ಕೆ.ವಿ.ಜಿ. ದಂತಮಹಾವಿದ್ಯಾಲಯದ ವಿದ್ಯಾರ್ಥಿಗಳ ಮಧ್ಯೆ ಡಿ.29 ರಂದು ನಡೆದ ಕಲಹದ ಕುರಿತು ಪ್ರಾಂಶುಪಾಲರು ಸ್ಪಷ್ಟಿಕರಣ ನೀಡಿದ್ದಾರೆ. ರ‌್ಯಾಗಿಂಗ್ ನಡೆದಿದೆ ಎಂದು ಪ್ರಚಾರ ಪಡೆದಿರುವ ವಿಚಾರಗಳು ಸತ್ಯಕ್ಕೆ ದೂರವಾಗಿದೆ. ಡಾ| ಪಲ್ಲವಿ ಎನ್.ಪಿ. ನಮ್ಮ ಸಂಸ್ಥೆಯ 3ನೇ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿನಿಯಾಗಿದ್ದು, ಮೂಲತ: ಬೆಂಗಳೂರಿನ ವೈಟ್ ಫೀಲ್ಡ್ ನವರಾಗಿರುತ್ತಾರೆ. ಡಾ. ಪಲ್ಲವಿಯವರು ನಮ್ಮದೇ, ಕೆ.ವಿ.ಜಿ. ದಂತ ಮಹಾವಿದ್ಯಾಲಯದ ವಿದ್ಯಾರ್ಥಿನಿ ನಿಲಯದಲ್ಲಿ ಕಳೆದ ಎರಡೂವರೆ ವರ್ಷಗಳಿಂದ ಇತರ ವಿದ್ಯಾರ್ಥಿನಿಯರೊಂದಿಗೆ ವಾಸ್ತವ್ಯ ಮಾಡಿರುತ್ತಾರೆ. ಡಿ.21 ರಂದು ರಾತ್ರಿ ಸುಮಾರು 10 ಗಂಟೆಗೆ ಅವರ ಅಣ್ಣನವರೊಂದಿಗೆ ಊಟಕ್ಕಾಗಿ ಹೊರಗಡೆ ಹೋಗಿ ಹಿಂತಿರುಗುವ ಸಂದರ್ಭದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಅವರ ಸಹಪಾಠಿಗಳಾದ ಡಾ| ವೈಶಾಖ್ ಜೆ. ಪಣಿಕ ಮತ್ತು ಸಂಗಡಿಗರು ನನ್ನ ಮೇಲೆ ಹಲ್ಲೆ ಮಾಡಿರುತ್ತಾರೆ ಎಂಬುದಾಗಿ ಅಂದಾಜು ರಾತ್ರಿ 10.30 ರ ಹೊತ್ತಿಗೆ ದೂರವಾಣಿ ಮೂಲಕ ಪ್ರಾಂಶುಪಾಲರಿಗೆ ತಿಳಿಸಿರುತ್ತಾರೆ. ಆದರೆ ರಾಗಿಂಗ್ ನಡೆದಿರುತ್ತದೆ ಎಂಬ ಬಗ್ಗೆ ಪ್ರಾಂಶುಪಾಲರಿಗಾಗಲಿ, ಸಂಬಂಧಪಟ್ಟ ಅಧ್ಯಾಪಕರಿಗಾಗಲಿ, ಆಡಳಿತ ಮಂಡಳಿಗಾಗಲಿ ಯಾವುದೇ ರೀತಿಯ ದೂರುಗಳು ಬಂದಿರುವುದಿಲ್ಲ. ಆದರೆ ಆ ದಿನ ನಡೆದ ಘಟನೆ ಬಗ್ಗೆ ಪೋಲೀಸ್ ಠಾಣೆಗೆ ದೂರು ದಾಖಲಾಗಿದ್ದು, ಆ ಬಗ್ಗೆ ಎಫ್‌ಐಆರ್ ಕೂಡಾ ದಾಖಲಾಗಿರುತ್ತದೆ. ಡಾ| ಪಲ್ಲವಿ ಎನ್. ಪಿ. ಹೇಳಿಕೊಂಡಂತೆ ನಮ್ಮ ಸಂಸ್ಥೆಯಲ್ಲಿ ಯಾವುದೇ ಪ್ರಾದ್ಯಾಪಕರಾಗಲೀ, ವಿದ್ಯಾರ್ಥಿಗಳಾಗಲೀ ಜಾತಿ ನಿಂದನೆ ಮಾಡಿ ಅವರಿಗೆ ಹಿಂಸೆ ಕೊಟ್ಟಿರುವುದಿಲ್ಲ. ಇದೊಂದು ಸ್ವಯಂ ಹೇಳಿಕೆಯಾಗಿದ್ದು, ಇದು ಸತ್ಯಕ್ಕೆ ದೂರವಾಗಿರುತ್ತದೆ. ಕೆ.ವಿ.ಟಿ. ದಂತ ಮಹಾವಿದ್ಯಾಲಯದಲ್ಲಿ ಇಲ್ಲಿಯವರೆಗೆ ಇಂತಹ ರಾಗಿಂಗ್ ಆಗಲಿ, ವಿದ್ಯಾರ್ಥಿಗಳ ಮೇಲೆ ಯಾವುದೇ ಕಿರುಕುಳಗಳಾಗಲಿ, ಜಾತಿನಿಂದನೆ ನಡೆದ ದಾಖಲೆಗಳಿಲ್ಲ. ಈ ಬಗ್ಗೆ ಖಂಡಿತವಾಗಿಯೂ ತಾವುಗಳು ಪರಿಶೀಲಿಸಬಹುದು, ಆದರೆ ಇಂತಹ ಯಾವುದೇ ಘಟನೆಗಳು ನಡೆದ ಬಗ್ಗೆ ನಮ್ಮ ತಿಳುವಳಿಕೆಗೆ ಬಂದಿರುವುದಿಲ್ಲ ಎಂದು ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- Thursday
- November 21st, 2024