“ಅಮರ ಸುದ್ದಿ ಫಲಶ್ರುತಿ” – “ಕೊಲ್ಲಮೊಗ್ರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಒಂದು ವಾರದೊಳಗೆ ನೂತನ ವೈದ್ಯಾಧಿಕಾರಿಗಳ ನೇಮಕ” – ಭರವಸೆ ನೀಡಿದ ಡಿಎಚ್‌ಒ ಡಾ. ತಿಮ್ಮಯ್ಯ

ಸುಳ್ಯ ತಾಲೂಕಿನ ಕಟ್ಟಕಡೆಯ ಗ್ರಾಮವಾದ ಕೊಲ್ಲಮೊಗ್ರದಲ್ಲಿ ಇರುವಂತಹ ಕಲ್ಮಕಾರು, ಕೊಲ್ಲಮೊಗ್ರು, ಎಲಿಮಲೆ, ಕಂದ್ರಪ್ಪಾಡಿ ಹಾಗೂ ಮಡಪ್ಪಾಡಿ ಸೇರಿದಂತೆ ಐದು ಗ್ರಾಮಗಳ ವ್ಯಾಪ್ತಿಯನ್ನು ಹೊಂದಿರುವಂತಹ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಳೆದ ಐದು ತಿಂಗಳುಗಳಿಂದ ಯಾವುದೇ ವೈದ್ಯಾಧಿಕಾರಿಗಳಿಲ್ಲ. ಈ ಹಿಂದೆ ಡಾ| ಕುಲದೀಪ್.ಎಂ.ಡಿ ಎಂಬುವವರು ಎರಡೂವರೆ ವರ್ಷಗಳ ಕಾಲ ಅಂದರೆ 2023 ಆಗಸ್ಟ್ ತಿಂಗಳಿನಿಂದ 2026 ಜನವರಿ ತಿಂಗಳಿನವರೆಗೆ ಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿದ್ದರು. ಆದರೆ ಅವರಿಗೆ ನಿರಂತರವಾಗಿ ಆರು ತಿಂಗಳುಗಳ ಕಾಲ ಸರ್ಕಾರ ಸರಿಯಾದ ರೀತಿಯಲ್ಲಿ ವೇತನ ಪಾವತಿ ಮಾಡದೇ ಇರುವ ಕಾರಣ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಇಲ್ಲಿಂದ ತೆರಳಿದ್ದರು. ಇದೀಗ ಕುಲದೀಪ್ ರವರು ರಾಜೀನಾಮೆ ನೀಡಿ ಸರಿಸುಮಾರು ಐದು ತಿಂಗಳುಗಳೇ ಕಳೆದರೂ ಕೊಲ್ಲಮೊಗ್ರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಯಾವುದೇ ವೈದ್ಯಾಧಿಕಾರಿಗಳ ನೇಮಕವಾಗಿಲ್ಲ. ಈ ಬಗ್ಗೆ ಆ ಭಾಗದ ಸಾರ್ವಜನಿಕರು ನಿರಂತರವಾಗಿ ಸಂಬಂಧಪಟ್ಟ ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಮನವಿ ಸಲ್ಲಿಸುತ್ತಲೇ ಬಂದಿದ್ದರು. ದಿನಕ್ಕೆ ಸುಮಾರು 25 ರಿಂದ 30 ರೋಗಿಗಳು ಬರುವಂತಹ ಐದು ಗ್ರಾಮಗಳ ವ್ಯಾಪ್ತಿಯನ್ನು ಹೊಂದಿರುವಂತಹ ಈ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಸ್ತುತ ಯಾವುದೇ ವೈದ್ಯಾಧಿಕಾರಿಗಳು ಇಲ್ಲದೇ ಇರುವ ಬಗ್ಗೆ ಜೂ.17 ರಂದು “ಅಮರ ಸುದ್ದಿ” ವೆಬ್‌ಸೈಟ್‌ನಲ್ಲಿ ವಿಶೇಷ ವರದಿಯನ್ನು ಪ್ರಕಟಿಸಿ ಜನಪ್ರತಿನಿಧಿಗಳ ಗಮನಕ್ಕೆ ತರುವ ಕೆಲಸ ಮಾಡಿತ್ತು. ಈ ವರದಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ(DHO) ಡಾ. ತಿಮ್ಮಯ್ಯ ಅವರ ಗಮನಕ್ಕೆ ಬಂದಿದ್ದು, ತಕ್ಷಣ ಸ್ಪಂದಿಸಿದ ಜಿಲ್ಲಾ ಆರೋಗ್ಯಾಧಿಕಾರಿಗಳು ಕೊಲ್ಲಮೊಗ್ರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಒಂದು ವಾರದೊಳಗೆ ನೂತನ ವೈದ್ಯಾಧಿಕಾರಿಗಳ ನೇಮಕ ಮಾಡುವ ಭರವಸೆ ನೀಡಿದ್ದಾರೆ.
ಈ ಬಗ್ಗೆ ಅಮರ ಸುದ್ದಿಯೊಂದಿಗೆ ಮಾತನಾಡಿದ ಅವರು “ಕೊಲ್ಲಮೊಗ್ರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವೈದ್ಯಾಧಿಕಾರಿಗಳ ನೇಮಕ ಮಾಡಲಾಗಿದ್ದು, ಒಂದು ವಾರದೊಳಗೆ ನೂತನ ವೈದ್ಯಾಧಿಕಾರಿಗಳು ಕರ್ತವ್ಯಕ್ಕೆ ಹಾಜರಾಗಲಿದ್ದಾರೆ” – ಡಾ. ತಿಮ್ಮಯ್ಯ, ಡಿಎಚ್‌ಒ, ದಕ್ಷಿಣ ಕನ್ನಡ

ಈ ಸಂದರ್ಭದಲ್ಲಿ ಮಾತನಾಡಿದ ಸ್ಥಳೀಯರಾದ ಉದಯ ಶಿವಾಲ “ಡಾ. ಕುಲದೀಪ್ ರವರ ರಾಜೀನಾಮೆಯ ನಂತರ ಹಲವು ಬಾರಿ ನಾವು ಕೊಲ್ಲಮೊಗ್ರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನೂತನ ವೈದ್ಯಾಧಿಕಾರಿಗಳ ನೇಮಕ ಮಾಡುವ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತರುವ ಕೆಲಸಗಳನ್ನು ಮಾಡಿದ್ದೆವು. ಅಷ್ಟೇ ಅಲ್ಲದೇ ಗ್ರಾಮಸ್ಥರ ಸಹಿ ಸಂಗ್ರಹಿಸಿ ಮನವಿ ಸಲ್ಲಿಸಲಾಗಿತ್ತು. ಇದೀಗ ಜಿಲ್ಲಾ ಆರೋಗ್ಯ ಅಧಿಕಾರಿಗಳ ಮುಖಾಂತರ ಒಂದು ವಾರದೊಳಗೆ ನೂತನ ವೈದ್ಯಾಧಿಕಾರಿಗಳ ನೇಮಕ ಮಾಡುವ ಮಾಹಿತಿ ಬಂದಿದ್ದು, ಇದಕ್ಕಾಗಿ ಶ್ರಮಿಸಿದ ಎಲ್ಲರಿಗೂ ಧನ್ಯವಾದಗಳು” ಎಂದು ತಿಳಿಸಿದರು.

ಒಟ್ಟಿನಲ್ಲಿ ಅಮರ ಸುದ್ದಿ ಪತ್ರಿಕೆಯಲ್ಲಿ ಪ್ರಕಟವಾದ ವಿಶೇಷ ವರದಿಗೆ ಹಾಗೂ ಕೊಲ್ಲಮೊಗ್ರು ಭಾಗದ ಸಾರ್ವಜನಿಕರ ನಿರಂತರ ಮನವಿ ಹಾಗೂ ಪರಿಶ್ರಮಕ್ಕೆ ಇದೀಗ ಅಧಿಕಾರಿಗಳಿಂದ ಸ್ಪಂದನೆ ದೊರೆತಿದ್ದು, ಕೊಲ್ಲಮೊಗ್ರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಶೀಘ್ರದಲ್ಲೇ ನೂತನ ವೈದ್ಯಾಧಿಕಾರಿಗಳು ಬರುವ ಭರವಸೆ ಮೂಡಿದೆ. ವರದಿ : ಉಲ್ಲಾಸ್ ಕಜ್ಜೋಡಿ

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading