ಬಿಲ್ಲವ ಸಮುದಾಯದ ನಾಯಕ, ವೃತ್ತಿಯಲ್ಲಿ ನ್ಯಾಯವಾದಿಯೂ ಆಗಿರುವ ಪದ್ಮರಾಜ್ ಆರ್. ಅವರಿಗೆ ಈ ಬಾರಿಯ ಕಾಂಗ್ರೆಸ್ ಟಿಕೆಟ್ ಲಭಿಸಿದೆ.
ಗುರು ಬೆಳದಿಂಗಳು ಫೌಂಡೇಶನ್ ಸಂಸ್ಥಾಪಕ, ಬಿಲ್ಲವ ಸಮುದಾಯದ ಪದ್ಮರಾಜ್ ರಾಮಯ್ಯ ಅವರು ಸಾಮಾಜಿಕ ಮುಂದಾಳುವಾಗಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಾಳೂರು ಎಂಬ ಪುಟ್ಟ ಗ್ರಾಮದಲ್ಲಿ ಮಂಗಳೂರು ಮೂಲದ ಎಚ್.ಎಂ.ರಾಮಯ್ಯ ಮತ್ತು ಲಲಿತಾ ದಂಪತಿಯ ದ್ವಿತೀಯ ಪುತ್ರನಾಗಿ ಜನಿಸಿದ ಪದ್ಮರಾಜ್ ರಾಮಯ್ಯರವರು ತನ್ನ ಅಣ್ಣ ಮಂಗಳೂರಿನ ಹೆಸರಾಂತ ಹೃದಯ ರೋಗ ತಜ್ಞ ಡಾ. ಪುರುಷೋತ್ತಮ ಆರ್ ರವರಂತೆ ಬಾಲ್ಯದಿಂದಲೇ ಪ್ರತಿಭಾನ್ವಿತ. ತನ್ನ ಪ್ರಾಥಮಿಕ, ಪ್ರೌಢ ಹಾಗೂ ಪದವಿಪೂರ್ವ ಶಿಕ್ಷಣವನ್ನು ಹುಟ್ಟೂರಾದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಮುಗಿಸಿ ಮುಂದೆ ಬಿ.ಎ ಪದವಿಯನ್ನು ಮಡಂತ್ಯಾರು ಸೆಕ್ರೇಡ್ ಹಾರ್ಟ್ ಕಾಲೇಜು ಹಾಗೂ ಕಾನೂನು ಪದವಿಯನ್ನು ಎಸ್‌ಡಿಎಂ ಕಾನೂನು ಕಾಲೇಜಿನಲ್ಲಿ ಮುಗಿಸಿದರು. ೧೯೯೫ರಿಂದ ಕಾನೂನು ವೃತ್ತಿಯ ಚೊಚ್ಚಲ ಅಭ್ಯಾಸವನ್ನು ಕೇಂದ್ರದ ಮಾಜಿ ವಿತ್ತ ಸಚಿವ ಜನಾರ್ದನ ಪೂಜಾರಿಯವರೊಂದಿಗೆ ನಾಲ್ಕು ವರ್ಷಗಳ ಬಳಿಕ ಬಳ್ಳಾಲ್‌ಬಾಗ್‌ನಲ್ಲಿ ಸ್ವಂತ ಕಚೇರಿ ಪ್ರಾರಂಭಿಸಿದರು. ವೃತ್ತಿ ಜೀವನದ ಆರಂಭದ ಸಮಯದಲ್ಲಿ ಹಿರಿಯ ವಕೀಲರಾದ ಪಿ.ಗಂಗಾಧರ್ ಸಲಹೆಯಂತೆ ಆಗಿನ ಬಿಲ್ಲವರ ಯೂನಿಯನ್‌ನ ಸದಸ್ಯನಾಗುವ ಸುಯೋಗವೂ ದೊರೆಯಿತು. ತಾನು ಯಾವುದೇ ರಾಜಕೀಯ ಪಕ್ಷದಲ್ಲಿ ಗುರುತಿಸಿಕೊಳ್ಳದಿದ್ದರೂ ಶುದ್ಧಹಸ್ತದ, ನೇರ ನಡೆನುಡಿಯ, ಬಿಲ್ಲವ ಸಮಾಜದ ಹೆಮ್ಮೆಯ ನಾಯಕ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ನವೀಕರಣದ ರೂವಾರಿ ಬಿ.ಜನಾರ್ದನ ಪೂಜಾರಿಯವರ ಎಲ್ಲ ಚುನಾವಣೆ ಸಂದರ್ಭದಲ್ಲೂ ಅವರಿಗಾಗಿ ದುಡಿದಿದ್ದಾರೆ.
ನೋಟರಿ ವಕೀಲರಾದ ಪದ್ಮರಾಜ್ ತನ್ನ ನೋಟರಿ ಸಹಿಯನ್ನು ಬಡವರು, ವಿದ್ಯಾರ್ಥಿಗಳ ದೃಢೀಕರಣಕ್ಕೆ ಉಚಿತವಾಗಿ ನೀಡುವ ಮೂಲಕ ಸಮಾಜಕ್ಕೊಬ್ಬ ಮಾದರಿ ವಕೀಲರಾಗಿ ಮಿಂಚುತ್ತಿದ್ದಾರೆ.