ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಕ್ತರ ಸಾಗರ : 50 ಸಾವಿರಕ್ಕೂ ಅಧಿಕ ಭಕ್ತರ ಆಗಮನ – ಪಾರ್ಕಿಂಗ್ ಅವ್ಯವಸ್ಥೆಗೆ ಕ್ರಮ ಕೈಗೊಳ್ಳಲು ಸಾರ್ವಜನಿಕರ ಆಗ್ರಹ

ಸುಬ್ರಹ್ಮಣ್ಯ, ಜೂನ್ 14 : ದಕ್ಷಿಣ ಭಾರತದ ಪ್ರಸಿದ್ಧ ನಾಗಾರಾಧನಾ ಕ್ಷೇತ್ರವಾದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ರವಿವಾರ 50 ಸಾವಿರಕ್ಕೂ ಅಧಿಕ ಭಕ್ತರು ಆಗಮಿಸಿದ್ದು, ಕ್ಷೇತ್ರದಲ್ಲಿ ಭಕ್ತರ ಸಾಗರವೇ ಹರಿದು ಬಂದ ದೃಶ್ಯ ಕಂಡುಬಂತು. ಮಿಥುನ ಮಾಸ ಆರಂಭಗೊಂಡಿರುವುದು ಹಾಗೂ ಈ ವರ್ಷ ಮಳೆ ಪ್ರಮಾಣ ಕಡಿಮೆಯಿರುವ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ಹೊರರಾಜ್ಯಗಳಿಂದ ಸಾವಿರಾರು ಭಕ್ತರು ಶನಿವಾರ ರಾತ್ರಿಯಿಂದಲೇ ಕ್ಷೇತ್ರಕ್ಕೆ ಆಗಮಿಸಿದ್ದರು. ಹರಕೆ ಸೇವೆ, ದೇವರ ದರ್ಶನ ಹಾಗೂ ವಿಶೇಷ ಪೂಜೆಗಳಲ್ಲಿ ಭಾಗವಹಿಸಲು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ ಪರಿಣಾಮ ದೇವಸ್ಥಾನ ಪರಿಸರ, ರಥಬೀದಿ ಹಾಗೂ ಪ್ರಮುಖ ರಸ್ತೆಗಳಲ್ಲಿ ಜನಸಂದಣಿ ಕಂಡುಬಂತು. ಜೂನ್ ತಿಂಗಳಲ್ಲಿ ಶಾಲಾ-ಕಾಲೇಜುಗಳು ಆರಂಭಗೊಂಡಿದ್ದರೂ ಸಹ ಪ್ರತಿವರ್ಷದಂತೆ ಈ ಬಾರಿಯೂ ಭಕ್ತರ ಸಂಖ್ಯೆ ಹೆಚ್ಚಾಗಿರುವುದು ವಿಶೇಷವಾಗಿದೆ. ದೇವರ ದರ್ಶನಕ್ಕಾಗಿ ಭಕ್ತರು ರಥಬೀದಿಯವರೆಗೂ ಸರತಿ ಸಾಲಿನಲ್ಲಿ ನಿಂತಿದ್ದು, ಮಳೆಯ ಅಡಚಣೆ ಇಲ್ಲದ ಕಾರಣ ಭಕ್ತರು ಸುಗಮವಾಗಿ ದರ್ಶನ ಪಡೆಯಲು ಸಾಧ್ಯವಾಯಿತು. ದೇವಸ್ಥಾನದ ವಸತಿಗೃಹಗಳು ವಾರದ ಹಿಂದೆಯೇ ಭರ್ತಿಯಾಗಿದ್ದರೆ, ಖಾಸಗಿ ವಸತಿಗೃಹಗಳೂ ಶನಿವಾರದಿಂದಲೇ ಸಂಪೂರ್ಣ ಭರ್ತಿಯಾಗಿದ್ದವು. ಇದೇ ವೇಳೆ ಭಕ್ತರ ವಾಹನಗಳ ಸಂಖ್ಯೆಯೂ ಹೆಚ್ಚಾಗಿದ್ದರಿಂದ ಸುಬ್ರಹ್ಮಣ್ಯ ಪೊಲೀಸ್ ಠಾಣೆ ಬಳಿಯಿಂದ ಮುಖ್ಯ ಪೇಟೆಯವರೆಗೆ, ಕಾಶಿಕಟ್ಟೆಯಿಂದ ಆದಿ ಸುಬ್ರಹ್ಮಣ್ಯ ರಸ್ತೆ ಎರಡೂ ಬದಿಗಳಲ್ಲಿ ಹಾಗೂ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ರಸ್ತೆಯಲ್ಲಿ ವಾಹನಗಳನ್ನು ಸಾಲಾಗಿ ನಿಲ್ಲಿಸಲಾಗಿತ್ತು. ಕೆಲವೆಡೆ ‘No Parking’ ನಾಮಫಲಕಗಳ ಮುಂಭಾಗದಲ್ಲಿಯೇ ವಾಹನಗಳನ್ನು ನಿಲುಗಡೆ ಮಾಡಿರುವುದು ಕಂಡುಬಂದಿದ್ದು, ಇದರಿಂದ ವಾಹನ ಸಂಚಾರ ಮತ್ತು ಪಾದಚಾರಿಗಳ ಓಡಾಟಕ್ಕೆ ಸಾಕಷ್ಟು ತೊಂದರೆ ಉಂಟಾಯಿತು. ಸಂಚಾರ ನಿಯಮಗಳ ಉಲ್ಲಂಘನೆಯಾಗುತ್ತಿದ್ದರೂ ಸಮರ್ಪಕ ನಿಯಂತ್ರಣ ಕಾಣದಿರುವುದಕ್ಕೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದರು. ಈ ಹಿಂದೆ ಬಿಲದ್ವಾರ ಪ್ರದೇಶದಲ್ಲಿ ವ್ಯವಸ್ಥಿತ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಿ ಪೊಲೀಸ್ ಸಿಬ್ಬಂದಿ ವಾಹನ ದಟ್ಟಣೆಯನ್ನು ನಿಯಂತ್ರಿಸುತ್ತಿದ್ದರು. ಆದರೆ ರವಿವಾರ ಆ ವ್ಯವಸ್ಥೆಯನ್ನು ಸಮರ್ಪಕವಾಗಿ ಬಳಸದೆ ಮುಖ್ಯ ರಸ್ತೆಗಳಲ್ಲಿ ವಾಹನ ನಿಲುಗಡೆ ಹೆಚ್ಚಾದ ಕಾರಣ ಸಂಚಾರ ಅಸ್ತವ್ಯಸ್ತಗೊಂಡಿರುವುದಾಗಿ ಸಾರ್ವಜನಿಕರು ಆರೋಪಿಸಿದ್ದಾರೆ. ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ, ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗ ಭಕ್ತರ ಸುಗಮ ದರ್ಶನ, ತೀರ್ಥ ಪ್ರಸಾದ ಹಾಗೂ ಅನ್ನಪ್ರಸಾದ ವಿತರಣೆಗೆ ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸಿದ್ದರು. ಆದಿ ಸುಬ್ರಹ್ಮಣ್ಯ ಭೋಜನ ಶಾಲೆಯಲ್ಲಿ ಭಕ್ತರಿಗೆ ಬಫೆ ವ್ಯವಸ್ಥೆಯ ಮೂಲಕ ಭೋಜನ ಪ್ರಸಾದ ವಿತರಿಸಲಾಯಿತು. ವಾರಾಂತ್ಯ ಹಾಗೂ ವಿಶೇಷ ದಿನಗಳಲ್ಲಿ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭಕ್ತರ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಹಾಗೂ ಸಂಬಂಧಿತ ಅಧಿಕಾರಿಗಳು ಬಿಲದ್ವಾರ ಸೇರಿದಂತೆ ಲಭ್ಯವಿರುವ ಪಾರ್ಕಿಂಗ್ ಸ್ಥಳಗಳನ್ನು ಸಮರ್ಪಕವಾಗಿ ಬಳಸುವಂತೆ ಕ್ರಮ ಕೈಗೊಂಡು, ಪ್ರಮುಖ ರಸ್ತೆಗಳಲ್ಲಿ ಹಾಗೂ ‘No Parking’ ವಲಯಗಳಲ್ಲಿ ವಾಹನ ನಿಲುಗಡೆಗೆ ಕಟ್ಟುನಿಟ್ಟಿನ ನಿಯಂತ್ರಣ ತರಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಭಕ್ತರು ಹಾಗೂ ಸ್ಥಳೀಯರಿಗೆ ತೊಂದರೆಯಾಗದಂತೆ ಸುಗಮ ಸಂಚಾರ, ಸಮರ್ಪಕ ಪಾರ್ಕಿಂಗ್ ವ್ಯವಸ್ಥೆ ಮತ್ತು ಪರಿಣಾಮಕಾರಿ ವಾಹನ ದಟ್ಟಣೆ ನಿರ್ವಹಣೆಗೆ ಪೊಲೀಸ್ ಇಲಾಖೆ ಹಾಗೂ ಸಂಬಂಧಿತ ಅಧಿಕಾರಿಗಳು ತಕ್ಷಣ ಕಾರ್ಯಪ್ರವೃತ್ತರಾಗಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading