Ad Widget

ಅಭಿವೃದ್ಧಿ ಮಾಡಲಾಗದೇ ಭ್ರಷ್ಟಾಚಾರದಲ್ಲಿ ಮುಳುಗಿರುವುದನ್ನು ಮರೆಮಾಚಲು ಪಲಾಯನ ವಾದ ಮಾಡುತ್ತಿದ್ದಾರೆ – ವೆಂಕಪ್ಪ ಗೌಡ

ಆಡಳಿತ ಪಕ್ಷದವರಿಂದ ಅಭಿವೃದ್ಧಿಯಲ್ಲಿ ಕುಂಠಿತ ಮತ್ತು ಭ್ರಷ್ಟಚಾರದಿಂದ ಹೊರಬರಲು ಸಾಧ್ಯವಾಗದ ಹಿನ್ನೆಲೆಯಲ್ಲಿ ತಮ್ಮು ಮೇಲಿನ ಆರೋಪವನ್ನು ಮರೆಮಾಚಲು ನಮ್ಮ ಮೇಲೆ ಇಲ್ಲ ಸಲ್ಲದ ಆರೋಪವನ್ನು ಮಾಡುತ್ತಿದ್ದಾರೆ ಎಂದು ನಗರ ಪಂಚಾಯತ್ ವಿಪಕ್ಷ ನಾಯಕ ಎಂ.ವೆಂಕಪ್ಪ ಗೌಡ ಹೇಳಿದರು.

. . . . .

ಅವರು ನ.ಪಂ.ಅಧ್ಯಕ್ಷ ವಿನಯಕುಮಾರ್ ಕಂದಡ್ಕ ಅವರ ಮಾಡಿದ ಆರೋಪ ಖಂಡಿಸಿ ಮಾತನಾಡಿದರು. ನಗರ ಪಂಚಾಯಿತ್ ನ ಇತಿಹಾಸದಲ್ಲಿ ವಿರೋಧ ಪಕ್ಷದವರ ಆಡಳಿತಾತ್ಮಕ ಪ್ರಶ್ನೆಗೆ
ಉತ್ತರಿಸಲಾಗದೆ ಅಧ್ಯಕ್ಷರು ಹೊರ ನಡೆದ ಪ್ರಸಂಗ ಸುಳ್ಯದ
ಚರಿತ್ರೆಯಲ್ಲಿ ಇದೇ ಮೊದಲು ಎಂದರು. ವಿರೋಧ ಪಕ್ಷದವರು ಆಡಳಿತಾತ್ಮಕವಾಗಿ ಎತ್ತಿದ ಪ್ರಶ್ನೆಗಳು ಸುಳ್ಳಾಗಿದ್ದರೆ, ಅಥವಾ ನೈಜತೆಯಿಂದ ಕೂಡಿರದೇ ಇದ್ದರೆ ಅದನ್ನು ಸಮರ್ಥವಾಗಿ ನಗರ ಪಂಚಾಯತ್ ಸಭೆಯಲ್ಲೇ ಮಾಧ್ಯಮದ ಮುಂದೆ ಪೂರಕ ದಾಖಲೆಗಳನ್ನು ಕೊಟ್ಟು ಉತ್ತರಿಸಬಹುದಿತ್ತು. ಅದು ಬಿಟ್ಟು ನಂತರದ ದಿನಗಳಲ್ಲಿ ಪತ್ರಿಕಾಗೋಷ್ಠಿ ನಡೆಸುತ್ತಾರೆ ಎಂದಾದರೆ, ಅಭಿವೃದ್ಧಿಯ ಹಿನ್ನಲೆಯಲ್ಲಿ ವಿರೋಧ ಪಕ್ಷದವರಿಗೆ ಉತ್ತರ ಕೊಡುವ ನೈತಿಕತೆ ಇಲ್ಲವೆಂದೇ ಭಾವಿಸಬೇಕಾಗಿದೆ. ಪಲಾಯನವಾದ ಮಾಡಿದ್ದಾರೆ. ನಗರದ ಒಳಗಡೆ ಅಭಿವೃದ್ಧಿಯನ್ನು ಬಯಸುವುವವರು ಅಭಿವೃದ್ಧಿಗೆ ಪೂರಕವಾಗಿ ನಗರ ಪಂಚಾಯಿತ್ ನಲ್ಲಿ ಒಬ್ಬ ಪೂರ್ಣ ಕಾಲಿಕ ಇಂಜಿನಿಯರ್ ಹಾಗೆಯೇ ಹೆಲ್ತ್‌ ಇನ್ಸ್ ಪೆಕ್ಟರ್ ಇನ್ನಿತರ ಸಿಬ್ಬಂದಿಗಳು ಇರಬೇಕೆಂಬುದನ್ನು ಮನಗಾನ ಬೇಕಿತ್ತು. ಆದರೆ ನಮ್ಮ ದುರ್ದೈವ ಸುಳ್ಯದವರೇ ಮಂತ್ರಿ ಇದ್ದರೂ, ಜಿಲ್ಲಾ ಉಸ್ತುವಾರಿ ಮಂತ್ರಿ ನಮ್ಮ ನೆರೆಯವರಾಗಿದ್ದರೂ ನಗರ ಪಂಚಾಯತ್‌ ಅಭಿವೃದ್ಧಿಗೆ ಪೂರಕವಾದ ಅಧಿಕಾರಿಗಳನ್ನು ಇಟ್ಟು ಕೊಳ್ಳದೇ ಇರುವ ದುಸ್ಥಿತಿಗೆ ಮುಟ್ಟಿದೆ ಎಂದಾದರೆ ಬಿಜೆಪಿ ನಾಯಕರ ಟೀಕೆ ಅವರ ತಪ್ಪನ್ನು ಮುಚ್ಚಿಕೊಳ್ಳುವುದಕ್ಕಾಗಿ ಹೂಡಿದ ತಂತ್ರವೆಂದು ಕಾಣುವುದಿಲ್ಲವೆ. ಇಂಜಿನಿಯರ್ ಇಲ್ಲದಿದ್ದರೆ ಕ್ರಿಯಾ ಯೋಜನೆ ಮಾಡುವುದು ಸಾಧ್ಯವೇ?. ಕಸ ರವಾನೆ ಮಾಡುವುದಕ್ಕೆ ಈಗಾಗಲೇ ಟೆಂಡರ್ ಕರೆದು ಅದನ್ನು 45 ದಿನಗಳಲ್ಲಿ ಸಾಗಾಟ ಮಾಡಿಸುತ್ತೇವೆ ಎಂದು ನೀಡಿರುವ ಹೇಳಿಕೆ ಉತ್ತರ ಕುಮಾರನ ಪೌರುಷದ ಮಾತಿನಂತಾಗಿದೆ. ಮಾತಿನ ಮೇಲೆ ಬದ್ಧತೆಯೂ ಇಲ್ಲ. ನಗರ ಪಂಚಾಯತ್‌ನ ವಾಹನ ಶೆಡ್ಜ್‌ನಲ್ಲಿ 215 ಟನ್ ಕಸ ಇದೆ. ಅದನ್ನು ಸಾಗಾಟ ಇದೀಗ 130 ಟನ್ ಕಸ ಹೋಗಿದೆ ಎಂದು ಅಂಕಿಅಂಶ ಕೊಡುತ್ತಾರೆ. ಆದರೆ ವಾಸ್ತವಿಕತೆಯನ್ನು ಜನತೆ ಪರಿಶೀಲಿಸಿದರೆ ಆ ಶೆಡ್‌ನಿಂದ ಕೇವಲ 25% ಕಸ ಸಾಗಾಟವಾದಂತೆ ಕಂಡುಬರುತ್ತದೆ. ಅಷ್ಟಕ್ಕೂ ಈ ಕಸ ಅನಿರುದ್ಧರವರ ಹಾಗೂ ನಮ್ಮ ಹೋರಾಟದಿಂದ ರವಾನಿಸುವುದಕ್ಕೆ ಕಾರಣ ಆಗಿದೆ.
ನಗರದ ಬೀದಿ ದೀಪ ಅಳವಡಿಕೆಯು ಸರಿಯಾಗಿ ನಡೆಯುತ್ತಿಲ್ಲ ಎಂದು ನಾವೂ ಪ್ರಶ್ನೆ ಮಾಡುತ್ತ ಬಂದಿದ್ದರೂ ಅದಕ್ಕೆ ಟೆಂಡರ್ ಕರೆಯದೆ ಎಂದಿನಂತೆ ತಿಂಗಳ ನಿರ್ವಹಣೆ ರೂ 1,35,711 ಯತಾವತ್ತಾಗಿ ನೀವು ಸಂದಾಯ ಮಾಡಿಕೊಂಡು ಬಂದಿದ್ದೀರಿ, ಅಷ್ಟಕ್ಕೂ 2-3 ವರ್ಷಗಳಿಂದ ಈವರೆಗೆ ಯಾವುದೇ ಟೆಂಡರನ್ನು ಕರೆಯಲಿಲ್ಲ. ಇದರ ಹಿಂದಿನ ಗುಟ್ಟು ಏನಿದೆ ಇದನ್ನು ನಾವು ಪ್ರಶ್ನೆ ಮಾಡಿದರೆ ಅದು ಅಸಭ್ಯತನದ ವರ್ತನೆಯೇ. ಸುಳ್ಯ ಮೀನು ಮಾರುಕಟ್ಟೆಯನ್ನು ಈ ಹಿಂದೆ ಟೆಂಡರ್ ವಹಿಸಿಕೊಂಡವರು ನಮ್ಮ ನಗರ ಪಂಚಾಯತ್‌ಗೆ: ಕಳೆದ 2013-14 ರಿಂದ ಸುಮಾರು ರೂ 9,52,002/- ನ್ನು ಬಾಕಿ ಮಾಡಿಕೊಂಡು ಬಂದಿರುತ್ತಾರೆ. ಇದನ್ನು ವಸೂಲಿ ಮಾಡಿ ಪಂಚಾಯತ್ ಅಭಿವೃದ್ಧಿ ಕಾರ್ಯಗಳಿಗೆ ವಿನಿಯೋಗ ಮಾಡಿ ಎಂದು ಸಲಹೆ ನೀಡಿದರೆ, ಇದು ಯಾವ ರೀತಿಯ ತಪ್ಪಾಗುತ್ತದೆ.‌ ಕಸ ವಿಲೇವಾರಿಗೆ ಬರ್ನಿಂಗ್ ಮಿಷಿನ್‌ ಹಾಗೂ ಗೊಬ್ಬರ ತಯಾರು ಮಾಡುವ ಮಿಷಿನ್ ತಂದು ಆಳವಡಿಸಿ ಒಂದು ವರ್ಷ ಸಮೀಪಿಸುತ್ತಾ ಬಂದರೂ ಇನ್ನು ಈವರೆಗೆ ಒಂದು ಟನ್ ಕಸವನ್ನು ಬರ್ನ್ ಮಾಡದೆ, ಒಂದು ಗೋಣಿ ಗೊಬ್ಬರವನ್ನು ತಯಾರು ಮಾಡದೇ ಲಕ್ಷಾಂತರ ರೂಪಾಯಿಯ ಬರ್ನಿಂಗ್ ಮಿಷಿನ್ ಹಾಗೂ ಡ್ರಯ‌ ಮಿಷಿನ್ ತುಕ್ಕು ಹಿಡಿಯುವುದನ್ನು ಪ್ರಶ್ನಿಸಬಾರದೇ ಎಂದರು.
ಅವೈಜ್ಞಾನಿಕವಾಗಿ ನಗರದ ಪಂಪ್ ಹೌಸಿನ ಪಕ್ಕದಲ್ಲಿ ಜಾಕ್‌ವೆಲ್‌ನ್ನು ಕೋಟಿಗಳಲ್ಲಿ ಪ್ರಾರಂಭಿಸಿದ್ದರೂ ಅದರಲ್ಲಿ ಹೊಳೆಯ ನೀರನ್ನು ಶುದ್ಧಿಕರಣ ಮಾಡುವುದಕ್ಕೆ ಯಾವುದೇ ಕ್ರಮ ಕೈಗೊಳ್ಳದೇ ಮಳೆಗಾಳ ಪ್ರಾರಂಭವಾದ ನಂತರ ಸದ್ರಿ ಕಾಮಗಾರಿ ಪ್ರಾರಂಭಿಸಿ, ಈ ಹಂತದಲ್ಲಿ ಸುಮಾರು 15-20 ಲಕ್ಷದಷ್ಟು ಹಣವನ್ನು ಹೊಳೆಯ ನೀರಿಗೆ ಹಾಕಿದನ್ನು ಪ್ರಶ್ನಿಸಿದಾಗ ನಾವು ಈ ದೇಶದ ಹೊರಗಿನ ನಾಗರಿಕರು ಆಗುತ್ತೇವೆಯೇ. ಸುಳ್ಯ ನಗರಕ್ಕೆ ಒಳ ಚರಂಡಿ ಯೋಜನೆಯನ್ನು ಸರಕಾರ ಕೊಟ್ಟರೆ ಅದನ್ನು ಮಣ್ಣಿನ ಅಡಿಗೆ ಹಾಕಿ ಆ ಯೋಜನೆಗೆ ಸಂಪೂರ್ಣ ಎಳ್ಳು ನೀರು ಬಿಟ್ಟಿರುವುದನ್ನು ಜನರ ಪರವಾಗಿ ನಾವು ಮಾತನಾಡಬಾರದೇ. ಜಟ್ಟಿಪಳ್ಳದಲ್ಲಿ ಶಾಲೆ ಶಿಥಿಲಗೊಂಡು ಅದರ ಹಂಚು ಶಾಲಾ ಕೊಠಡಿಯ ಒಳಗಡೆ ಬೀಳುವುದನ್ನು ಮಾಧ್ಯಮದ ಮೂಲಕ ಗಮನಿಸಿ ಅಲ್ಲಿನ ಪೋಷಕರ ಮತ್ತು ಮಕ್ಕಳ ಹಿತ ದೃಷ್ಟಿಯಿಂದ ಶಾಲಾಭಿವೃದ್ಧಿಗೆ ಅನುದಾನ ನೀಡಬೇಕೆಂದು ಸಂಬಂಧಪಟ್ಟವರನ್ನು ಆಗ್ರಹಿಸಿದರೆ ನಮ್ಮ ನಗರ ಪಂಚಾಯತ್‌ ಉಪಾಧ್ಯಕ್ಷರು ಹೇಳಿದಂತೆ ವೆಂಕಪ್ಪ ಗೌಡರಿಗೆ ಜಟ್ಟಿಪಳ್ಳದಲ್ಲಿ ಏನು ಕೆಲಸ ಎಂದು ಕೇಳುವಂತಹ ನೈತಿಕತೆ ಜನಪ್ರತಿನಿಧಿಯಾಗಿರುವ ಉಪಾಧ್ಯಕ್ಷೆಗೆ ಏನಾದರೂ ಇದೆಯೇ. ಸುಳ್ಯದ ಕ್ರೀಡಾಂಗಣವನ್ನು ಅವೈಜ್ಞಾನಿಕವಾಗಿ ನಿರ್ಮಿಸಿರುವುದರಿಂದ ಅದರ ಕೆಳ ಭಾಗದ ಜನತೆಗೆ ಜೀವನ ಮಾಡುವುದಕ್ಕೆ ಕಷ್ಟಕರವಾಗುತ್ತದೆ. ಅದಕ್ಕೆ ಸೂಕ್ತ ಕ್ರಮವಹಿಸಿ ಎಂದು ಸಂಬಂಧಪಟ್ಟ ಅಧಿಕಾರಿಗಳನ್ನು ಒತ್ತಾಯಿಸಿದರೆ ಅದೂ ತಪ್ಪಾಗುತ್ತದೆ. ನಗರದಾದ್ಯಂತ ಕಟ್ಟಡ ಮನೆ ನಿರ್ಮಾಣ ಮಾಡುವವರಿಗೆ ಮನೆ ನಿವೇಶನ ಕ್ರಯಕ್ಕೆ ಪಡಕೊಳ್ಳುವವರಿಗೆ ನಮೂನೆ-3 ದೊರೆಯದೆ ವರ್ಷಾನುಗಟ್ಟಲೆಯಿಂದ ನಗರಕ್ಕೆ ಮಹಾ ಯೋಜನೆ ಬರುತ್ತದೆ ಎಂದು ನಗರದ ಜನತೆಯನ್ನು ನಂಬಿಸುತ್ತಿರುವ ನಿಮ್ಮನ್ನು ನಾವು ಪ್ರಶ್ನೆ ಮಾಡಬಾರದೆ.

ನೀವು ನಮ್ಮನ್ನು ಟೀಕೆ ಮಾಡುವ ಬದಲು ನಿಮ್ಮ ಜವಾಬ್ದಾರಿಯನ್ನು ಅರಿತು ಪ್ರಸ್ತುತ ಪ್ರಾಕೃತಿಕ ವಿಕೋಪಕ್ಕೆ ತೊಂದರೆಗೊಳಗಾದ ಜನರ ಕೆಲಸ ಮಾಡಿ, ಸುಳ್ಯದಲ್ಲಿ ಮುರಿದು ಹೋಗಿರುವ ಶಾಲೆ ಕಟ್ಟಡಗಳಿಗೆ, ಡಾಮರು-ಕಾಂಕ್ರಿಟ್ ಕಾಣದ ರಸ್ತೆಗಳಿಗೆ ಅನುದಾನ ತಂದು ಅಭಿವೃದ್ಧಿಪಡಿಸುವ ಕಾಮಗಾರಿ ಮಾಡಿ, ವಿನಃ ವಿರೋದ ಪಕ್ಷದವರ ಮೇಲೆ ಗೂಬೆ ಕೂರಿಸತಕ್ಕಂತಹ ಕೆಲಸವನ್ನು ಮಾಡಬೇಡಿ ಮತ್ತು ಬ್ರಷ್ಟಚಾರದಿಂದ ಹೊರಬನ್ನಿ ಎಂದರು. ಪಂಚಾಯತ್ ವ್ಯಾಪ್ತಿಯಲ್ಲಿ ಕಟ್ಟಡ ಕಟ್ಟುವ ಶ್ರೀಮಂತರಿಗೆ ಒಂದು ನ್ಯಾಯ ಬಡವರಿಗೆ ಇನ್ನೊಂದು ನ್ಯಾಯ ಮಾಡಿ ನಿಮ್ಮ ಜೇಬು ತುಂಬಿಸಿಕೊಳ್ಳುವ ಕೆಲಸವನ್ನು ನಿಲ್ಲಿಸಿ ಇಲ್ಲದಿದ್ದಲ್ಲಿ ನಿಮ್ಮ ಭ್ರಷ್ಟಾಚಾರದ ವಿರುದ್ಧ ಕೂಡ ಸೂಕ್ತ ಚರ್ಚೆ ಪ್ರತಿಭಟನೆಗಳನ್ನು ಹಮ್ಮಿಕೊಳ್ಳುತ್ತೇವೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ನಗರ ಕಾಂಗ್ರೆಸ್ ಅಧ್ಯಕ್ಷ ಶಶಿಧರ ಎಂ.ಜೆ., ನಗರ ಪಂಚಾಯತ್ ವಿರೋಧ ಪಕ್ಷದ ನಾಯಕ ಬಾಲಕೃಷ್ಣ ಭಟ್ ಕೊಡೆಂಕಿರಿ, ಸದಸ್ಯರಾದ ಶರೀಫ್ ಕಂಠಿ, ಧೀರಾ ಕ್ರಾಸ್ತಾ, ಕಾಂಗ್ರೆಸ್ ಮಾಧ್ಯಮ ವಕ್ತಾರರಾದ ಭವಾನಿಶಂಕರ ಕಲ್ಮಡ್ಕ, ನಂದರಾಜ ಸಂಕೇಶ ಉಪಸ್ಥಿತರಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!