ತುಳುವರ ಆಚರಣೆ ಎಂದರೆ ಅದು ವೈಜ್ಞಾನಿಕ, ಪ್ರಾಕೃತಿಕ. ಪರಿಸರವನ್ನು ಬಿಟ್ಟು ಮಾಡುವ ತುಳುವರ ಯಾವ ಆಚರಣೆಯು ಬಹುಶಃ ಇಲ್ಲ. ‘ಪತ್ತನಾಜೆಗ್ ಪತ್ತ್ ಪನಿ ಬರ್ಸ’ (ಪತ್ತನಾಜೆಯ ದಿನ ಹತ್ತು ಹನಿಯಾದರೂ ಮಳೆ) ಎಂದು ನನ್ನ ಅಜ್ಜಿ ಬಾಲ್ಯದಲ್ಲಿ ನನಗೆ ಹೇಳುತ್ತಿದ್ದರು. ಇದು ಈಗಲೂ ಕಿವಿಗೆ ಕೇಳುತ್ತದೆ ಮತ್ತು ಇದು ಸತ್ಯವೂ ಹೌದು. ಬೇಸಿಗೆಯ ತಾಪದಿಂದ ಬೇಸತ್ತ ಪ್ರಕೃತಿಗೆ ಪತ್ತನಾಜೆಯ ದಿನ ತಂಪಾಗುತ್ತದೆ. ಇದು ಮಳೆ ತಾನು ಬರುತ್ತಿದ್ದೇನೆ ಎಂದು ನೀಡುವ ಮುನ್ಸೂಚನೆಯೂ ಹೌದು. ಜೇನು ನೊಣಗಳು ತನ್ನ ಗೂಡು ಬಿಟ್ಟು ಪಲಾಯನ ಮಾಡುವ ಸಂದರ್ಭ ಇದು. ಯುವಕರು ಜೇನು ಗೂಡುಗಳನ್ನು ಬೇಟೆ ಮಾಡಿ ಅದರಲ್ಲಿನ ತುಪ್ಪವನ್ನು ತೆಗೆಯುವುದು ಒಂದು ಹವ್ಯಾಸ ಈಗಲೂ ಇದೆ. ಈ ವರ್ಷ ಲಾಕ್‍ಡೌನ್ ಸಂದರ್ಭ ನನ್ನ ಅನೇಕ ಸ್ನೇಹಿತರು ಜೇನು ಗೂಡಿನೊಂದಿಗೆ ವ್ಯಾಟ್ಸ್‍ಪ್‍ನಲ್ಲಿ ಭಾವಚಿತ್ರವನ್ನು ಹಾಕಿದ್ದು ನೋಡಿದ್ದೇನೆ. ಪತ್ತನಾಜೆಯ ಬಳಿಕ ಅನೇಕ ಫಲಗಳು ಸಿಗುವುದಿಲ್ಲ ಮಾವಿನ ಹಣ್ಣು, ಗೇರು, ಪೇರಳೆ, ಹಲಸಿನ ಹಣ್ಣು, ಕಲ್ಲಂಗಡಿ ಹೆಚ್ಚಾಗಿ ಸಿಗುವುದು ಪತ್ತನಾಜೆಯ ಮುಂಚೆ. ಪತ್ತನಾಜೆಯ ದೇವರು ಹಿರಿಯ ಮಗನನ್ನು ತೂಕ ಮಾಡುತ್ತಾನೆ ಎಂದು ನಂಬಿಕೆ ಇದೆ. ಆದ್ದರಿಂದ ಅವನಿಗೆ ಗುಜ್ಜೆ (ಹಲಸಿನಕಾಯಿ) ಪಲ್ಯ ಮಾಡಿ ಹಲಸಿನ ಹಣ್ಣನ್ನು ನೀಡುತ್ತಾರೆ, ಹಲಸಿನ ಮರವನ್ನು ರಕ್ಷಣೆ ಮಾಡಲು ಈ ರೀತಿಯ ನಂಬಿಕೆ ಹುಟ್ಟು ಹಾಕಿರಬಹುದು.
ಇವತ್ತು ಪತ್ತನಾಜೆ ತುಳುನಾಡಿನ ಎಲ್ಲಾ ಜನರು ತಮ್ಮ ದೈವ ದೇವರನ್ನು ಸ್ಮರಿಸೋಣ. (ಬರಹ. : ರೂಪಾನಂದ ಗುಂಡ್ಯ)