು ₹310.31 ಕೋಟಿ ಬಂಡವಾಳದೊಂದಿಗೆ ₹1,582 ಕೋಟಿಗೂ ಮಿಕ್ಕಿ ವಾರ್ಷಿಕ ವ್ಯವಹಾರ ನಡೆಸಲಾಗಿದೆ. ಈ ಅವಧಿಯಲ್ಲಿ ₹2,64,15,821.66 ನಿವ್ವಳ ಲಾಭ ಗಳಿಸಲಾಗಿದೆ ಎಂದು ಅವರು ತಿಳಿಸಿದರು.

ಸುಳ್ಯದ ಮೊಗರ್ಪಣೆಯಲ್ಲಿ ಮುಖ್ಯ ರಸ್ತೆಯ ಪಕ್ಕದಲ್ಲಿ ಸಂಸ್ಥೆಗೆ ಸೇರಿದ 36.25 ಸೆಂಟ್ಸ್ ಜಾಗದಲ್ಲಿ ವಾಣಿಜ್ಯ ಮಳಿಗೆಗಳನ್ನು ಒಳಗೊಂಡ ಸುಸಜ್ಜಿತ ಕಟ್ಟಡ ನಿರ್ಮಿಸಲಾಗಿದೆ. ನೆಲ ಅಂತಸ್ತಿನಲ್ಲಿ ಸುಳ್ಯ ಶಾಖೆ ಕಾರ್ಯನಿರ್ವಹಿಸುತ್ತಿದ್ದು, ಮೊದಲ ಮಹಡಿಯಲ್ಲಿ ಆಡಳಿತ ಕಚೇರಿ, ಸಭಾಭವನ ಹಾಗೂ ಅತಿಥಿಗೃಹ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಇದೀಗ ₹1.47 ಕೋಟಿ ವೆಚ್ಚದಲ್ಲಿ ಎರಡನೇ ಮಹಡಿ ನಿರ್ಮಿಸಲಾಗಿದ್ದು, ವಿವಿಧ ಸಂಸ್ಥೆಗಳಿಗೆ ಬಾಡಿಗೆ ಆಧಾರದ ಮೇಲೆ ನೀಡುವ ಪ್ರಕ್ರಿಯೆ ನಡೆಯುತ್ತಿದೆ.

ಸಂಸ್ಥೆಯ ಹೆಚ್ಚಿನ ಶಾಖೆಗಳಲ್ಲಿ ಇ-ಸ್ಟಾಂಪಿಂಗ್ ಸೌಲಭ್ಯ ಲಭ್ಯವಿದ್ದು, ಸುಳ್ಯ ಶಾಖೆಯಲ್ಲಿ ಸದಸ್ಯರಿಗೆ ಸೇಫ್ ಡೆಪಾಸಿಟ್ ಲಾಕರ್ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.95ಕ್ಕಿಂತ ಅಧಿಕ ಅಂಕ ಗಳಿಸಿದ ಸಂಘದ ವಿವಿಧ ಶಾಖೆಗಳ ಸದಸ್ಯರ 35 ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಶೈಕ್ಷಣಿಕ ಪ್ರೋತ್ಸಾಹ ನೀಡಲಾಗಿದೆ ಎಂದರು.

ಸಂಸ್ಥೆಯ 25ನೇ ಶಾಖೆಯನ್ನು ಸುಳ್ಯ ತಾಲೂಕಿನ ಗುತ್ತಿಗಾರಿನಲ್ಲಿ ಶೀಘ್ರದಲ್ಲೇ ಆರಂಭಿಸಲಾಗುವುದು. ಜನರಲ್ಲಿ ಉಳಿತಾಯದ ಮನೋಭಾವ ಬೆಳೆಸುವುದು, ಕೃಷಿಕರು ಹಾಗೂ ವ್ಯಾಪಾರಸ್ಥರಿಗೆ ಸಾಲ ಸೌಲಭ್ಯ ಒದಗಿಸುವುದು ಮತ್ತು ಆರ್ಥಿಕವಾಗಿ ಹಿಂದುಳಿದವರ ಪ್ರಗತಿಗೆ ನೆರವಾಗುವುದು ಸಂಸ್ಥೆಯ ಪ್ರಮುಖ ಉದ್ದೇಶವಾಗಿದೆ. ಸಹಕಾರಿ ಬಂಧುಗಳು ಸಂಸ್ಥೆಯೊಂದಿಗೆ ವ್ಯವಹರಿಸಿ ಶ್ರೇಯೋಭಿವೃದ್ಧಿಗೆ ಸಹಕರಿಸಬೇಕು ಎಂದು ಕೆ.ಸಿ. ಸದಾನಂದ ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಟಿ. ವಿಶ್ವನಾಥ, ಉಪಾಧ್ಯಕ್ಷ ದಿನೇಶ್ ಮಡಪ್ಪಾಡಿ, ನಿರ್ದೇಶಕರಾದ ಪಿ.ಸಿ. ಜಯರಾಮ, ಜಾಕೆ ಸದಾನಂದ, ನಿತ್ಯಾನಂದ ಮುಂಡೋಡಿ, ಎ.ವಿ. ತೀರ್ಥರಾಮ, ಚಂದ್ರ ಕೋಲ್ಚಾರ್, ಪಿ.ಎಸ್. ಗಂಗಾಧರ, ಲಕ್ಷ್ಮೀನಾರಾಯಣ ನಡ್ಕ, ದಾಮೋದರ ನಾರ್ಕೋಡು, ಜಯಲತಾ ಕೆ.ಎಸ್., ನಳಿನಿ ಸೂರಯ್ಯ, ಶೈಲೇಶ್ ಅಂಬೆಕಲ್ಲು, ದೊಡ್ಡಣ್ಣ ಬರಮೇಲು, ಸದಾನಂದ ಮಾವಾಜಿ ಹಾಗೂ ಪ್ರೇಮ ಕೆ.ಎಲ್., ಜ್ಞಾನೇಶ್ ಎನ್.ಎ. ಉಪಸ್ಥಿತರಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading