ಸ್ವರ್ಣಶ್ರೀ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿಯ ವಾರ್ಷಿಕ ಮಹಾಸಭೆ ; ರೂ. 44.02 ಕೋಟಿ ವ್ಯವಹಾರ-ನಿವ್ವಳ ಲಾಭ ರೂ.7.06 ಲಕ್ಷ, ಶೇ.12% ಡಿವಿಡೆಂಡ್ ಘೋಷಣೆ

ಸುಳ್ಯದ ರಥಬೀದಿಯ ವಿನಾಯಕ ಬಿಲ್ಡಿಂಗ್ ನ ಮೊದಲನೇ ಮಹಡಿಯಲ್ಲಿ ಕಾರ್ಯಾಚರಿಸುತ್ತಿರುವ ಸ್ವರ್ಣಶ್ರೀ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ನಿ. ಸುಳ್ಯ ಇದರ 3ನೇ ವರ್ಷದ ವಾರ್ಷಿಕ ಮಹಾಸಭೆಯು ಜೂ.7 ರಂದು ಸುಳ್ಯ ಸಿ.ಎ ಬ್ಯಾಂಕ್ ಸಭಾಂಗಣದಲ್ಲಿ ಸಂಘದ ಅಧ್ಯಕ್ಷರಾದ ಜನಾರ್ಧನ ದೋಳ ರವರ ಅಧ್ಯಕ್ಷತೆಯಲ್ಲಿ ಜರುಗಿತು. “ಸಂಘವು 2023ನೇ ಸಾಲಿನಲ್ಲಿ ಅಸ್ತಿತ್ವಕ್ಕೆ ಬಂದಿದ್ದು 2025-26ನೇ ಸಾಲಿನಲ್ಲಿ ಸದಸ್ಯರ ಸಹಕಾರದೊಂದಿಗೆ ಒಟ್ಟು ರೂ.44.02 ಕೋಟಿ ವ್ಯವಹಾರ ನಡೆಸಿ ರೂ. 7.06 ಲಕ್ಷ ನಿವ್ವಳ ಲಾಭ ಪಡೆದಿರುತ್ತದೆ. ಸಂಘದಲ್ಲಿ ‘ಅ’ ತರಗತಿ ಮತ್ತು ‘ಸಿ’ ತರಗತಿ ಸೇರಿ ಒಟ್ಟು1323 ಜನ ಸದಸ್ಯರಿದ್ದಾರೆ. ರೂ. 9.28 ಲಕ್ಷ ಪಾಲು ಬಂಡವಾಳ ಹೊಂದಿದ್ದು ಕಳೆದ ಸಾಲಿಗೆ ಹೋಲಿಸಿದರೆ ಶೇ.89.94 ರಷ್ಟು ಹೆಚ್ಚಳವಾಗಿದೆ. ಸಂಘದಲ್ಲಿ ವರ್ಷಾಂತ್ಯಕ್ಕೆ ರೂ. 4.30 ಕೋಟಿ ವಿವಿಧ ರೀತಿಯ ಠೇವಣಿಗಳಿದ್ದು ಕಳೆದ ಸಾಲಿಗಿಂತ ಶೇ. 49.40 ರಷ್ಟು ಪ್ರಗತಿ ಸಾಧಿಸಿದೆ. ಹೊರಬಾಕಿ ಸಾಲವು ರೂ. 4.04 ಕೋಟಿ ಇದ್ದು, ಸಾಲ ವಿತರಣೆಯಲ್ಲಿ ಕಳೆದ ಸಾಲಿಗಿಂತ ಶೇ.50.19 ರಷ್ಟು ಹೆಚ್ಚಳವಾಗಿರುತ್ತದೆ. ಸಾಲ ಮರುಪಾವತಿಯಲ್ಲಿ ಶೇ.98.21 ರಷ್ಟು ಉತ್ತಮ ಪ್ರಗತಿ ದಾಖಲಿಸಿದೆ. ಸಂಘವು ವರ್ಷಾಂತ್ಯಕ್ಕೆ ರೂ.4.42 ಕೋಟಿ ದುಡಿಯುವ ಬಂಡವಾಳ ಹೊಂದಿದೆ” ಎಂದು ಪ್ರಾಸ್ತಾವಿಕ ಮಾತಿನೊಂದಿಗೆ ವೃತ್ತಿಪರ ನಿರ್ದೇಶಕರಾದ ಧರ್ಮಪಾಲ ಕೊಯಿಂಗಾಜೆ ಯವರು ವಾರ್ಷಿಕ ವರದಿ ಮಂಡಿಸಿದರು. 
