ಸುಳ್ಯ ಪುತ್ತೂರು ರಸ್ತೆ ಬದಿ ನಿಲ್ಲಿಸಿದ್ದ ಸ್ಕೂಟಿಯೊಂದಕ್ಕೆ ಪಿಕಪ್ ವಾಹನವೊಂದು ಗುದ್ದಿ, ಸ್ಕೂಟಿ ಚರಂಡಿಗೆ ಉರುಳಿಬಿದ್ದ ಹಾಗೂ ನಿಲ್ಲಿಸದೇ ಪರಾರಿಯಾದ ಪಿಕಪನ್ನು ಮತ್ತೆ ಪೋಲೀಸರು ವಶಕ್ಕೆ ಪಡೆದ ಘಟನೆ ಜು.3 ರಂದು ಸಂಜೆ ಸುಳ್ಯದ ವಿದ್ಯಾನಗರದಲ್ಲಿ ಘಟಿಸಿದೆ.ಅಜ್ಜಾವರ ಗ್ರಾಮದ ಮಾರ್ಗ ಶಿವರಾಮ ಎಂಬವರು ಜು.3 ರಂದು ಸಂಜೆ 5 ಗಂಟೆ ಸುಮಾರಿಗೆ ಸುಳ್ಯದ ಹಳೆಗೇಟು ಬಳಿಯ ವಿದ್ಯಾನಗರದಲ್ಲಿ ರಸ್ತೆ ಬದಿ ಸ್ಕೂಟಿ ನಿಲ್ಲಿಸಿ ಅಂಗಡಿಗೆ ಹೋಗಿ ಮಾತನಾಡುತ್ತಿದ್ದರು. ಆಗ ಪೈಚಾರು ಕಡೆಯಿಂದ ಸುಳ್ಯ ಕಡೆಗೆ ಬರುತ್ತಿದ್ದ ಪಿಕಪ್ ವಾಹನವೊಂದು ಸ್ಕೂಟಿಗೆ ಗುದ್ದಿ ನಿಲ್ಲಿಸದೆ ಮುಂದಕ್ಕೆ ಹೋಯಿತು. ಪಿಕಪ್ ವಾಹನದಲ್ಲಿ ಶ್ರೀರಾಮ ಎಲೆಕ್ಟಿಕಲ್ಸ್ ಗುತ್ತಿಗಾರು ಎಂದು ಬರೆದಿದ್ದುದನ್ನು ಸ್ಥಳೀಯರು ನೋಡಿದ್ದರು. ಈ ಹಿನ್ನಲೆಯಲ್ಲಿ ಪೋಲೀಸರಿಗೆ ವಿಷಯ ತಿಳಿಸಲಾಯಿತು.ಪಿಕಪ್ ಗುದ್ದಿದ ಪರಿಣಾಮವಾಗಿ ಸ್ಕೂಟಿ ಪಕ್ಕದ ಚರಂಡಿಗೆ ಉರುಳಿ ಬಿದ್ದಿತ್ತು. ಅಪಘಾತ ನಡೆದು ಗೊತ್ತಾದ ಬಳಿಕವೂ ಪಿಕಪ್ ನಿಲ್ಲಿಸದೇ ಪರಾರಿಯಾದುದರಿಂದ ಸ್ಥಳೀಯರು ಆ ವಾಹನ ಹಿಂತಿರುಗಿ ಬರುವುದನ್ನು ಸ್ಕೂಟಿ ತೆಗೆಯದೇ ಕಾಯುತ್ತಿದ್ದರು. ಸ್ವಲ್ಪಹೊತ್ತಿನ ಬಳಿಕ ಎರಡು ವಿದ್ಯುತ್ ಕಂಬ ಹೇರಿಕೊಂಡು ಆ ಪಿಕಪ್ ವಾಹನ ಬಂದಿತು. ಆದರೆ ವಿದ್ಯಾನಗರದಲ್ಲಿ ನಿಲ್ಲದೇ ಪೈಚಾರಿನತ್ತ ದಾವಿಸಿತು. ವಿಷಯ ತಿಳಿದ ಪೋಲೀಸರು ಬೆನ್ನತ್ತಿ ಸೋಣಂಗೇರಿಯಲ್ಲಿ ಅಡ್ಡಗಟ್ಟಿ ಪಿಕಪ್ ನ್ನು ವಶಪಡಿಸಿಕೊಂಡು ಸುಳ್ಯ ಠಾಣೆಗೆ ಕರೆತಂದರು ಎಂದು ತಿಳಿದುಬಂದಿದೆ.
- Friday
- November 1st, 2024