ಅರಂತೋಡು ಗ್ರಾಮ ಪಂಚಾಯತಿಯ 2023-24ನೇ ಸಾಲಿನ ಪ್ರಥಮ ಹಂತದ ಗ್ರಾಮಸಭೆಯು ಗ್ರಾಮ ಪಂಚಾಯತ್ ಅಧ್ಯಕ್ಷೆ ಹರಿಣಿ ದೇರಾಜೆ ಇವರ ಅಧ್ಯಕ್ಷತೆಯಲ್ಲಿ ಗ್ರಾಮ ಪಂಚಾಯತ್ ನ ಅಮೃತ ಸಭಾಂಗಣದಲ್ಲಿ ಜು.1ರಂದು ಜರುಗಿತು.
ಅಕ್ಷರ ದಾಸೋಹ ಸಹಾಯಕ ನಿರ್ದೇಶಕಿ ವೀಣಾ ಎಂ.ಟಿ. ಅವರು ನೋಡೆಲ್ ಅಧಿಕಾರಿಯಾಗಿ ಭಾಗವಹಿಸಿದ್ದರು. ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು.
ಗ್ರಾಮ ಪಂಚಾಯತಿ ಸಿಬ್ಬಂದಿ ಈಶ್ವರ ವರದಿ ಮಂಡಿಸಿದರು. ವಿವಿಧ ಇಲಾಖೆಯ ಅಧಿಕಾರಿಗಳು ಇಲಾಖೆ ಸವಲತ್ತುಗಳ ಕುರಿತು ಗ್ರಾಮಸ್ಥರಿಗೆ ಮಾಹಿತಿ ನೀಡಿದರು.
*ಖಾಯಂ ಗ್ರಾಮ ಆಡಳಿತಾಧಿಕಾರಿ ನೇಮಕಕ್ಕೆ ಆಗ್ರಹ*
ಕಂದಾಯ ಇಲಾಖಾ ಮಾಹಿತಿ ನೀಡುವ ಸಂದರ್ಭದಲ್ಲಿ ಅರಂತೋಡು ಗ್ರಾಮಕ್ಕೆ ಖಾಯಂ ವಿ.ಎ. ಬೇಕು ಎಂದು ಕೆ.ಆರ್. ಗಂಗಾಧರ ಅವರು ಹೇಳಿದಾಗ ನನಗೆ ಕಳಂಜ ಗ್ರಾಮ ಅರಂತೋಡು ಚಾರ್ಜ್ ಇದೆ ತಾಲೂಕಿನಲ್ಲಿ ಇರುವುದೇ ಒಟ್ಟು ಹದಿನೆಂಟು ವಿ.ಎ. ಗಳು ಎಲ್ಲರಿಗೂ ಒಂದಷ್ಟು ಗ್ರಾಮಗಳನ್ನು ಹಂಚಿಕೆ ಮಾಡಿ ಕೊಡಲಾಗಿದೆ ಎಂದು ಗ್ರಾಮ ಆಡಳಿತಾಧಿಕಾರಿ ಮೀಯಾಸಾಬುಲ್ಲ ಹೇಳಿದರು.
ಪೆನ್ಶನ್ ಪಡೆಯುವವರು ತಮ್ಮ ಆಧಾರ್ ಕಾರ್ಡ್ ನಲ್ಲಿ ಏನಾದರೂ ತಿದ್ದುಪಡಿ ಮಾಡಿದ್ದರೆ, ತಾವು ಪೆನ್ಶನ್ ಪಡೆಯುವ ಬ್ಯಾಂಕ್ ನೊಂದಿಗೆ ಆಧಾರ್ ಲಿಂಕ್ ಮಾಡಲೇ ಬೇಕು, ಇಲ್ಲದಿದ್ದರೆ ಸೌಲಭ್ಯ ಪಡೆಯಲು ವಂಚಿತರಾಗಬೇಕಾಗುತ್ತದೆ ಎಂದು ಗ್ರಾಮ ಆಡಳಿತಾಧಿಕಾರಿ ಹೇಳಿದರು.
ತೊಡಿಕಾನ ಭಾಗದಲ್ಲಿ ಅಪಾಯಕಾರಿ ಮರಗಳ ತೆರವಿಗೆ ಅರಣ್ಯ ಇಲಾಖೆ ಗಮನಕ್ಕೆ ಬಂದಿದ್ದು, ತೆರವುಗೊಳಿಸಲಾಗುವುದು ಅರುಣ್ಯ ಇಲಾಖೆ ಅಧಿಕಾರಿಗಳು ಹೇಳಿದರು.
ಅರಂತೋಡು ಪೇಟೆಯಲ್ಲಿ ಬೀದಿ ದನಗಳ ಹಾವಳಿ ಬಹಳಷ್ಟಿದೆ ಇದನ್ನು ನಿಯಂತ್ರಣ ಮಾಡಬೇಕಾಗಿದೆ ಎಂದು ಗ್ರಾಮಸ್ಥರ ಪ್ರಶ್ನೆಗೆ ಉತ್ತರಿಸಿದ ಪಿಡಿಒ ಅರಂತೋಡಿನಲ್ಲಿ ಬೀದಿ ದನಗಳ ಹಾವಳಿ ಇದೆ ,ಹೆಚ್ಚಾಗಿ ರಸ್ತೆ ಅಪಘಾತದಲ್ಲಿ ಬಲಿಯಾಗುತ್ತಿದೆ. ಇದರ ನಿಯಂತ್ರಣಕ್ಕೆ ಕ್ರಮಕೈಗೊಳ್ಳುತ್ತೇವೆ ಎಂದರು.
ಗ್ರಾಮ ಪಂಚಾಯತ್ ಸದಸ್ಯ ಶಿವಾನಂದ ಕುಕ್ಕುಂಬಳ ಅವರು ಮಾತನಾಡಿ ಸ್ವಚ್ಛಭಾರತ್ ಯೋಜನೆಯಡಿಯಲ್ಲಿ ಗ್ರಾಮದಲ್ಲಿ ಸ್ವಚ್ಛತೆಯ ನಿರ್ವಹಣೆ ಆಗುತ್ತಿದ್ದು, ಸ್ವಚ್ಛತಾ ವೆಚ್ಚ ಇಪ್ಪತ್ತು ರೂ.ಗಳನ್ನು ಪ್ರತೀ ಮನೆಗೆ ತಿಂಗಳಿಗೆ ನಿಗದಿ ಮಾಡಲಾಗಿದ್ದು ಹಣ ಸಂಗ್ರಹ ಸುಲಭದ ನಿಟ್ಟಿನಲ್ಲಿ ಒಂದು ವರ್ಷದ ಸ್ವಚ್ಚತಾ ವೆಚ್ಚವನ್ನು ಒಂದೇ ಬಾರಿ ಪಡೆದುಕೊಳ್ಳುವಂತೆ ಸಲಹೆ ನೀಡಿದರು.
ವೇದಿಕೆಯಲ್ಲಿ ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಕು. ಶ್ವೇತಾ, ಸದಸ್ಯರುಗಳಾದ ಗಂಗಾಧರ ಗುಂಡ್ಲ ಬನ, ಶ್ರೀಮತಿ ಸರಸ್ವತಿ ಬಿ., ಶಿವಾನಂದ ಕೆ.ಎಲ್., ಶ್ರೀಮತಿ ಸುಜಯ ಎಂ., ಕೇಶವ ಅಡ್ತಲೆ, ಪುಷ್ಪಾಧರ ಕೆ.ಜಿ. ಶ್ರೀಮತಿ ಉಷಾ ಪಿ., ಶ್ರೀಮತಿ ವಿನೋದ ವಿ.ಸಿ., ಶಶಿಧರ ಕೆ.ಸಿ., ಶ್ರೀಮತಿ ಭವಾನಿ ಸಿ.ಎ., ಶ್ರೀಮತಿ ಮಾಲಿನಿ ಯು.ವಿ. ರವೀಂದ್ರ ಜಿ. ವೆಂಕಟ್ರಮಣ ಪಿ.ಹೆಚ್., ಸೇರಿದಂತೆ ತಾಲೂಕಿನ ಗ್ರಾಮ ಲೆಕ್ಕಾಧಿಕಾರಿ ಮೀಯಾಸಾಬುಲ್ಲ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಸಿಬ್ಬಂದಿವರ್ಗ ಉಪಸ್ಥಿತರಿದ್ದರು. ಗ್ರಾಮ ಪಂಚಾಯತಿ ಸಿಬ್ಬಂದಿಗಳು ಸಹಕರಿಸಿ ,ಸಭೆಯಲ್ಲಿ ಆಶಾ ಕಾರ್ಯಕರ್ತೆಯರು, ಆರೋಗ್ಯ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.