ಮುಖ್ಯಕಾರ್ಯನಿರ್ವಹಣಾಧಿಕಾರಿ ಅಶ್ವತ್ ಬಿಳಿಮಲೆಯವರು 2025-26ನೇ ಸಾಲಿನ ಲೆಕ್ಕಪತ್ರವನ್ನು ಸಭೆಗೆ ಮಂಡಿಸಿ, ಪ್ರಸ್ತುತ ವರ್ಷ ಸದಸ್ಯರಿಗೆ ಶೇ.12% ಡಿವಿಡೆಂಡ್ ಘೋಷಿಸಿದರು.  ವಾರ್ಷಿಕ ವರದಿಯನ್ನು ಹಾಗೂ ಲೆಕ್ಕ ಪರಿಶೋಧನಾ ವರದಿಯನ್ನು ಸಂಘದ ಸದಸ್ಯರು ಅನುಮೋದಿಸಿ ಅಂಗೀಕರಿಸಿದರು. 
“ಸಂಘಕ್ಕೆ ಸ್ವಂತ ಜಾಗ ಖರೀದಿಸಿ ಸ್ವಂತ ಕಟ್ಟಡವನ್ನು ನಿರ್ಮಿಸಿದರೆ ಉತ್ತಮ” ಎಂದು ಶಿವರಾಮ ಕೇರ್ಪಳ ಸಲಹೆ ನೀಡಿದರು. 
ಉಪಾಧ್ಯಕ್ಷರಾದ ಸತ್ಯನಾರಾಯಣ ಅಚ್ರಪ್ಪಾಡಿ ಮಹಾಸಭೆಯ ನೋಟಿಸ್ ಓದಿ ದಾಖಲಿಸಿದರು. 2026-27 ನೇ ಸಾಲಿನ ಮುಂಗಡ ಪತ್ರವನ್ನು ನಿರ್ದೇಶಕರಾದ ಸಚಿನ್ ಕುಮಾರ್ ಬಳ್ಳಡ್ಕ‌ ವಾಚಿಸಿದರು. 2026-27ನೇ ಸಾಲಿನ ಲೆಕ್ಕ ಪರಿಶೋಧಕರ ನೇಮಕಾತಿ ಪ್ರಸ್ತಾವನೆಯನ್ನು ನಿರ್ದೇಶಕರಾದ ಪ್ರಕಾಶ್ ಕೇರ್ಪಳ ತಿಳಿಸಿದರು. ಸಹಕಾರಿಯ ಉಪನಿಬಂಧನೆಗಳಲ್ಲಿ ಉದ್ದೇಶಿತ ತಿದ್ದುಪಡಿಯ ಬಗ್ಗೆ ನಿರ್ದೇಶಕರಾದ ಪ್ರಭಾಕರನ್ ನಾಯರ್ ಸಭೆಗೆ ಪ್ರಸ್ತಾವನೆ ಸಲ್ಲಿಸಿದರು. 
