Ad Widget

ಮಳೆಗಾಲದಲ್ಲಿ ಕಾಣಿಸಿಕೊಳ್ಳುವ ಮತ್ತು ಗಂಟು ಗಂಟುಗಳನ್ನು ಕಾಡುವ ಖಾಯಿಲೆ ಚಿಕುನ್‍ಗುನ್ಯಾ ಜ್ವರ : ರೋಗ ಲಕ್ಷಣ, ಚಿಕಿತ್ಸೆ ಬಗ್ಗೆ ಇಲ್ಲಿದೆ ಸಂಪೂರ್ಣ ವಿವರ

ಬರಹ : ಮುರಲೀ ಮೋಹನ್ ಚೂಂತಾರು

. . . . . . .

ಉಷ್ಣವಲಯದ ದೇಶಗಳಲ್ಲಿ, ಮಳೆಗಾಲದಲ್ಲಿ ಹೆಚ್ಚು ಕಾಣಿಸಿಕೊಳ್ಳುವ ಮತ್ತು ಗಂಟು ಗಂಟುಗಳನ್ನು ಕಾಡುವ ಇನ್ನೊಂದು ಖಾಯಿಲೆ ಎಂದರೆ ಚಿಕುನ್‍ಗುನ್ಯಾ ಜ್ವರ. ಡೆಂಘೀ ಜ್ವರವನ್ನು ಹರಡುವ ಏಡಿಸ್ ಎಜೆಪ್ಟಿ ಮತ್ತು ಏಡಿಸ್ ಆಲ್ಬೋಪಿಕ್ಟಸ್ ಎಂಬ ಸೊಳ್ಳೆಗಳೇ ಚಿಕುನ್ ಗುನ್ಯಾರೋಗವನ್ನೂ ಹರಡುತ್ತವೆ. ‘ಚಿಕುನ್ ಗುನ್ಯಾ’ ಎಂಬ ವೈರಸ್‍ನ ಸೋಂಕಿನಿಂದ ಬರುವ ಈ ಜ್ವರ, ಸಾಂಕ್ರಾಮಿಕ ರೋಗವಾಗಿದ್ದು, ಏಡಿಸ್ ಸೊಳ್ಳೆಗಳ ಮುಖಾಂತರ ವ್ಯಕ್ತಿಯಿಂದ ವ್ಯಕ್ತಿಗೆ ಹರಡುತ್ತದೆ.

1952ರಲ್ಲಿ ದಕ್ಷಿಣ ತಾಂಜಾನಿಯಾ ದೇಶದಲ್ಲಿ ಚಿಕುನ್‍ಗುನ್ಯಾ ಮೊದಲು ಕಾಣಿಸಿಕೊಂಡಿತ್ತು ಈ ರೋಗದಲ್ಲಿ, ಹೆಚ್ಚಾಗಿ ಗಂಟುಗಂಟುಗಳಲ್ಲಿ ಅತಿಯಾಗಿ ನೋವಿರುವ ಕಾರಣ, ದೇಹ ‘ಮುಂದಕ್ಕೆ ಬಾಗಿಸಿದಂತೆ’ ಅನಿಸುತ್ತದೆ. ಮೂಳೆಗಳು ನೇರವಾಗಿ ಸೆಟೆದು ನಿಲ್ಲಲಾಗದಷ್ಟು ನೋವಿರುವ ಕಾರಣ, ದೇಹ ಬಾಗಿದಂತೆ ಭಾಸವಾಗುತ್ತದೆ. ‘ಮಕೋಂಡೆ’ಬಾಷೆಯಿಂದ ‘ಚಿಕುನ್‍ಗುನ್ಯಾ’ಎಂಬ ಶಬ್ದ ಹುಟ್ಟಿ ಕೊಂಡಿದ್ದು, ಮೂಲತಃ ‘ಮುಂದಕ್ಕೆ ಬಾಗು’ ಅಥವಾ ‘ಮೇಲಕ್ಕೆ ಬಾಗಿಸುವಂತದ್ದು’ ಎಂಬ ಅರ್ಥ ನೀಡುವುದರಿಂದ ‘ಚಿಕುನ್‍ಗುನ್ಯಾ’ ಎಂಬ ಹೆಸರು ಈ ರೋಗಕ್ಕೆ ಬಂದಿದೆ.

ಆಡುಬಾಷೆಯಲ್ಲಿ ಜನರ ಚಿಕುನ್‍ಗುನ್ಯಾವನ್ನು ‘ಚಿಕನ್‍ಗುನ್ಯಾ’ ಎಂದು ತಿರುಚಿ ಬಿಟ್ಟಿದ್ದಾರೆಯೇ ಹೊರತು, ಈ ರೋಗಕ್ಕೂ ಕೋಳಿಗೂ, ಕೋಳಿಯಿಂದ ತಯಾರಾದ ಪದಾರ್ಥಕ್ಕೂ ಏನೇನೂ ಸಂಬಂಧವಿಲ್ಲ. ಆಫ್ರಿಕಾ ಮತ್ತು ಏಷ್ಯಾಖಂಡಗಳಲ್ಲಿ ಮತ್ತು ಭಾರತೀಯ ಉಪಖಂಡದಲ್ಲಿ ಹೆಚ್ಚು ಕಾಣಿಸಿಕೊಳ್ಳುವ ಈ ರೋಗ, ಈಗೀಗ ಯುರೋಪ್ ಮತ್ತು ಅಮೇರಿಕಾ ದೇಶಕ್ಕೂ ವಿಸ್ತರಿಸಿದೆ. ರೋಗಕ್ಕೆ ಖಚಿತವಾದ ಚಿಕಿತ್ಸೆ ಇಲ್ಲದಿದ್ದರೂ, ರೋಗದ ಲಕ್ಷಣಗಳನ್ನು ಉಲ್ಭಣಗೊಳ್ಳದಂತೆ ಮತ್ತು ರೋಗದ ತೀವ್ರತೆಯನ್ನು ಕಡಿಮೆಗೊಳಿಸುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ಇಲ್ಲವಾದಲ್ಲಿ, ವಿಪರೀತ ಗಂಟುನೋವು ಬಾಧಿಸಿ, ತಾತ್ಕಾಲಿಕ ಅಂಗವೈಕಲ್ಯ ಉಂಟಾಗಬಹುದು. ಸಮಾಧಾನಕರ ಅಂಶವೆಂದರೆ, ಈ ರೋಗಕ್ಕೆ ಲಸಿಕೆ ಕಂಡು ಹಿಡಿಯುವ ಪ್ರಯತ್ನದಲ್ಲಿ ಹೆಚ್ಚಿನ ಯಶಸ್ಸು ಸಿಕ್ಕಿದೆ ಮತ್ತು ಇನ್ನೊಂದೆರಡು ವರ್ಷಗಳಲ್ಲಿ, ಈ ರೋಗವನ್ನು ತಡೆಗಟ್ಟುವ ನಿಟ್ಟಿನಲ್ಲಿ ಪರಿಣಾಮಕಾರಿ ಲಸಿಕೆಗಳು ಮಾರುಕಟ್ಟೆಯಲ್ಲಿ ಲಭ್ಯವಾಗುವ ಬಲವಾದ ಸೂಚನೆಗಳು ಸಿಕ್ಕಿವೆ.

ರೋಗದ ಲಕ್ಷಣಗಳು

ರೋಗದ ಕಿಟಕಿ ಅವಧಿ ಸುಮಾರು 1 ರಿಂದ 12 ದಿನಗಳಾಗಿದ್ದರೂ, ಹೆಚ್ಚಾಗಿ ಸೊಳ್ಳೆ ಕಡಿದ ಒಂದೆರಡು ದಿನಗಳಲ್ಲಿ ರೋಗದ ಲಕ್ಷಣಗಳು ಗೋಚರಿಸುತ್ತದೆ. ಮೊದಲ ಹಂತದಲ್ಲಿ ವಿಪರೀತವಾಗಿ ಬಾಧಿಸುವ ಈ ರೋಗದಲ್ಲಿ ಅತೀವ ಜ್ವರ (104 degree Celsius), ಮೈಮೇಲೆ ಕಪ್ಪು ಚುಕ್ಕೆಗಳು ಅಥವಾ ಹಚ್ಚೆಗಳು ಮತ್ತು ಗುಳ್ಳೆಗಳು ಹೊಟ್ಟೆ ಮತ್ತು ಕೈ ಕಾಲುಗಳಲ್ಲಿ ಕಾಣಿಸಿಕೊಳ್ಳಬಹುದು. ಇದರ ಜೊತೆಗೆ ತಲೆನೋವು, ವಾಂತಿ, ವಾಕರಿಕೆ, ಕಣ್ಣಿನಲ್ಲಿ ಉರಿ, ಬೆಳಕು ಕಂಡಾಗ ಕಣ್ಣು ಮುಚ್ಚುವುದು, ಹಸಿವಿಲ್ಲದಿರುವುದು ಮತ್ತು ರುಚಿ ತಪ್ಪುವುದು ಇತ್ಯಾದಿಗಳು ಕಾಣಿಸಿಕೊಳ್ಳಬಹುದು. ಗಂಟುಗಳಲ್ಲಿ, ಸಂದು-ಸಂದುಗಳಲ್ಲಿ ನೋವು, ಉರಿಯೂತ ಕಾಣಿಸಿಕೊಳ್ಳಬಹುದು. ಸಾಮಾನ್ಯವಾಗಿ ಎರಡು ದಿನಗಳವರೆಗೆ ಜ್ವರ ಬರಬಹುದು ಮತ್ತು ತನ್ನಿಂತಾನೇ ಕಡಿಮೆಯಾಗಬಹುದು. ಹಾಗಾಗಿ ರೋಗಿಗಳು ಸ್ವಲ್ಪ ಗೆಲುವಾದಂತೆ ಗೋಚರಸಬಹುದು. ಇದರ ಬಳಿಕ ಗಂಟುನೋವು, ವಿಪರೀತ ತಲೆನೋವು, ಹಸಿವು ಮತ್ತು ನಿದ್ರೆಯಿಲ್ಲದಿರುವುದು ಇತ್ಯಾದಿಗಳು ಕಾಣಿಸಿಕೊಳ್ಳಬಹುದು. ಕಾಲುಗಳಲ್ಲಿ ಊತ ಕಾಣಿಸಿಕೊಳ್ಳಬಹುದು. ಸಾಮಾನ್ಯವಾಗಿ ಕಿಡ್ನಿ, ಹೃದಯ ಮತ್ತು ಯಕೃತ್ತಿನ ತೊಂದರೆ ಇರುವವರಗೆ ಈ ರೀತಿ ಕಾಲಿನ ಊತ ಬರುತ್ತದೆ. ಆದರೆ ಚಿಕುನ್‍ಗುನ್ಯಾ ರೋಗದಲ್ಲಿ ಕಿಡ್ನಿ, ಹೃದಯ ಮತ್ತು ಯಕೃತ್ತ್ ಸರಿಯಾಗಿ ಇದ್ದರೂ ಕಾಲುಗಳು ಊದಿಕೊಂಡು ನೀರು ತುಂಬಿದಂತೆ ಭಾಸವಾಗುತ್ತದೆ. ಗಂಟುನೋವು ಕೆಲವೊಮ್ಮೆ 2-3 ವರುಷಗಳ ವರೆಗೆ ಕಾಡಬಹುದು. ಸಣ್ಣ ಮಕ್ಕಳಲ್ಲಿ 5ರಿಂದ 15ದಿನ, ಮಧ್ಯ ವಯಸ್ಕರಲ್ಲಿ 1ರಿಂದ 3ತಿಂಗಳು ಮತ್ತು ವೃದ್ಯಾಪ್ಯದಲ್ಲಿ ವರ್ಷಾನುಗಟ್ಟಲೆ ಗಂಟುನೋವು ಕಾಡಬಹುದು. ಪ್ರಾರಂಭಿಕ ಹಂತದಲ್ಲಿ ಗುರುತಿಸಿ ಚಿಕಿತ್ಸೆ ನೀಡದಲ್ಲಿ ರೋಗದ ತೀವ್ರತೆಯನ್ನು ಕಡಿಮೆ ಮಾಡಬಹುದು.

ಹೇಗೆ ಹರಡುತ್ತದೆ?

ಸಾಮಾನ್ಯವಾಗಿ ಚಿಕುನ್‍ಗುನ್ಯಾ ವೈರಸ್ ಮಂಗಗಳು, ಚಿಂಪಾಂಜಿಗಳು ಮತ್ತು ರೊಡೆಂಟ್‍ಗಳಲ್ಲಿ ವಾಸಿಸುತ್ತದೆ. ಇವುಗಳಿಂದ ಏಡಿಸ್ ಸೊಳ್ಳೆಯ ಮುಖಾಂತರ ಚಿಕುನ್‍ಗುನ್ಯಾ ವೈರಾಣು ಮನುಷ್ಯನಿಗೆ ಹರಡುತ್ತದೆ. ಸಾಮಾನ್ಯವಾಗಿ ಚಿಕುನ್‍ಗುನ್ಯಾ ರೋಗಪೀಡಿತ ವ್ಯಕ್ತಿಯನ್ನು ಏಡಿಸ್ ಸೊಳ್ಳೆ ಕಡಿದಾಗ, ರಕ್ತ ಹೀರಿದಾಗ, ಈ ವೈರಾಣು ಏಡಿಸ್ ಸೊಳ್ಳೆಯ ದೇಹಕ್ಕೆ ವರ್ಗಾವಣೆಯಾಗುತ್ತದೆ. ಮತ್ತು ಈ ವೈರಾಣುಯುಕ್ತ ಏಡಿಸ್ ಸೊಳ್ಳೆ ಇನ್ನೊಬ್ಬ ಆರೋಗ್ಯವಂತ ವ್ಯಕ್ತಿಯನ್ನು ಕಚ್ಚಿದಾಗ ಈ ವೈರಾಣು, ಆತನ ದೇಹಕ್ಕೆ ಸೇರಿಕೊಂಡು ಆತನಿಗೂ ಚಿಕುನ್‍ಗುನ್ಯಾ ಜ್ವರ ಬರುವಂತೆ ಮಾಡುತ್ತದೆ. ಹೀಗೆ ನೇರವಾಗಿ ಮನುಷ್ಯನಿಂದ ಮನುಷ್ಯನಿಗೆ ಈ ರೋಗ ಹರಡುವುದಿಲ್ಲ. ಆದರೆ ರೋಗದ ವಾಹಿನಿಯಾಗಿ ಏಡಿಸ್ ಸೊಳ್ಳೆ ಮನುಕುಲಕ್ಕೆ ಕಂಟಕ ಪ್ರಾಯವಾಗಿ ಎರಗಿದೆ.

ಡೆಂಘಿ, ಚಿಕುನ್‍ಗುನ್ಯಾ ಮತ್ತು ಮಲೇರಿಯಾ ಜ್ವರಗಳಲ್ಲಿ ಏನು ವ್ಯತ್ಯಾಸಗಳು ?

ಈ ಮೂರು ರೋಗಗಳು ಸೊಳ್ಳೆಗಳಿಂದ ಹರಡುತ್ತದೆ. ಮಲೇರಿಯಾ ರೋಗ ಅನಾಫೆಲಿಸ್ ಹೆಣ್ಣು ಸೊಳ್ಳೆಯಿಂದ ಹರಡುತ್ತದೆ. ಮತ್ತು ಈ ಸೊಳ್ಳೆಗಳು ರಾತ್ರಿ ಹೊತ್ತು ಮತ್ತು ಮುಸ್ಸಂಜೆ ಮತ್ತು ಬೆಳ್ಳಂಬೆಳಗ್ಗಿನ ಹೊತ್ತಲ್ಲಿ ಹೆಚ್ಚು ಕಾಡುತ್ತವೆ. ಮತ್ತು ಕಚ್ಚುತ್ತವೆ. ಡೆಂಘಿ ಮತ್ತು ಚಿಕುನ್‍ಗುನ್ಯಾ, ಏಡಿಸ್ ಸೊಳ್ಳೆಗಳಿಂದ ಹರಡುತ್ತದೆ. ಮತ್ತು ಈ ಸೊಳ್ಳೆಗಳು ಹೆಚ್ಚಾಗಿ ಹಗಲು ಹೊತ್ತು ಕಚ್ಚುತ್ತದೆ. ಡೆಂಘಿ ರೋಗ ಸುಮಾರು ಸೊಳ್ಳೆ ಕಡಿದು 3ರಿಂದ 4ದಿನದ ಬಳಿಕ ಕಾಣಿಸಿಕೊಳ್ಳುತ್ತದೆ. ಮತ್ತು ವಾರಗಳ ವರೆಗೆ ಮುಂದುವರಿಯುತ್ತವೆ. ಆದರೆ ಚಿಕುನ್‍ಗುನ್ಯಾದ ಲಕ್ಷಣಗಳು ಕಾಣಿಸಿಕೊಳ್ಳಲು ಒಂದುವಾರ ಬೇಕಾಗಬಹುದು ಮತ್ತು ಮಲೇರಿಯಾ ರೋಗ ಸೊಳ್ಳೆ ಕಡಿದು ಕನಿಷ್ಟ 2 ವಾರಗಳ ಬಳಿಕ ಕಾಣಿಸಿಕೊಳ್ಳಬಹುದು.
ಎಲ್ಲಾ ಮೂರು ರೋಗಗಳಲ್ಲಿ ಜ್ವರ 102 ಡಿಗ್ರಿ ಸೆಲ್ಸಿಯಸ್ ಗಿಂತ ಜಾಸ್ತಿ ಇರುತ್ತದೆ. ತೀವ್ರ ಜ್ವರ, ಕಣ್ಣಿನ ಸುತ್ತ ನೋವು ತೀವ್ರ ತಲೆನೋವು, ಸ್ನಾಯು ಸೆಳೆತ, ಗಂಟು ನೋವು ಈ ರೋಗಗಳಲ್ಲಿ ಇರಬಹುದು.
ಚಿಕುನ್ ಗುನ್ಯಾದಲ್ಲಿ ಹೆಚ್ಚಿನ ಗಂಟುನೋವು ಇರಬಹುದು. ಆದರೆ ಡೆಂಘಿ ಜ್ವರದಂತೆ ಯಾವುದೇ ರೀತಿಯ ರಕ್ತಸ್ರಾವ, ಮೂಗಿನಿಂದ ಮತ್ತು ವಸಡುಗಳಿಂದ ಇರುವುದಿಲ್ಲ. ಡೆಂಘಿ ಜ್ವರದಲ್ಲಿ ಬಿಳಿರಕ್ತಕಣಗಳ ಸಂಖ್ಯೆ ಮತ್ತು ಪ್ಲೇಟಲೇಟ್ ಕಣಗಳ ಸಂಖ್ಯೆ ಕಡಿಮೆ ಇರುತ್ತದೆ. ಮಲೇರಿಯಾ ಜ್ವರದಲ್ಲಿ ಜ್ವರದ ಏರುಪೇರು ಒಂದೇ ರೀತಿಯದ್ದಾಗಿರುತ್ತದೆ. ಮತ್ತು ಚಳಿ, ನಡುಕ ಮತ್ತು ಬೆವರುವಿಕೆ ಸಾಮಾನ್ಯವಾಗಿ ಜ್ವರದ ಜೊತೆಗೆ ಇರುತ್ತದೆ. ಆದರೆ ಇವು ಡೆಂಘಿ ಮತ್ತು ಚಿಕುನ್‍ಗುನ್ಯಾದಲ್ಲಿ ಇರುವುದಿಲ್ಲ. ಮಲೇರಿಯಾ ಜ್ವರವನ್ನು ರಕ್ತ ಪರೀಕ್ಷೆಯ ಮೂಲಕ ಪತ್ತೆಹಚ್ಚಬಹುದು ಮತ್ತು ನಿರ್ದಿಷ್ಟ ಪರಿಣಾಮಕಾರಿ ಔಷಧಿಗಳ ಲಭ್ಯವಿದೆ. ಆದರೆ ಡೆಂಘಿ ಮತ್ತು ಚಿಕುನ್‍ಗುನ್ಯಾಗಳಿಗೆ ನಿರ್ದಿಷ್ಟ ಔಷಧಿಗಳು ಇಲ್ಲ. ಕೇವಲ ರೋಗದ ಲಕ್ಷಣಗಳನ್ನು ನೋಡಿ ಜ್ವರದ ಮತ್ತು ನೋವು ನಿವಾರಕ ಔಷಧಿ ನೀಡಲಾಗುತ್ತದೆ. ಮತ್ತು ರೋಗದ ತೀವ್ರತೆಯನ್ನು ಕಡಿಮೆಯಾಗಿಸುವ ಪ್ರಯತ್ನ ಮಾಡಲಾಗುತ್ತದೆ. ಡೆಂಘಿ ಜ್ವರಕ್ಕೆ ಲಸಿಕೆ ಇಲ್ಲ. ಚಿಕುನ್‍ಗುನ್ಯಾ ರೋಗದ ಲಸಿಕೆ ಮಾರುಕಟ್ಟೆಗೆ ಬರುವ ಸೂಚನೆ ಇದೆ. ಡೆಂಘಿ ಮತ್ತು ಚಿಕುನ್‍ಗುನ್ಯಾ ರೋಗಗಳ ಲಕ್ಷಣಗಳು ಹೆಚ್ಚಾಗಿ ಹೋಲುವುದರಿಂದ ರೋಗದ ಲಕ್ಷಣಗಳಿಗನುಗುಣವಾಗಿ ಚಿಕಿತ್ಸೆ ನೀಡಲಾಗುತ್ತದೆ. ಮತ್ತು ಸಂಭಾವ್ಯ ತೀರ್ವತೆಯನ್ನು ತಡೆಯಲಾಗುತ್ತದೆ.

ರೋಗ ಪತ್ತೆ ಹಚ್ಚುವುದು ಹೇಗೆ ?

ELISA ಎಂಬ ಪರೀಕ್ಷೆ ಮಖಾಂತರ IgG ಮತ್ತು IgM ಎಂಬ ಚಿಕುನ್‍ಗುನ್ಯಾ ಅಂಟಿಬಾಡಿ ರಕ್ತದಲ್ಲಿ ಪತ್ತೆಹಚ್ಚಲಾಗುತ್ತದೆ. IgG ಅಂಟಿಬಾಡಿ ಎಂಬ ಪ್ರೋಟೀನ್ ಮೊದಲ 3ರಿಂದ 5 ವಾರಗಳ ಕಾಲ ರಕ್ತದಲ್ಲಿ ಇರಬಹುದು. RT PCR ಎಂಬ ಪರೀಕ್ಷೆಯ ಮುಖಾಂತರವೂ ವೈರಾಣುಗಳನ್ನು ಪತ್ತೆಹಚ್ಚಬಹುದು. ಡೆಂಘಿ ಮತ್ತು ಚಿಕುನ್‍ಗೂನ್ಯಾ ರೋಗವನ್ನು ಹೆಚ್ಚಾಗಿ ELISA ಮತ್ತು RT PCRಪರೀಕ್ಷೆಯ ಮುಖಾಂತರ ಪತ್ತೆಹಚ್ಚಲಾಗುತ್ತದೆ. ಮಲೇರಿಯಾ ರೋಗಕ್ಕೆ ಬರೀ ರಕ್ತ ಪರೀಕ್ಷೆ ಸಾಕಾಗುತ್ತದೆ. ಮೆದುಳು ದ್ರವ್ಯ (CSF) ದ ಪರೀಕ್ಷೆ ಮುಖಾಂತರವು ಡೆಂಘಿ ಮತ್ತು ಚಿಕುನ್‍ಗುನ್ಯಾ ಪತ್ತೆಹಚ್ಚಬಹುದು.

ಚಿಕಿತ್ಸೆ ಹೇಗೆ ?

ನಿರ್ದಿಷ್ಟವಾದ ಚಿಕಿತ್ಸೆ ಚಿಕುನ್‍ಗುನ್ಯಾ ರೋಗಕ್ಕೆ ಇಲ್ಲ. ಆದರೆ ಖಾಯಿಲೆಯ ಲಕ್ಷಣಗಳಿಗೆ ಚಿಕಿತ್ಸೆ ನೀಡಲಾಗುತ್ತದೆ. ಉದಾಹರಣೆಗೆ ಜ್ವರವನ್ನು ಫಾರಸಿಟಮೋಲ್ ಔಷಧಿಗಳ ಮುಖಾಂತರ ಗುಣಪಡಿಸಲಾಗುತ್ತದೆ. ಆದರೆ ಆಸ್ಪರಿನ್ ಮಾತ್ರೆಯನ್ನು ಯಾವ ಕಾರಣಕ್ಕೂ ಬಳಸುವಂತಿಲ್ಲ. ಆದೇ ರೀತಿ ಗಂಟು ನೋವಿಗೆ ನೋವು ನಿವಾರಕ ಔಷಧಿ ನೀಡಲಾಗುತ್ತದೆ. ಜೊತೆಗೆ ಸಂಪೂರ್ಣವಾದ ವಿಶ್ರಾಂತಿಯನ್ನು ರೋಗಿಗಳಿಗೆ ನೀಡಬೇಕಾಗುತ್ತದೆ. ಮತ್ತು ಹೆಚ್ಚು ದ್ರವಾಹಾರ ಸೇವನೆ ಮಾಡಬೇಕಾಗುತ್ತದೆ. ವೈದ್ಯರ ಸಲಹೆ ಮೇರೆಗೇ ಔಷಧಿಗಳನ್ನು ಸೇವಿಸಬೇಕು. ಕೇವಲ ಜ್ವರವೆಂದು ನಿರ್ಲಕ್ಷ ಮಾಡಿದಲ್ಲಿ ತೀವ್ರ ತರದ ಅಂಗವೈಕಲ್ಯ ಉಂಟಾಗಬಹುದು. ಚಿಕುನ್‍ಗುನ್ಯಾದಿಂದ ಜೀವಕ್ಕೆ ಹಾನಿಯ ಸಂಭವ ಕಡಿಮೆ. ಆದರೆ ಡೆಂಘಿ ಜ್ವರದಿಂದ ಮೆದುಳಿನ ರಕ್ತಸ್ರಾವವಾಗಿ, ಪ್ಲೇಟ್‍ಲೇಟ್ ಸಂಖ್ಯೆ ಕಡಿಮೆಯಾಗಿ ಜೀವಕ್ಕೂ ಕುತ್ತು ಬರಬಹುದು. ಆದ ಕಾರಣ ವೈದ್ಯರಿಗೆ ಈ ಜ್ವರಗಳಿಗೆ ಔಷಧಿ ನೀಡುವಾಗ ವಿಶೇಷ ಕಾಳಜಿ ಮತ್ತು ಮುತುವರ್ಜಿ ನೀಡುವ ಅವಶ್ಯಕತೆ ಇದೆ.

ತಡೆಗಟ್ಟುವುದು ಹೇಗೆ ?

  1. ಸೊಳ್ಳೆ ಕಡಿತದಿಂದ ಪಾರಾಗುವ ಎಲ್ಲಾ ಕ್ರಮಗಳನ್ನು ತಪ್ಪದೆ ಪಾಲಿಸಬೇಕು. ಉದ್ದ ತೋಳಿನ ಅಂಗಿ, ಕಾಲುಚೀಲ, ಕಾಲು ಮುಚ್ಚುವ ಪ್ಯಾಂಟ್, ನಿಲುವಂಗಿ, ನೈಟಿ ಇತ್ಯಾದಿ ಬಳಸ ಬಹುದು.
  2. ಸೊಳ್ಳೆ ನಿರೋಧಕ ದ್ರಾವಣ ಬಳಸಬಹುದು
  3. ಸೊಳ್ಳೆ ವಿಕರ್ಷಿತವಾಗುವ ಬಟ್ಟೆಗಳನ್ನು ಬಳಸಬೇಕು. ಪರ್‍ಮೆಥ್ರೀನ್ ಎಂಬ ದ್ರಾವಣ ಸಿಂಪಡಿಸಿದ ಬಟ್ಟೆಗಳಿಂದ ಸೊಳ್ಳೆಗಳು ವಿಕರ್ಷಿತವಾಗುತ್ತವೆ.
  4. ಮನೆಗಳಲ್ಲಿ ಸೊಳ್ಳೆ ಪರದೆ ಕಡ್ಡಾಯವಾಗಿ ಬಳಸಬೇಕು. ಹಗಲು ಹೊತ್ತು ಕೂಡಾ ಬಳಸತಕ್ಕದ್ದು. ಯಾಕೆಂದರೆ ಏಡಿಸ್ ಸೊಳ್ಳೆ ಹಗಲು ಹೊತ್ತಿನಲ್ಲೇ ಕಚ್ಚುತ್ತದೆ.
  5. ಸೊಳ್ಳೆ ಸಾಂಧ್ರತೆ ಜಾಸ್ತಿ ಇರುವ ಪ್ರದೇಶಗಳಲ್ಲಿ ವಿಶೇಷ ಮುತುವರ್ಜಿ ವಹಿಸತಕ್ಕದ್ದು. ವೃದ್ಧರು ಮತ್ತು ಮಕ್ಕಳು ಇರುವ ಮನೆಗಳಲ್ಲಿ ವಿಶೇಷ ಕಾಳಜಿ ವಹಿಸತಕ್ಕದ್ದು. ಈ ರೋಗಗಳಿಗೆ ಹೆಸರು ವಾಸಿಯಾಗಿರುವ ಪ್ರದೇಶಕ್ಕೆ ಪ್ರಯಾಣ ಮಾಡುವ ತುರ್ತು ಅವಶ್ಯಕತೆ ಇದ್ದಲ್ಲಿ, ಸಾಕಷ್ಟು ಮುಂಜಾಗರುಕತೆ ವಹಿಸತಕ್ಕದ್ದು
  6. ಪರಿಸರದ ಸ್ವಚ್ಚತೆಗೆ ವಿಶೆೀಷ ಆಧ್ಯತೆ ಕೊಡಬೇಕು. ನಮ್ಮ ಸುತ್ತಲಿನ ಪರಿಸರವನ್ನು ಶುಚಿಯಾಗಿಟ್ಟು ಕೊಂಡಲ್ಲಿ ಸೊಳ್ಳೆಗಳ ಬೆಳವಣಿಗೆ ಮತ್ತು ಸಂತಾನಾಭಿವೃದ್ಧಿಗೆ ಕಡಿವಾಣ ಬೀಳಬಹುದು.
  7. ಮನೆಯಲ್ಲಿ ಚಿಕುನ್‍ಗುನ್ಯಾ ರೋಗಿಗಳಿದ್ದಲ್ಲಿ ಸಾಕಷ್ಟು ಮುಂಜಾಗರುಕತೆ ವಹಿಸಿ. ಅವರಿಂದ ಇನ್ನಿತರರಿಗೆ ರೋಗಹರಡದಂತೆ, ಸೊಳ್ಳೆ ಕಡಿಯದಂತೆ ಕಾಳಜಿ ವಹಿಸಿ. ಒಟ್ಟಿನಲ್ಲಿ ಮನೆ ಮತ್ತು ಸುತ್ತಲಿನ ನೈರ್ಮಲ್ಯ ಕಾಪಾಡಿದಲ್ಲಿ ಸೊಳ್ಳೆಗಳ ಸಂಖ್ಯೆ ಕಡಿಮೆಯಾಗಿ ಸಮಾಜದ ಸ್ವಾಸ್ಥ್ಯ ವೃದ್ಧಿಸುವುದರಲ್ಲಿ ಯಾವುದೇ ಸಂಶಯವಿಲ್ಲ.

ಕೊನೆ ಮಾತು

ಚಿಕುನ್‍ಗುನ್ಯಾ ರೋಗ ಮಾರಣಾಂತಿಕ ರೋಗವಲ್ಲದಿದ್ದರೂ, ರೋಗದ ಲಕ್ಷಣಗಳು ಮಾರಣಾಂತಿಕ ರೋಗಗಳನ್ನು ಹೋಲುವುದರಿಂದ ತಪ್ಪು ಗ್ರಹಿಕೆಯಿಂದ ಚಿಕುನ್‍ಗುನ್ಯಾ ಎಂದು ಚಿಕಿತ್ಸೆ ನೀಡಿದಲ್ಲಿ ರೋಗಿಯ ಜೀವಕ್ಕೆ ಕುತ್ತು ಬರುವ ಸಾಧ್ಯತೆ ಇದೆ. ಆ ಕಾರಣಕ್ಕಾಗಿ ಆಧುನಿಕ ರೋಗ ಪತ್ತೆ ಹಚ್ಚುವ ವಿಧಾನಗಳಾದ ELISAಮತ್ತು RT PCR ಪರೀಕ್ಷೆಯ ಮುಖಾಂತರ ಸರಿಯಾದ ರೋಗ ಯಾವುದೆಂದು ಗುರುತು ಹಚ್ಚಿದಲ್ಲಿ ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡಬಹುದು. ರೋಗದ ಚಿಕಿತ್ಸೆಗಿಂತಲೂ ರೋಗ ನಿರ್ಣಯ ಹೆಚ್ಚು ಕ್ಲಿಷ್ಟಕರವಾಗಿರುವುದರಿಂದ ತಜ್ಞ ವೈದ್ಯರ ಸಲಹೆ ಅತೀ ಅಗತ್ಯ ಮತ್ತು ಅನಿವಾರ್ಯ.

ಡಾ|| ಮುರಲೀ ಮೋಹನ್ ಚೂಂತಾರು BDS MDS DNB MBA MOSRCSEd
Consultant Oral and Maxillofacial Surgeon
9845135787
drmuraleechoontharu@gmail.com
drmuraleemohan@gmail.com

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!