ಕರ್ನಾಟಕದ ಪ್ರತಿಷ್ಠಿತ ರಂಗ ಶಿಕ್ಷಣ ಕೇಂದ್ರವಾಗಿರುವ ನೀನಾಸಂ ನ 2022-23 ನೇ ಸಾಲಿನ ರಂಗಪದವಿ ವಿದ್ಯಾರ್ಥಿನಿಯಾಗಿ, ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರ ಸುಳ್ಯದ ಪ್ರತಿಭೆ, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯು ರಾಜ್ಯಾದ್ಯಂತ ನಡೆಸಿದ ರಂಗ ಪಯಣದ ಸಾಹೇಬ್ರು ಬಂದವೇ ನಾಟಕದ ಮುಖ್ಯ ನಟಿ ಕುಮಾರಿ ಮಮತಾ ಕಲ್ಮಕಾರು ಇವರು ಆಯ್ಕೆ ಆಗಿರುತ್ತಾರೆ.
ಮಮತಾರವರು ಅರೆಭಾಷೆ ಅಕಾಡೆಮಿಯು ರಂಗಮನೆಯಲ್ಲಿ ಏರ್ಪಡಿಸಿದ ರಂಗ ಶಿಬಿರದಲ್ಲಿ ತರಬೇತಿ ಪಡೆದು ಪ್ರಪ್ರಥಮವಾಗಿ ರಂಗಕ್ಕೇರಿದವರು. ರಂಗಮನೆಯ ಸಾಂಸ್ಕೃತಿಕ ಚಟುವಟಿಕೆಯಲ್ಲಿ ಸಕ್ರಿಯವಾಗಿರುವ ಮಮತಾ
ಸ್ವತ: ಒಳ್ಳೆಯ ಗಾಯಕಿಯೂ ಆಗಿದ್ದಾರೆ. ಅನೇಕ ಕಿರುಚಿತ್ರಗಳಲ್ಲೂ ಅಭಿನಯಿಸಿದ್ದಾರೆ.
ಸುಳ್ಯ ತಾಲೂಕು ಕಲ್ಮಕಾರಿನ ಗುಳಿಕಾನ ಮನೆಯ ದಿ| ಕುಕ್ಕ ನಲಿಕೆ ಮತ್ತು ಯಮುನಾ ದಂಪತಿಗಳ ಪುತ್ರಿಯಾಗಿರುವ ಮಮತಾ ಅತ್ಯಂತ ಬಡ ಕುಟುಂಬದಲ್ಲಿ ಜನಿಸಿದವರು. ತುಂಬ ಶ್ರಮಜೀವಿಯಾಗಿದ್ದು, ರಂಗಾಭಿನಯದಲ್ಲಿ ಬಹಳ ಆಸಕ್ತಿ ಹೊಂದಿದ್ದಾರೆ,.
ನೀನಾಸಂ ಸಂದರ್ಶನದಲ್ಲಿ ಭಾಗವಹಿಸಿದ ಕರ್ನಾಟಕದ ಸುಮಾರು 120 ಅಭ್ಯರ್ಥಿಗಳಲ್ಲಿ ಆಯ್ಕೆಯಾದ ಒಟ್ಟು15 ಮಂದಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಆಯ್ಕೆಯಾದ ಏಕೈಕ ಕಲಾವಿದೆ ಇವರಾಗಿದ್ದಾರೆ. ಹಳ್ಳಿಗಾಡಿನ ಪ್ರತಿಭೆ ಇದೀಗ ಆಧುನಿಕ ರಂಗಭೂಮಿಯ ವಿದ್ಯಾರ್ಥಿನಿಯಾಗಿ ನೀನಾಸಂಗೆ ಆಯ್ಕೆಯಾದದ್ದು ಸುಳ್ಯದ ರಂಗಾಸಕ್ತರಿಗೆ ಹೆಮ್ಮೆ ತಂದಿದೆ ಎಂದು ರಂಗಮನೆಯ ಅಧ್ಯಕ್ಷ ಜೀವನ್ ರಾಂ ಸುಳ್ಯ ಮತ್ತು ಅರೆಭಾಷೆ ಅಕಾಡೆಮಿ ಅಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆ ತಿಳಿಸಿದ್ದಾರೆ.
- Thursday
- November 21st, 2024