ಅಳುತ ನಗುತ ನೋವ ಮರೆಸುತ, ಕಲಿತು ಕಲಿಯುತ ಕಲಿಸಿ ನಲಿಯುತ ಸಾಗುತಿದೆ ಪಯಣ…
ಬದುಕ ಪುಟಗಳ ತಿರುವು ಹಾಕುತ, ಪ್ರತೀ ಪುಟದಲೂ ಪಾಠ ಕಲಿಯುತ ಸಾಗುತಿದೆ ಪಯಣ…
ಸೋಲು ಕಲಿಸುವ ಪಾಠ ಕಲಿಯುತ, ಗೆಲುವಿನಂಚಿನ ದಾರಿ ಹುಡುಕುತ ಸಾಗುತಿದೆ ಪಯಣ…
ತಿಳಿದೋ ತಿಳಿಯದೇ ತಪ್ಪು ಮಾಡುತ, ತಪ್ಪುಗಳಿಗೆ ಕ್ಷಮೆಯ ಕೇಳುತ ಸಾಗುತಿದೆ ಪಯಣ…
ಬದುಕಿನುದ್ದಕ್ಕೂ ಬಿದ್ದು ಏಳುತ, ಏಳು ಬೀಳಿನ ಜೊತೆಗೆ ಸಾಗುತ ಗೆಲುವಿನ ಆಶಾಕಿರಣ ಹೊತ್ತು ಸಾಗುತಿದೆ ಪಯಣ…
ಬದುಕಿನೆಲ್ಲಾ ನೋವ ಸಹಿಸುತ, ಖುಷಿಯ ಕ್ಷಣಗಳ ದಿನವ ಹುಡುಕುತ ಸಾಗುತಿದೆ ಪಯಣ…
ಬಿದ್ದಾಗ ಕೈಯ ನೀಡುತ, ಸೋತಾಗ ಬೆನ್ನು ತಟ್ಟುತ ಮನಸಿನೊಳಗೆ ಧೈರ್ಯ ತುಂಬಿದ ಪ್ರೀತಿಪಾತ್ರರ ನೆನಪಿನೊಂದಿಗೆ ಸಾಗುತಿದೆ ಪಯಣ, ಗೆಲುವಿನಂಚಿನ ದಾರಿ ಹುಡುಕಿ ಸಾಗುತಿದೆ ಪಯಣ…
✍️ಉಲ್ಲಾಸ್ ಕಜ್ಜೋಡಿ