ವರದಿ : ಮಿಥುನ್ ಕರ್ಲಪ್ಪಾಡಿ
ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯರು ತಮ್ಮ 14 ನೇ ಬಜೆಟ್ ಮಂಡಿಸುವ ಮೂಲಕ ದಾಖಲೆ ಮೆರೆದಿದ್ದು ಈ ಬಾರಿಯ ಬಜೆಟ್ ಸರ್ವರನ್ನು ತಲುಪುವ ಹಾಗೂ ಕೃಷಿಕರ ಬಗ್ಗೆ ಅತೀ ಹೆಚ್ಚು ಕಾಳಜಿ ಹೊಂದಿರುವ ಬಜೆಟ್ ಆಗಿದೆ. ಚುನಾವಣಾ ಸಂದರ್ಭದಲ್ಲಿ ಜನರಿಗೆ ನೀಡಿದ ಭರವಸೆಯನ್ನು ಪೂರೈಸಲು ಕಾಂಗ್ರೆಸ್ ಈ ಬಾರಿ ಬಜೆಟ್ ನಲ್ಲಿ 52 000 ಸಾವಿರ ಕೋಟಿಗಳನ್ನು ಮೀಸಲಿಟ್ಟಿದ್ದು,ಪಂಚ ಗ್ಯಾರಂಟಿ ಯೋಜನೆಗಳು ಪ್ರತಿ ಮನೆಗೆ ತಲುಪುವಂತೆ ಮಾಡಲು ರಾಜ್ಯ ಸರಕಾರ ಹಾಗೂ ಕಾಂಗ್ರೆಸ್ ಸಿದ್ಧವಾಗಿದೆ ಎಂದು ಹೇಳಿದರು. ರಾಜ್ಯದ ಮಹಿಳೆಯರ ಸಬಲೀಕರಣಕ್ಕೆ ಸರಕಾರ ಒತ್ತು ನೀಡಿದೆ ಎಂದು ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ ಸಿ ಜಯರಾಮ ಹೇಳಿದರು.
ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡುತ್ತಾ, ಶಿಕ್ಷಣ ಕುಡಿಯುವ ನೀರು ಯೋಜನೆಗಳಿಗೆ ಸಾಕಷ್ಟು ಅನುದಾನಗಳನ್ನು ಮೀಸಲಿಟ್ಟಿದ್ದು, ಕೃಷಿಕರ ಅನುಕೂಲಕ್ಕಾಗಿ ಕೃಷಿ ಸಾಲ ಹೆಚ್ಚಿಸಿರುವುದಲ್ಲದೆ, ಧಾನ್ಯ ಸಂಗ್ರಹಣಾ ಗೋದಾಮು ನಿರ್ಮಿಸಲು 20 ಲಕ್ಷದವರೆಗೆ ಸಾಲ ನೀಡುವ ಹೊಸ ಯೋಜನೆ ಜಾರಿಗೆ ತಂದಿದೆ ಎಂದು ಹೇಳಿದರು. ಅದಲ್ಲದೇ ಕಳೆದ ಐದು ವರ್ಷಗಳ ಕಾಲ ಮುಚ್ಚಿದ್ದ ಇಂದಿರಾ ಕ್ಯಾಂಟೀನ್ ಮತ್ತೆ ಪ್ರಾರಂಭವಾಗಿದ್ದು ಸುಳ್ಯದಲ್ಲೂ ಪ್ರಾರಂಭವಾಗಿದೆ ಎಂದರು. ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸುತ್ತಾ ನಮ್ಮಲ್ಲಿ ಬಣ ಇರುವುದು ಒಂದೇ ಅದು ಕಾಂಗ್ರೆಸ್ ಹಾಗೂ ನೂತನ ಕಾಂಗ್ರೆಸ್ ಪದಾಧಿಕಾರಿಗಳ ಪಟ್ಟಿಯಲ್ಲಿ ಎಲ್ಲಾ ಕಾಂಗ್ರೆಸ್ ನವರೇ ಇದ್ದಾರೆ ಹೊರತು ಬೇರೆ ಯಾರು ಇಲ್ಲ. ಉಚ್ಚಾಟಿತ ಹಾಗೂ ನೋಟಿಸ್ ಪಡೆದವರ ಕುರಿತು ಶಿಸ್ತು ಸಮಿತಿಯೇ ಎಲ್ಲವನ್ನು ನೋಡಿಕೊಳ್ಳಲಿದೆ ಎಂದು ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಸದಾನಂದ ಮಾವಜಿ, ಪ್ರಧಾನ ಕಾರ್ಯದರ್ಶಿ ಪಿ.ಎಸ್.ಗಂಗಾಧರ, ಮುಖಂಡರಾದ ಸುರೇಶ್ ಎಮ್ ಹೆಚ್, ಚಂದ್ರಲಿಂಗಂ, ನಂದರಾಜ ಸಂಕೇಶ್, ಜ್ಞಾನಶೀಲನ್ ರಾಜು ಮೊದಲಾದವರು ಉಪಸ್ಥಿತರಿದ್ದರು.