ಸುಳ್ಯ : ತಾಲೂಕಿನ ರೈತರು ಹೆಚ್ಚಾಗಿ ಅಡಿಕೆ ಕೃಷಿಯನ್ನೇ ಹೆಚ್ಚಾಗಿ ಅವಲಂಬಿಸಿದ್ದು ಈ ಬಾರಿ ಸುರಿದ ಕುಂಭದ್ರೋಣ ಮಳೆಗೆ ಅಡಿಕೆ ರಬ್ಬರ್ ಕೃಷಿಕರನ್ನು ಕಂಗಾಲಾಗಿಸಿದೆ. ಕೃಷಿ ಕೂಲಿ ಕಾರ್ಮಿಕರು ಕೂಡ ತೊಂದರೆಗೆ ಸಿಲುಕಿದ್ದಾರೆ. ವಿಪರೀತ ಮಳೆಯ ಪರಿಣಾಮದಿಂದ ತಾಲೂಕಿನ ವಿವಿಧೆಡೆ ಅಡಿಕೆ ತೋಟಗಳಲ್ಲಿ ಕೊಳೆರೋಗ ಕಾಣಿಸಿಕೊಂಡಿದೆ.
ಸುಳ್ಯ ತಾಲೂಕಿನ ಮಡಪ್ಪಾಡಿ, ಕಲ್ಮಕಾರು, ಅಜ್ಜಾವರ, ಮರ್ಕಂಜ ಹಾಗೂ ಕೊಡಗಿನ ಪೆರಾಜೆ,ಚೆಂಬು ಭಾಗಗಳಲ್ಲಿ ಈಗಾಗಲೇ ತೋಟಗಳಿಗೆ ಹಳದಿ ರೋಗ ವ್ಯಾಪಕವಾಗಿ ಬಾಧಿಸುತ್ತಿದ್ದು ವಿಸ್ತಾರಗೊಳ್ಳುತ್ತಿದೆ. ಇದುವರೆಗೆ ಇದರ ತಡೆಗೆ ಯಾವುದೇ ಪರಿಣಾಮಕಾರಿಯಾದ ಕ್ರಮ ಕೈಗೊಳ್ಳಲು ಸರಕಾರ ಹಾಗೂ ಖಾಸಗಿ ಸಂಸ್ಥೆಗಳಿಂದ ಸಾಧ್ಯವಾಗಿಲ್ಲ. ಹಳದಿ ರೋಗ ಒಂದೆಡೆಯಾದರೇ ಈ ಮಳೆಗೆ ಕೊಳೆ ರೋಗ ಕಾಣಿಸಿಕೊಂಡಿರುವುದು ರೈತರನ್ನು ಚಿಂತೆ ಮಾಡುವಂತೆ ಮಾಡಿದೆ. ಜಾಲ್ಸೂರು ಗ್ರಾಮದ ಅಡ್ಕಾರು ಕುರಿಯ ದಯಾನಂದ ರೈ ಡಿಂಬ್ರಿ ಅವರ ತೋಟದಲ್ಲಿ ಕೊಳೆರೋಗ ಬಾಧಿಸಿದ್ದು ಅಡಿಕೆ ಮಿಡಿಗಳೆಲ್ಲ ನೆಲಕ್ಕುರುಳಿದೆ. ಔಷದಿ ಸಿಂಪಡಣೆ ಜನ ಸಿಗುವುದು ಕಷ್ಟ, ಜತೆಗೆ ವಿಪರೀತ ಮಳೆ ಔಷಧಿ ಸಿಂಪಡಣೆಗೆ ತೊಂದರೆಯಾಗಿದೆ ಎನ್ನುತ್ತಾರೆ ಹಲವು ಕೃಷಿಕರು.