ನಗರ ಪಂಚಾಯತ್ ಸದಸ್ಯ ವೆಂಕಪ್ಪ ಗೌಡರು ಆರೋಗ್ಯಕರ ಚರ್ಚೆಗೆ ಸಿದ್ಧರಿಲ್ಲ. ಅಭಿವೃದ್ಧಿ ಸಹಿಸುವುದಿಲ್ಲ. ಹಂದಿಗೆ ಹಾಸಿಗೆ ಹಾಕಿ ಕೊಟ್ಟರೂ ಅದು ಹಾಸಿಗೆಯಲ್ಲಿ ಮಲಗುವುದಿಲ್ಲ. ಸ್ಥಳವನ್ನು ಸ್ವಚ್ಛ ಮಾಡಿ ಕೊಟ್ಟಷ್ಟು ಹಂದಿ ಕೊಳಚೆಯಲ್ಲೇ ಹೋಗಿ ಬೀಳುತ್ತದೆ. ಅಂತ ಮನಸ್ಥಿತಿಯಿಂದ ಇವರು ಹೊರ ಬರಬೇಕು. ಈಗ ಆಡಳಿತ ಪಕ್ಷದಿಂದ ಪ್ರಮುಖ ಯೋಜನೆಗಳೆಲ್ಲಾ ತ್ವರಿತಗತಿಯಿಂದ ನಡೆಯುತ್ತಿದ್ದು ವಿರೋಧ ಪಕ್ಷದವರಿಗೆ ಬೊಬ್ಬೆ ಹೊಡೆಯಲು ಏನೂ ಸಿಗುತ್ತಿಲ್ಲ. ಅದಕ್ಕಾಗಿ ಈ ರೀತಿಯ ಬೇಜವಬ್ದಾರಿ ವರ್ತನೆಯನ್ನು ತೋರಿಸುತ್ತಿದ್ದಾರೆ. ಟ್ಯೂಬ್ ಲೈಟ್ ಒಡೆದು ಹಾಕಿದ್ದಾರೆ. ಗಾಜಿನ ಚೂರು ರಟ್ಟಿ ನಮ್ಮ ಮಹಿಳಾ ಸದಸ್ಯರಿಗೂ ಗಾಯವಾಗಿದೆ. ಆದರೂ ನಾವು ತಾಳ್ಮೆಯಿಂದ ಇದ್ದೇವೆ. ಅದನ್ನು ನಮ್ಮ ದೌರ್ಬಲ್ಯ ಅಂತ ಭಾವಿಸಬೇಡಿ ಎಂದು ನ.ಪಂ. ಅಧ್ಯಕ್ಷ ವಿನಯ್ ಕುಮಾರ್ ಕಂದಡ್ಕ ಆಕ್ರೋಶ ವ್ಯಕ್ತಪಡಿಸಿದರು.
ಜು. 11 ರಂದು ನ.ಪಂ. ಸಾಮಾನ್ಯ ಸಭೆಯಲ್ಲಿ ನಡೆದ ಟ್ಯೂಬ್ ಲೈಟ್ ಗದ್ದಲದ ಕುರಿತು ಜು.12 ಪತ್ರಿಕಾ ಗೋಷ್ಠಿಯನ್ಬು ಉದ್ದೇಶಿಸಿ ಅವರು ಮಾತನಾಡಿದರು. ಒಂದು ಜವಬ್ದಾರಿಯುತ ಸ್ಥಾನದಲ್ಲಿರುವ ವ್ಯಕ್ತಿ ಸಾಮಾನ್ಯ ಸಭೆಯಲ್ಲಿ ಬಂದು ಟ್ಯೂಬ್ ಲೈಟ್ ಒಡೆಯುವ ಹೀನ ಪರಿಸ್ಥಿತಿಗೆ ಬಂದಿದ್ದಾರೆ ಎಂದರೆ ಇವರ ಪರಿಸ್ಥಿತಿ ಎಲ್ಲಿಗೆ ಬಂತು ಎಂದು ಗಮನಿಸಬೇಕು ಎಂದರು. ನಮ್ಮ ಕಾಂಗ್ರೆಸ್ ಮಿತ್ರರೇ ವೆಂಕಪ್ಪ ಗೌಡರದ್ದು ಇದೆಂಥಾ ಹುಚ್ಚುತನ ಎಂದು ಪ್ರತಿಕ್ರಿಯಿಸಿದ್ದಾರೆ. ಇವರಿಗೆ ಇವರ ಪಕ್ಷದಲ್ಲೇ ಕಿಂಚಿತ್ತೂ ಮರ್ಯಾದೆಯಿಲ್ಲ ಹಾಗಾಗಿ ಅವರ ವರ್ತನೆ ಮಿತಿಮೀರಿದೆ. ಇದರ ಬಗ್ಗೆ ಅವರೇ ಅತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.
ನಿರಂತರ ಮಳೆಯಿಂದ ಕಷ್ಟ: ಬೀದಿ ದೀಪದ ಸಮಸ್ಯೆಯ ಕುರಿತು ನಾವು ಕ್ರಮ ಕೈಗೊಂಡಿದ್ದೇವೆ. ಆದರೆ ತೀವ್ರ ಮಳೆಯಾಗುತ್ತಿರುವ ಹಿನ್ನಲೆ ಯಾವುದೇ ಅಚಾತುರ್ಯ ಆಗಬಾರದೆಂಬ ಕಾರಣಕ್ಕೆ ಬೀದಿದೀಪ ದುರಸ್ತಿ ತಡವಾಗಿದೆ ಅಷ್ಟೇ. ಅಷ್ಟಕ್ಕೇ ಈ ರೀತಿಯ ಕೀಳುಮಟ್ಟ ಬೇಕಿರಲಿಲ್ಲ ಎಂದರು.
ಕಾಂಗ್ರೆಸ್ ಮುಕ್ತ ಮಾಡಲು ಇವರೇ ಸಾಕು:
ದೇಶದಲ್ಲಿ ಕಾಂಗ್ರೆಸ್ ಮುಕ್ತವಾಗಲು ಇಂಥಹ ಒಬ್ಬೊಬ್ಬ ನಾಯಕ ಇದ್ದರೆ ಸಾಕು. ಅಲ್ಲಿ ನಮಗೇನೂ ಕೆಲಸವಿರಲ್ಲ ಎಂದು ಕಾಲೆಳೆದರು. ಇವರು ಟ್ಯೂಬ್ ಲೈಟ್ ಅನ್ನು ಕೋರ್ಟ್ ನಲ್ಲಿ ಒಡೆಯಲಿ ನೋಡೋಣ ಎಂದು ಕಿಚಾಯಿಸಿದರು. ನಾವು ಮಾತ್ರ ಯಾರಿಗೂ ದ್ರೋಹ ಮಾಡದೇ ಸಮ ಪ್ರಮಾಣದಲ್ಲಿ ಅನುದಾನವನ್ನು ಹಂಚಿಕೆ ಮಾಡಿದ್ದೇವೆ ಎಂದು ಅಧ್ಯಕ್ಷರು ತಿಳಿಸಿದರು.
ಜಟ್ಟಿಪಳ್ಳ ಶಾಲೆ ಶೀಘ್ರ ದುರಸ್ತಿ ಭರವಸೆ: ಕುಸಿದು ಬಿದ್ದ ಶಾಲೆಯನ್ನು ಶೀಘ್ರ ದುರಸ್ತಿ ಮಾಡುತ್ತೇವೆ.ಅದಕ್ಕೆ ಬೇಕಾದ 5 ಲಕ್ಷ ಅನುದಾನ ಡಿಸಿಯ ಮೂಲಕ ಶೀಘ್ರ ಬರಲಿದೆ ಎಂದು ಅಧ್ಯಕ್ಷರು ತಿಳಿಸಿದರು. ಇದಲ್ಲದೆ 110 ಕೆ.ವಿ. ಸಬ್ ಸ್ಟೇಷನ್ , ಕುಡಿಯುವ ನೀರಿನ ವ್ಯವಸ್ಥೆ, ಕಸ ಸಾಗಾಣೆ ಮುಂತಾದ ಕಾರ್ಯಗಳು ತ್ವರಿತವಾಗಿ ನಡೆಯುತ್ತಿದೆ. ನಾವು ಕೆಲಸ ಮಾಡುತ್ತೇವೆ ಷೋ ಅಪ್ ಮಾಡುತ್ತಿಲ್ಲ ಎಂದು ತಿಳಿಸಿದರು.
ಉಪಾಧ್ಯಕ್ಷೆ ಸರೋಜಿನಿ ಪೆಲ್ತಡ್ಕ ಮಾತನಾಡಿ ವೆಂಕಪ್ಪ ರಿಗೆ ಜಟ್ಟಿಪಳ್ಳದ ಶಾಲೆಯಲ್ಲಿ ಏನು ಕೆಲಸ. ಅವರ ವಾರ್ಡ್ ಬಿಟ್ಟು ಇಲ್ಲೂ ಷೋ ಅಪ್ ಮಾಡಲು ಬರುತ್ತಾರೆ ಎಂದು ಆರೋಪಿಸಿದರು. ಗೋಷ್ಠಿಯಲ್ಲಿ ಬಿಜೆಪಿ ನಗರ ಸಮಿತಿ ಅಧ್ಯಕ್ಷ ಬಾಲಗೋಪಾಲ ಸೇರ್ಕಜೆ, ನ.ಪಂ. ಸದಸ್ಯರಾದ ಬಾಲಕೃಷ್ಣ ರೈ, ರಾಧಾಕೃಷ್ಣ ರೈ ಬೂಡು, ರೋಹಿತ್ ಕೊಯಿಂಗೋಡಿ, ಪ್ರಮುಖರಾದ ಜಿನ್ನಪ್ಪ ಪೂಜಾರಿ, ಸೋಮನಾಥ ಪೂಜಾರಿ, ಸುನಿಲ್ ಕೇರ್ಪಳ ಮೊದಲಾದವರು ಉಪಸ್ಥಿತರಿದ್ದರು.