ರಾಜ್ಯ ಸರ್ಕಾರವು ಆರ್ಥಿಕ ಕಾರಣವೊಡ್ಡಿ ರಾಜ್ಯದ ಎಲ್ಲಾ ತಾಲೂಕುಗಳಲ್ಲಿ ಸೇವೆಸಲ್ಲಿಸುತ್ತಿರುವ ಗೃಹರಕ್ಷಕದಳದ ಸಿಬ್ಬಂದಿಗಳನ್ನು ಜೂನ್ ಒಂದರಿಂದ ಬಿಡುವ ಆದೇಶ ಜಾರಿ ಮಾಡಿದ್ದು ಈ ದಿಢೀರ್ ಘೋಷಣೆ ಅನೇಕ ದುಷ್ಪರಿಣಾಮಗಳಿಗೆ ಕಾರಣವಾಗಲಿದೆ. ರಾಜ್ಯದಲ್ಲಿ ಸುಮಾರು 25 ಸಾವಿರ ಗೃಹರಕ್ಷಕ ಸಿಬ್ಬಂದಿ ಗಳು ಸೇವೆ ಸಲ್ಲಿಸುತ್ತಿದ್ದು ನೆರೆ ಪರಿಹಾರ, ಸಾರಿಗೆ ಸುವ್ಯವಸ್ಥೆ, ಬಂದೋಬಸ್ತು, ಗಣ್ಯರ ರಕ್ಷಣೆ, ಕಾನೂನು ಸುವ್ಯವಸ್ಥೆ, ಮುