ಉಜಿರಡ್ಕದ ಕೊರಗಜ್ಜ ಕ್ಷೇತ್ರದಲ್ಲಿ ಬೇಡಿ ಬಂದ ತನ್ನ ಭಕ್ತರಿಗೆ ಅಭಯ ನೀಡಿದಂತೆ ನಡೆಯುವ ಮೂಲಕ ಮತ್ತೆ ಕೊರಗಜ್ಜ ಕಾರಣಿಕ ದೈವವಾಗಿ ಕಾಣಿಸಿಕೊಂಡಿದೆ. ಸುಳ್ಯ ತಾಲೂಕಿನ ನಾಲ್ಕೂರು ಗ್ರಾಮದ ಸ್ವಾಮಿ ಕೊರಗಜ್ಜ ದೈವ ಸಾನಿಧ್ಯ ಉಜಿರಡ್ಕ, ನಡುಗಲ್ಲು ಇಲ್ಲಿ ಸುಮಾರು 20 ವರ್ಷಗಳಿಂದ ಕಲ್ಲುರ್ಟಿ, ಮಂತ್ರವಾದಿ ಗುಳಿಗ ಹಾಗೂ ಕೊರಗಜ್ಜ ದೈವಗಳ ಆರಾಧನಾ ಕ್ಷೇತ್ರವಾಗಿ ದಿನನಿತ್ಯ ಪೂಜೆ ಹಾಗೂ ಸಂಕ್ರಾಂತಿ ಕಾಲದಲ್ಲಿ ಅಗೇಲು ಸೇವೆ ನಡೆಸಿಕೊಂಡು ಬಂದಿದ್ದು ಹಲವಾರು ಭಕ್ತರು ತಮ್ಮ ಕಷ್ಟಗಳನ್ನು ಪರಿಹರಿಸಿಕೊಳ್ಳುವ ಶಕ್ತಿ ಸಾನಿಧ್ಯವಾಗಿದೆ. ಇದಕ್ಕೆ ಪೂರಕ ಎಂಬಂತೆ ಇತ್ತೀಚೆಗೆ ರಾಜ್ಯದಲ್ಲಿ ಸುದ್ದಿ ಮಾಡಿದ ಬಾಲಕಿಯ ನಾಪತ್ತೆ ಪ್ರಕರಣವೇ ಕೊರಗಜ್ಜನ ಕಾರಣಿಕಕ್ಕೆ ಸಾಕ್ಷಿ. ಅ. 17ರಂದು ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ನ ಜಗನ್ನಾಥ್ ರೇಖಾ ದಂಪತಿಯ ಪುತ್ರಿಯಾದ ಭಾರ್ಗವಿ ಎಂಬ ಬಾಲಕಿಯು ನಾಪತ್ತೆಯಾಗಿದ್ದಳು. ಈ ವಿಚಾರವಾಗಿ ಅವರ ಸಂಬಂಧಿಕರಾದ ಕುಕ್ಕೆ ಸುಬ್ರಹ್ಮಣ್ಯ ಯುವತೇಜಸ್ಸು ಟ್ರಸ್ಟ್ ಇದರ ಕಾರ್ಯಕರ್ತರಾದ ನಿತಿನ್ ಭಟ್ ನೂಚಿಲ ಹಾಗೂ ಸುಹಾಸ್ ನೂಚಿಲ ಅವರು ಅ.19 ರಂದು ಸಾನಿಧ್ಯದಲ್ಲಿ ಬಂದು ಬೆಳಗಿನ ಪೂಜೆಗೆ ಕೊರಗಜ್ಜನಿಗೆ ಪ್ರಾರ್ಥನೆ ಸಲ್ಲಿಸಿದರು. ಬಾಲಕಿಯು ಸೂರ್ಯ ಉದಯಿಸಿ ಸೂರ್ಯ ಅಸ್ತಮಿಸುವುದರೊಳಗೆ ಸಿಕ್ಕಿದಲ್ಲಿ 48 ದಿನದ ಒಳಗಡೆ ಕೊರಗಜ್ಜನಿಗೆ ಹರಕೆಯ ರೂಪದಲ್ಲಿ ನರ್ತನ ಸೇವೆ ಕೊಡುವುದಾಗಿ ಪ್ರಾರ್ಥಿಸಿದ್ದರು. ಕೊರಗಜ್ಜನ ಅಭಯದಂತೆ ಅದೇ ದಿನ ಸಂಜೆ ಸಾನಿಧ್ಯದಲ್ಲಿ ಪೂಜೆಯ ಸಮಯಕ್ಕೆ ಸರಿಯಾಗಿ ಕೊರಗಜ್ಜನ ಪವಾಡ ಎಂಬಂತೆ ಬಾಲಕಿಯು ಗೋವಾದಲ್ಲಿ ಪತ್ತೆಯಾದ ಸುದ್ದಿ ತಿಳಿದು ಬಂತು. ಅದೇ ಪ್ರಕಾರವಾಗಿ ಅ.30ರಂದು ಬಾಲಕಿ ಹಾಗೂ ಕುಟುಂಬಸ್ಥರು ಸಾನಿಧ್ಯಕ್ಕೆ ಬಂದು ಕೊರಗಜ್ಜನ ದರ್ಶನ ಪಡೆದರು.ಈ ಸಂದರ್ಭದಲ್ಲಿ ಸಾನಿಧ್ಯದ ಆಡಳಿತದ ಚಿನ್ನಮ್ಮ, ಉಜಿರಡ್ಕ, ಸುರೇಶ್ ಉಜಿರಡ್ಕ ಹಾಗೂ ಚರಣ್ ರಾಜ್ ಉಜಿರಡ್ಕ ಉಪಸ್ಥಿತರಿದ್ದರು.