ಕೇರ್ಪಡ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಡಿ.15ರಂದು ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ವರ್ಷಾವಧಿ ಜಾತ್ರೋತ್ಸವವು ಆರಂಭಗೊಂಡಿದೆ.
ಜಾತ್ರೋತ್ಸವದ ಅಂಗವಾಗಿ ಡಿ.15ರಂದು ಬೆಳಿಗ್ಗೆ ದೇವತಾ ಪ್ರಾರ್ಥನೆ,ಆಚಾರ್ಯವರಣ, ಸ್ವಸ್ತಿ ಪುಣ್ಯಾಹ ವಾಚನ, ಮಹಾಗಣಪತಿ ಹೋಮ, ಚಂಡಿಕಾಯಾಗ ಪ್ರಾರಂಭ, ಹಸಿರು ಹೊರೆ ಕಾಣಿಕೆ ಸಮರ್ಪಣೆ, ಸುಹಾಸಿನಿ ಪೂಜೆ, ಶ್ರೀ ದೇವರಿಗೆ ಕಲಶಾಭಿಷೇಕ, ಮಹಾಪೂಜೆ ,ಪ್ರಸಾದ ವಿತರಣೆ ನಡೆದು, ಅನ್ನ ಸಂತರ್ಪಣೆ ನಡೆಯಿತು.
ರಾತ್ರಿ ಶ್ರೀ ದೇವಿಗೆ ದೊಡ್ಡ ರಂಗಪೂಜೆ ,ಮಹಾಪೂಜೆ ಬಳಿಕ ಶ್ರೀದೇವರ ಬಲಿ ಹೊರಟು ಉತ್ಸವ ,ವಸಂತಕಟ್ಟೆ ಪೂಜೆ, ಬೆಡಿ ಪ್ರದರ್ಶನ ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮದ ಪ್ರಯುಕ್ತ ರಾತ್ರಿ ಕಲ್ಲಡ್ಕ ವಿಠಲ ನಾಯಕ್ ಮತ್ತು ಬಳಗದವರಿಂದ ಗೀತಾ ಸಾಹಿತ್ಯ ಸಂಭ್ರಮ ಜರುಗಿತು. ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ವಸಂತ ನಡುಬೈಲು, ಪವಿತ್ರಪಾಣಿ ಕೇಶವ ಪೂದೆನ್ನಾಯ, ವ್ಯವಸ್ಥಾಪನ ಸಮಿತಿ ಸದಸ್ಯರಾದ ವೆಂಕಪ್ಪ ಗೌಡ ಆಲಾಜೆ, ರೂಪರಾಜ ರೈ ಪಜಿಂಬಿಲ, ಯೋಗಾನಂದ ಉಳ್ಳಲಾಡಿ, ಶ್ರೀಮತಿ ಭಾಗ್ಯಪ್ರಸನ್ನ ಗುಂಡಿಮಜಲು, ನಾಗೇಶ ಆಳ್ವ ಕಟ್ಟಬೀಡು ಎಣ್ಮೂರು, ರಘುನಾಥ ಎಂಜೀರು, ಶ್ರೀಮತಿ ವಾರಿಜಾಕ್ಷಿ ಕೇರ್ಪಡ, ಕ್ಷೇತ್ರದ ಪ್ರಧಾನ ಅರ್ಚಕರಾದ ಶ್ರೀ ಹರಿ ಕುಂಜೂರಾಯ ಹಾಗೂ ಅನೇಕ ಭಕ್ತಾದಿಗಳು ಉಪಸ್ಥಿತರಿದ್ದರು.
ಡಿ. 16ರಂದು ಬೆಳಗ್ಗೆ ಮಹಾ ಗಣಪತಿ ಹೋಮ, ಕಲಶ ಪೂಜೆ ,ಶ್ರೀದೇವರ ಬಲಿ ಉತ್ಸವ, ದರ್ಶನ ಬಲಿ,ಬಟ್ಟಲು ಕಾಣಿಕೆ ಪ್ರಸಾದ ವಿತರಣೆ ಬಳಿಕ ಶ್ರೀ ದೇವರಿಗೆ ಕಲಶಾಭಿಷೇಕ, ಮಹಾಪೂಜೆ, ವೈದಿಕ ಮಂತ್ರಾಕ್ಷತೆ, ಪ್ರಸಾದ ವಿತರಣೆ, ಭೋಜನ ಪ್ರಸಾದ ನಡೆಯಲಿದೆ. ಸಂಜೆ 4 ರಿಂದ ಕೇರ್ಪಡ ಗೌಡ ಮನೆತನದ ಭಂಡಾರ ಮನೆಯಿಂದ ರಕ್ತೇಶ್ವರಿ ಮತ್ತು ಪರಿವಾರ ದೈವಗಳ ಭಂಡಾರ ದೇವಸ್ಥಾನಕ್ಕೆ ಬಂದು ನೇಮೋತ್ಸವ ನಡೆಯಲಿರುವುದು.