ಮುಂದೆ ಗುರಿ, ಹಿಂದೆ ಗುರು ಇದ್ದು ಸಾಧಿಸುವ ಛಲ ಇದ್ದರೆ ಸಾಧಕನಿಗೆ ಸಾಧನೆ ಅಸಾಧ್ಯವಲ್ಲ ಎಂಬ ಮಾತು ಜನಜನಿತ. ಆದರೆ ಹಿಂದೆ ಗುರುವಿಲ್ಲದಿದ್ದರೂ ಸಾಧನೆಯ ಹುಮ್ಮಸ್ಸು, ಗಮ್ಯ ತಲುಪಲು ಬೇಕಾದ ಪ್ರಯತ್ನ, ಶ್ರದ್ಧೆ ಇದ್ದರೆ ಯಾವುದೇ ಕಲೆಯನ್ನು ಸಿದ್ಧಿಸಿಕೊಂಡು ಪ್ರಸಿದ್ಧಿ ಪಡೆಯಬಹುದೆಂದು ತೋರಿಸಿಕೊಟ್ಟವರು ತಾಲೂಕಿನ ಮಂಡೆಕೋಲು ಗ್ರಾಮದ ಮೈತಡ್ಕದ ವಿಜಿತ್ ಕುಮಾರ್.
ದೈವ ನರ್ತನ ವೃತ್ತಿಯ ನಲಿಕೆ ಜನಾಂಗದಲ್ಲಿ ಹುಟ್ಟಿದ ವಿಜಿತ್ ಬಾಲ್ಯದಲ್ಲೇ ತಂದೆ ಬಾಬು ಅಜಿಲ ಹಾಗೂ ತಾಯಿ ಮೋನಮ್ಮ ಅವರನ್ನು ಕಳೆದುಕೊಂಡ ಕಾರಣ ಎಂಟನೇ ತರಗತಿಯಲ್ಲಿ ವಿದ್ಯಾಭ್ಯಾಸ ಮೊಟಕುಗೊಳಿಸಬೇಕಾಯಿತು. ಅದಕ್ಕೂ ಮೊದಲೇ ತಕ್ಕಮಟ್ಟಿಗೆ ತಂದೆಯಿಂದ ಕಲಿತ ಪಾಷಾಣ ಮೂರ್ತಿ, ಗುಳಿಗ, ಕೊರತಿ, ಕುಪ್ಪೆ ಪಂಜುರ್ಲಿ ಮೊದಲಾದ ದೈವ ನರ್ತನ ಸೇವೆ ಇವರಿಗೆ ಬದುಕು ಸಾಗಿಸಲು ನೆರವಾದವು. ಹೆತ್ತವರ ಅಕಾಲಿಕ ಮರಣದ ಬಳಿಕ ಸೋದರ ಮಾವ ಬಾಬು ಅಜಿಲ ಹಾಗೂ ಇನ್ನೋರ್ವ ಸಂಬಂಧಿಯಾದ ಎ.ಕೆ ಅಜಿಲ ಬೊಳಿಯಮಜಲು ಅವರಿಂದ ಇತರ ದೈವ ನರ್ತನಗಳನ್ನು ಕರಗತ ಮಾಡಿಕೊಂಡರು. ಬಳಿಕ ಜುಮಾದಿ, ಮಲೆ ಚಾಮುಂಡಿ, ನಾಗ ಚಾಮುಂಡಿ, ರಾಜನ್ ದೈವ, ಪುರುಷರಾಯ, ಕೊರಗ ತನಿಯ ಮೊದಲಾದ ಕಾರಣಿಕ ಶಕ್ತಿಗಳ ದೈವ ನರ್ತನದಲ್ಲೂ ಸೈ ಎನಿಸಿಕೊಂಡರು. ಇತ್ತೀಚೆಗೆ ಸುಳ್ಯದ ಸೀಮೆ ದೇವರಾದ ತೊಡಿಕಾನ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಸಂಬಂಧಪಟ್ಟ ಕಾರಣಿಕ ಕ್ಷೇತ್ರ ಬಜಪ್ಪಿಲದ ‘ಉಳ್ಳಾಕುಲು’ ಎಂಬ ಪ್ರಸಿದ್ಧ ದೈವದ ಕೋಲದ ಜವಾಬ್ದಾರಿಯನ್ನೂ ಇವರು ವಹಿಸಿಕೊಂಡಿದ್ದು ಓರ್ವ ಯಶಸ್ವಿ ದೈವ ನರ್ತಕ ಎಂಬ ಖ್ಯಾತಿಗೆ ಈಗಾಗಲೇ ಪಾತ್ರರಾಗಿದ್ದಾರೆ.
ದೈವ ನರ್ತನದಾಚೆ…
ಸಾಮಾನ್ಯವಾಗಿ ದೈವ ನರ್ತಕರು ತಮ್ಮ ವೃತ್ತಿ ಬದುಕಿಗೆ ಸೀಮಿತವಾದ ಕ್ಷೇತ್ರದಲ್ಲಿ ಮಾತ್ರ ತೊಡಗಿಕೊಂಡಿರುವುದು ಹೆಚ್ಚು. ಆದರೆ ವಿಜಿತ್ ಅವರ ಆಸಕ್ತಿ ಅದರಾಚೆಗೂ ವ್ಯಾಪಿಸಿರುವುದು ವಿಶೇಷ. ಇವರು ಬಾಲ್ಯದಲ್ಲೇ ಕೊಳಲುವಾದನದತ್ತ ಆಕರ್ಷಿತರಾಗಿದ್ದರು. ಹಾಗೆಂದು ಇವರಿಗೆ ಕಲಿಸಿಕೊಟ್ಟ ಗುರುಗಳಿಲ್ಲ. ದೈವ ನರ್ತನ ವೃತ್ತಿಯಲ್ಲಿರುವಾಗಲೇ ಕೊಳಲು ಖರೀದಿಸಿ ಊದಲು ಅಭ್ಯಸಿಸಿ ಅಲ್ಪ ತಾಳ ಜ್ಞಾನದೊಂದಿಗೆ ಕೊಳಲು ನುಡಿಸಲು ಅಭ್ಯಸಿಸತೊಡಗಿ ಈಗ ಆ ಕಲೆಯನ್ನು ಸಿದ್ಧಿಸಿಕೊಂಡಿದ್ದಾರೆ . ಇದೀಗ ಸಂಗೀತ ಪರಿಕರಗಳೊಂದಿಗೆ ಸಭೆ ಸಮಾರಂಭಗಳಲ್ಲೂ ಕೊಳಲು ನುಡಿಸುವಷ್ಟು ಪಳಗಿದ್ದಾರೆ. ಅಲ್ಲದೆ ಕೊಳಲು ವಾದನ ಕಾರ್ಯಕ್ರಮ ನೀಡಲು ತಮ್ಮ ಕುಟುಂಬದ ಆರಾಧ್ಯ ದೈವ ಅಣ್ಣಪ್ಪ ಸ್ವಾಮಿಯ ಹೆಸರಿನಲ್ಲಿ ‘ಅಣ್ಣಪ್ಪ ಸ್ವಾಮಿ ಕಲಾ ತಂಡ, ಮೈತಡ್ಕ’ ಎಂಬ ಹೆಸರಿನಲ್ಲಿ ತಂಡ ರಚಿಸಿಕೊಂಡು ಸಂಗೀತ ಕಾರ್ಯಕ್ರಮ ನೀಡುತ್ತಿದ್ದಾರೆ. ಇದೇ ತಂಡದ ಮುಖಾಂತರ ಜಾನಪಗೀತೆ, ಭಕ್ತಿ ಗೀತೆ, ಚಿತ್ರ ಗೀತೆಗಳನ್ನೂ ಹಾಡಿ ಜನರನ್ನು ಮನರಂಜಿಸುವ ಕಾಯಕದಲ್ಲೂ ಇವರು ನಿರತರಾಗಿದ್ದಾರೆ.
ಯಾವುದೇ ದೈವ ನರ್ತನಕ್ಕೂ ತೆಂಬರೆ, ಡೋಲು, ಚೆಂಡೆ ಬಾರಿಸುವ ಅನುಭವ ಹೊಂದಿರುವ ವಿಜೀತ್, ಭಜನೆಯ ತಾಸೆ, ಡೋಲ್ಕಿ ಬಾರಿಸುವಲ್ಲೂ ಪ್ರವೀಣರು. ಅಷ್ಟೇ ಅಲ್ಲ., ಈಗೀಗ ಕನ್ನಡ, ತುಳು ಭಾಷೆಗಳಲ್ಲಿ ಕಾರ್ಯಕ್ರಮ ನಿರೂಪಣೆ ಮಾಡುವಷ್ಟೂ ತನ್ನ ಅನುಭವ ವೃದ್ಧಿಸಿಕೊಂಡಿದ್ದಾರೆ.
ಕಲರ್ಸ್ ಕನ್ನಡದ ಆಫರ್ ಗೆ ನೆಟ್ವರ್ಕ್ ವಿಲನ್ ಆಗೋಯ್ತು
ಪ್ರಾಥಮಿಕ ಶಾಲೆಯಲ್ಲಿದ್ದಾಗ ಪ್ರತಿಭಾ ಕಾರಂಜಿ ಸ್ಪರ್ಧೆಗಳಲ್ಲಿ ಸಂಗೀತ ಸ್ಪರ್ಧೆಗಳಲ್ಲಿ ಹಲವು ಬಹುಮಾನ ಬಾಚಿದ ವಿಜಿತ್ ಗೆ ಎರಡು ವರ್ಷಗಳ ಹಿಂದೆ ಕಲರ್ಸ್ ಕನ್ನಡ ಟಿವಿ ವಾಹಿನಿಯ ‘ಹಾಡು ಕರ್ನಾಟಕ’ ಎಂಬ ರಿಯಾಲಿಟಿ ಶೋದಲ್ಲಿ ಭಾಗವಹಿಸುವ ಅವಕಾಶದ ಬಾಗಿಲು ತೆರೆದಿತ್ತು. ಜಿಲ್ಲಾ ಮಟ್ಟದಲ್ಲಿ ನಡೆದ ಆಡಿಷನ್ ನಲ್ಲಿ ಆಯ್ಕೆಯಾದ ಇವರಿಗೆ ತನ್ನೂರಿನ ನೆಟ್ವರ್ಕ್ ವಿಲನ್ ಆಗಿದ್ದನ್ನು ವಿಜಿತ್ ಬೇಸರದಿಂದ ನೆನಪಿಸಿಕೊಳ್ಳುತ್ತಾರೆ.
“ಜಿಲ್ಲಾ ಮಟ್ಟದಲ್ಲಿ ಭಾಗವಹಿಸಿದ ವೇಳೆ ಸಂಗೀತದ ಜ್ಞಾನವಿಲ್ಲದೆ ರಾಗ-ತಾಳದ ದೋಷವಿಲ್ಲದೆ ಹಾಡಿದಾಗ ಅಲ್ಲಿನ ತೀರ್ಪುಗಾರರೇ ನಾನು ಸಂಗೀತ ತರಗತಿಗೆ ಹೋಗಿಲ್ಲ ಎಂದಾಗ ನಂಬಿರಲಿಲ್ಲ. ಖಂಡಿತವಾಗಿ ನಿನ್ನ ಆಯ್ಕೆ ನಡೆಯುತ್ತದೆ. ಕೆಲ ದಿನಗಳಲ್ಲೇ ನಿನಗೆ ಕರೆ ಬರುತ್ತದೆ” ಎಂದಿದ್ದರಂತೆ. ಆದರೆ ಊರಿನ ಬಿಎಸ್ಎನ್ಎಲ್ ನೆಟ್ವರ್ಕ್ ಕೈ ಕೊಟ್ಟ ಕಾರಣ ಕಲರ್ಸ್ ಕನ್ನಡದಿಂದ ಕರೆ ಮಾಡಿದಾಗ ನನಗೆ ಕರೆ ಕನೆಕ್ಟ್ ಆಗದ ಕಾರಣ ರಿಯಾಲಿಟಿ ಶೋ ದಲ್ಲಿ ಭಾಗವಹಿಸುವ ಅವಕಾಶ ತಪ್ಪಿತು ಎನ್ನುವ ವಿಜಿತ್ ಗೆ ಮುಂದೆ ಕನ್ನಡ ಚಾನೆಲ್ ಗಳ ಹಾಡು ಸಂಬಂಧಿತ ರಿಯಾಲಿಟಿ ಶೋ ದಲ್ಲಿ ಭಾಗವಹಿಸುವ ಆಸೆ ಇದೆ.
ಯಕ್ಷಗಾನಕ್ಕೂ ಸೈ
ವಿಜಿತ್ ದೈವ ನರ್ತಕನಾದರೂ ಕರಾವಳಿಯ ಗಂಡು ಕಲೆ ಯಕ್ಷಗಾನದಲ್ಲೂ ಗೆಜ್ಜೆ ಕಟ್ಟಿ ಕುಣಿಯುವ ಹವ್ಯಾಸಿ ಯಕ್ಷಗಾನ ಕಲಾವಿದ. ಬಾಳಿಲದ ಶ್ರೀ ‘ಮಂಜುನಾಥೇಶ್ವರ ಜನಪದ ಕಲಾ ಸಂಘ’ ದ ವಾರ್ಷಿಕೋತ್ಸವ ಹಾಗೂ ಹವ್ಯಾಸಿ ಕಲಾವಿದರ ಕೂಡುವಿಕೆಯಲ್ಲಿ ಜರುಗುವ ಯಕ್ಷಗಾನ ಬಯಲಾಟಗಳಲ್ಲಿ ಪೀಠಿಕೆ ವೇಶ ಹಾಗೂ ಇನ್ನಿತರ ಚಿಕ್ಕಪುಟ್ಟ ಪಾತ್ರಗಳನ್ನೂ ನಿಭಾಯಿಸುವಷ್ಟು ಸಮರ್ಥರಾಗಿದ್ದಾರೆ. ಹಿಮ್ಮೇಳದಲ್ಲೂ ಸಹಕರಿಸುವ ಇವರು ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮಗಳಲ್ಲಿ ಮದ್ದಳೆಗಾರನಾಗಿಯೂ ಕಾರ್ಯನಿರ್ವಹಿಸುತ್ತಾರೆ.
ಪ್ರಶಸ್ತಿ, ಪುರಸ್ಕಾರ
ವಿಜೀತ್ ನ ಪ್ರತಿಭೆ ಗುರುತಿಸಿ ಇತ್ತೀಚೆಗೆ ಅವರನ್ನು ಕೆಲವೊಂದು ಪ್ರಶಸ್ತಿ, ಪುರಸ್ಕಾರಗಳೂ ಅರಸಿ ಬರುತ್ತಿವೆ. ಕುದ್ಮಾರು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ೨೦೧೬-೧೭ ರಲ್ಲಿ ಜರುಗಿದ ಯುವಜನ ಮೇಳದಲ್ಲಿ ‘ಸಕಲ ಕಲಾ ವಲ್ಲಭ’ ಪ್ರಶಸ್ತಿ ನೀಡಿ ಗೌರವಿಸಲಾಗಿದೆ ಅಜ್ಜಾವರ, ಅಡ್ಪಂಗಾಯದ ಅಯ್ಯಪ್ಪ ಸೇವಾ ಟ್ರಸ್ಟ್ ವತಿಯಿಂದ ಇವರಿಗೆ ‘ಗುರುವಿಲ್ಲದ ಸಾಧಕ’ ಎಂಬ ಬಿರುದು ನೀಡಿ ಸನ್ಮಾನಿಸಲಾಗಿದೆ. ಅದಲ್ಲದೆ ಸಾರ್ವಜನಿಕ ಗಣೇಶೋತ್ಸವ, ಶಾರದೋತ್ಸವ ಸಮಾರಂಭಗಳಲ್ಲಿ ಕೊಳಲು ವಾದನ ಹಾಗೂ ಸಂಗೀತ ಕಾರ್ಯಕ್ರಮ ನೀಡಿ ಜನ ಮೆಚ್ಚುಗೆ ಪಡೆಯುತ್ತಿರುವ ಇವರನ್ನು ಕೆಲ ಸಾರ್ವಜನಿಕ ವೇದಿಕೆಗಳಲ್ಲೂ ಸನ್ಮಾನಿಸಲಾಗುತ್ತಿದೆ.ಅಲ್ಲದೆ ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಅಂತರಾಷ್ಟ್ರೀಯ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ ಸಂಭ್ರಮದಲ್ಲಿ ವಿಜಿತ್ ರ ಕೊಳಲುವಾದನದಕ್ಕೆ ವೇದಿಕೆ ಸಿಕ್ಕಿರುವುದು ಅತೀ ದೊಡ್ಡ ಅವಕಾಶ ಹಾಗೂ ಅದರಲ್ಲಿ ಸರ್ವರ ಪ್ರಶಂಸೆಗೆ ಒಳಗಾಗಿರುವುದು ಅವಿಸ್ಮರಣೀಯ ಕ್ಷಣ ಎನ್ನುತ್ತಾರೆ ವಿಜಿತ್
ಮೂವತ್ತೆರಡರ ಹರೆಯದ ವಿಜಿತ್, ಪತ್ಮಿ ದಮಯಂತಿ, ಮಕ್ಕಳಾದ ದಿಶಾ ಹಾಗೂ ನಿಶಾ ಎಂಬಿಬ್ಬರು ಮಕ್ಕಳೊಂದಿಗೆ ಸುಖೀ ಜೀವನ ನಡೆಸುತ್ತಿದ್ದಾರೆ.
ಬರಹ : ಗಣೇಶ್ ಮಾವಂಜಿ