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಜನಾರ್ಧನ ದೋಳರವರು ಮಾತನಾಡಿ “ಪ್ರಸ್ತುತ ವರ್ಷದಲ್ಲಿ 12% ಡಿವಿಡೆಂಡ್ ನೀಡುವ ಮೂಲಕ ಸದಸ್ಯರಿಗೆ ಪ್ರೋತ್ಸಾಹ ನೀಡಲಾಗಿದೆ. ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿ ವೇತನ ಹಾಗೂ ಹಿರಿಯ ಸದಸ್ಯರಿಗೆ ಸನ್ಮಾನಿಸುವ ಕಾರ್ಯಕ್ರಮ ಇರಿಸಿಕೊಳ್ಳಲಾಗುವುದು” ಎನ್ನುತ್ತಾ ಸಂಘದ ವಿವಿಧ ಯೋಜನೆಯ ಬಗ್ಗೆ ಸಭೆಗೆ ಮಾಹಿತಿ ನೀಡಿದರು. ಸಂಘದ ಮೇಲೆ ವಿಶ್ವಾಸವಿರಿಸಿ ಬೆಳವಣಿಗೆಗೆ ನಿರಂತರ ಪ್ರೋತ್ಸಾಹಿಸುತ್ತಿರುವ ಎಲ್ಲಾ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು.
|ಸಂಘದ ಸದಸ್ಯರು ಸೂಕ್ತ ಸಲಹೆ ಸೂಚನೆಗಳನ್ನು ವ್ಯಕ್ತಪಡಿಸಿದ್ದರು. ಸಂಘದ ಪಿಗ್ಮಿ ಸಂಗ್ರಾಹಕರಾದ ಗೀತಾ ಕುಮಾರಿ ಒಟೆಕಜೆ, ಶ್ರೀಮತಿ ಚಿತ್ರಾ ನಾಗಪಟ್ಟಣ, ಶ್ರೀಮತಿ ಸರಸ್ವತಿ ಮುಂಡೊಕಜೆ, ಸಿಬ್ಬಂದಿ ಜ್ಯೋತ್ಸ್ನಾ ರವರನ್ನು ಅಭಿನಂದಿಸಲಾಯಿತು.
ಸಂಘವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸುತ್ತಿರುವ ಸಿ.ಇ.ಒ ಅಶ್ವಥ್ ಬಿಳಿಮಲೆ ಯವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ಸಭೆಯಲ್ಲಿ ಹಾಜರಾದ ಸದಸ್ಯರ ಪೈಕಿ 6 ಜನ ಅದೃಷ್ಟಶಾಲಿ ಸದಸ್ಯರನ್ನು ಆಯ್ಕೆ ಮಾಡಿ ಬಹುಮಾನ ವಿತರಿಸಲಾಯಿತು.
ಸಂಘದ ನಿರ್ದೇಶಕರಾದ ದೀಕ್ಷಿತ್ ಪಾನತ್ತಿಲ, ಶ್ರೀಮತಿ ಹರ್ಷಿತ ಕುದ್ಪಾಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಿರ್ದೇಶಕರಾದ ಸತೀಶ್ ಕೆ.ಜಿ ಸ್ವಾಗತಿಸಿದರು. ವೃತ್ತಿಪರ ನಿರ್ದೇಶಕರಾದ ಡಾ. ಪುರುಷೋತ್ತಮ ಕಟ್ಟೆಮನೆ ವಂದಿಸಿದರು. ನಿರ್ದೇಶಕರಾದ ಶ್ರೀಮತಿ ಭವಾನಿ ಬಿಳಿಮಲೆ ಮತ್ತು ಸದಸ್ಯೆ ಶ್ರೀಮತಿ ಯಶೋಧ ಪೇರಡ್ಕ ಪ್ರಾರ್ಥಿಸಿದರು. ಸುದ್ದಿ ಬಿಡುಗಡೆ ವರದಿಗಾರ ಶಿವಪ್ರಸಾದ್ ಆಲೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಳಿಸಲಾಯಿತು. ಆಗಮಿಸಿದವರೆಲ್ಲರಿಗೂ ಮಧ್ಯಾಹ್ನ ಭೋಜನದ ವ್ಯವಸ್ಥೆ ಮಾಡಲಾಗಿತ್ತು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading