ಕುಕ್ಕೆ ಸುಬ್ರಹ್ಮಣ್ಯದಲ್ಲಿ ಬೃಹತ್ ಸ್ವಚ್ಛತಾ ಅಭಿಯಾನ

ಸುಬ್ರಹ್ಮಣ್ಯ ಜೂನ್ 05 : ಮಂಗಳೂರಿನ ನಿಟ್ಟೆ ಪಿಜಿಯೋಥೆರಪಿ ಮಹಾವಿದ್ಯಾಲಯ(ಕ್ಷೇಮ) ಆಯೋಜಿಸಿರುವ ವಿಶ್ವ ಪರಿಸರ ದಿನದ ಅಂಗವಾಗಿ ಜೂನ್ 05 ಶುಕ್ರವಾರದಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದ ಪರಿಸರದಲ್ಲಿ ಕ್ಲೀನ್ ಕುಮಾರಧಾರ, ಗ್ರೀನ್ ಸುಬ್ರಹ್ಮಣ್ಯ ಎಂಬ ಸ್ಲೋಗನ್‌ನೊಂದಿಗೆ ಬೃಹತ್ ಸ್ವಚ್ಛತಾ ಅಭಿಯಾನವನ್ನು ಕೈಗೊಳ್ಳಲಾಯಿತು. 
ಸ್ವಚ್ಛತಾ ಅಭಿಯಾನವನ್ನು ಫ್ಲಾಗ್ ಹಾರಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ ಅವರು “ಇಂದು ಪರಿಸರವನ್ನು ಉಳಿಸುವುದು, ಬೆಳೆಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಮೂಡನಂಬಿಕೆಯಿಂದ ದೂರವಿರೋಣ. ನದಿಯಲ್ಲಿ ಬಟ್ಟೆಯನ್ನು ಹಾಕಿ ಪರಿಸರ ಮಾಲಿನ್ಯ ಮಾಡುವುದು ಬೇಡ. ಪರಿಸರ ರಕ್ಷಣೆಯನ್ನು ಮಾಡಿ ನಮ್ಮ ರಕ್ಷಣೆಯನ್ನು ಮಾಡಿಕೊಳ್ಳೋಣ. ಕುಕ್ಕೆ ಸುಬ್ರಹ್ಮಣ್ಯ ದಂತಹ ದಿನನಿತ್ಯ ಸಾವಿರಾರು ಭಕ್ತಾದಿಗಳು ಬಂದು ಹೋಗುವ ಈ ಕ್ಷೇತ್ರದಲ್ಲಿ ನಿತ್ಯ ಸ್ವಚ್ಛತಾ ಅಭಿಯಾನವನ್ನು ಕೈಗೊಳ್ಳುವುದು ಅತ್ಯವಶ್ಯ. ಆ ನಿಟ್ಟಿನಲ್ಲಿ ವಿವಿಧ ಸಂಘಟನೆಗಳು ಸ್ವಚ್ಛತಾ ಅಭಿಯಾನಕ್ಕೆ ಕೈಜೋಡಿಸಿದಾಗ ನಾವು ಶ್ರೀ ದೇವಳದ ವತಿಯಿಂದ ಸಂಪೂರ್ಣ ಸಹಕಾರವನ್ನು ನೀಡುತ್ತೇವೆ. ಹಾಗೆಯೇ ಶ್ರೀ ಕ್ಷೇತ್ರಕ್ಕೆ ದೂರ ದೂರಗಳಿಂದ ಬರುವ ಭಕ್ತಾದಿಗಳು ಸ್ವಚ್ಛತೆಗೆ ಹೆಚ್ಚು ಗಮನ ನೀಡಬೇಕು. ಪರಿಸರವನ್ನ ಮಾಲಿನ್ಯ ಮಾಡಬಾರದು. ಎಲ್ಲಿ ಸ್ವಚ್ಛತೆ ಇದೆಯೋ ಅಲ್ಲಿ ದೇವರ ಸಾನಿಧ್ಯ ಇದೆ ಎಂದರು. 
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿಟ್ಟೆ ಕ್ಷೇಮದ ಡೀನ್ ಡಾ. ಸಂದೀಪ್ ರೈ ವಹಿಸಿ ಬೃಹತ್ ಸ್ವಚ್ಛತಾ ಅಭಿಯಾನಕ್ಕೆ ಎಲ್ಲರ ಸಹಕಾರವನ್ನು ಕೋರಿದರು. 
ಈ ಸಂದರ್ಭದಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದ ವ್ಯವಸ್ಥಾಪನಾ ಸಮಿತಿಯ ಮಾಜಿ ಸದಸ್ಯರಾದ ನ.ಸೀತಾರಾಮ, ಮಾತನಾಡಿ “ನಾವು ಇಂದು ಪರಿಸರವನ್ನ ಉಳಿಸದಿದ್ದರೆ ನಿತ್ಯ ಮಾಲಿನ್ಯ ಭರಿತ ಗಾಳಿಯನ್ನು ಉಸಿರಾಡಬೇಕಾಗುವ ಪರಿಸ್ಥಿತಿ ಬರಬಹುದು. ಆದ್ದರಿಂದ ಪ್ರತಿಯೊಬ್ಬ ಪ್ರಜೆಯು ಸ್ವಚ್ಛ ಪರಿಸರವನ್ನ ಕಾಪಾಡುವಲ್ಲಿ ತಮ್ಮ ಆಧ್ಯ ಕರ್ತವ್ಯವೆಂದು ಭಾವಿಸಿ, ಪರಿಸರದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು” ಎಂದರು. “ಇಂದು ಇಡೀ ವಿಶ್ವದಲ್ಲಿ ವಾಯುಮಾಲಿನ್ಯ ನೀರು ಮಣ್ಣು ಗಾಳಿ ಇತ್ಯಾದಿಗಳ ಮೇಲೆ ಮನುಷ್ಯನ ದೌರ್ಜನ್ಯ ನಡಿತ ಇದೆ. ನಾವು ಉತ್ತಮ ಬದುಕನ್ನು ರೂಪಿಸಿಕೊಳ್ಳಬೇಕಾದರೆ ಯೋಗ್ಯ ರೀತಿಯಲ್ಲಿ ಪರಿಸರವನ್ನು ಸಂರಕ್ಷಿಸೋಣ” ಎಂದು ನುಡಿದರು. 
ಮಾಜಿ ಸದಸ್ಯರುಗಳಾದ ಪ್ರಸನ್ನ ದರ್ಬೆ, ವನಜ ಭಟ್, ಮನೋಜ್, ಶೋಭ ಗಿರಿಧರ್, ಕುಮಾರ್, ಸುಬ್ರಹ್ಮಣ್ಯದ ಸದಾನಂದ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ವಿಕ್ರಮ ಶೆಟ್ಟಿ, ದಂತ ವೈದ್ಯ ಡಾ.ಚರಣ್ ಶೆಟ್ಟಿ, ಮೇಲ್ವಿಚಾರಕ ತಾರನಾಥ, ನಿಟ್ಟೆ ಫಿಜಿಯೋಥೆರಪಿ ಕನ್ವಿನರ್ ರಾಕೇಶ್ ಕೃಷ್ಣ, ಕೋ-ಆರ್ಡಿನೇಟರ್ ನಿತ್ಯಲ್ ಕುಮಾರ್, ಹಾಗೂ ನಿಟ್ಟೆ ಫಿಸಿಯೋಥೆರಪಿ ವಿದ್ಯಾರ್ಥಿಗಳು ಹಾಜರಿದ್ದರು.
ನಿಟ್ಟೆ ಇನ್ಸ್ಟಿಟ್ಯೂಟ್ ಆಫ್ ಫಿಸಿಯೋಥೆರಪಿ ಅದರ ಪ್ರಾಂಶುಪಾಲ ಡಾ.ದಿನೇಶ್ ಕುಮಾರ್ ಕೆ.ಯು ಎಲ್ಲರನ್ನ ಸ್ವಾಗತಿಸಿ ಕಾರ್ಯಕ್ರಮದ ರೂಪುರೇಷೆಗಳನ್ನು, ಉದ್ದೇಶಗಳನ್ನು ವಿವರಿಸಿದರು.
ಸುಬ್ರಹ್ಮಣ್ಯದ ನಿವೃತ್ತ ಉಪನ್ಯಾಸಕ ವಿಶ್ವನಾಥ ನಡುತೋಟ ನಿರೂಪಿಸಿದ ಕಾರ್ಯಕ್ರಮದ ಕೊನೆಯಲ್ಲಿ ನಿಟ್ಟೆ ಪಿಸಿಯೋಥೆರಪಿ ಇನ್ಸ್ಟಿಟ್ಯೂಟ್ ನ ಪ್ರಾಧ್ಯಾಪಕ ಡಾ. ಪುರುಷೋತ್ತಮ ಅವರು ಧನ್ಯವಾದ ಸಮರ್ಪಿಸಿದರು. ತದನಂತರ ನಿಟ್ಟೆ ಇನ್ಸ್ಟಿಟ್ಯೂಟ್ ಆಫ್ ಫಿಸಿಯೋಥೆರಪಿಯ ಸುಮಾರು 60-70ವಿದ್ಯಾರ್ಥಿಗಳು ಕುಮಾರಧಾರ ಸ್ನಾನಘಟ್ಟ ಬಳಿ ಹಾಗೂ ಆದಿ ಸುಬ್ರಹ್ಮಣ್ಯ ಪರಿಸರದ ನದಿ ಬಳಿಯಲ್ಲಿ ನದಿ ಸ್ವಚ್ಛತಾ ಕಾರ್ಯಕ್ರಮವನ್ನು ಕೈಗೊಂಡರು. ಶ್ರೀ ದೇವಳದ ವತಿಯಿಂದ ಬೆಳಗ್ಗೆಯ ಉಪಹಾರ ಮಧ್ಯಾಹ್ನದ ಭೋಜನವನ್ನು ಏರ್ಪಡಿಸಲಾಗಿತ್ತು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading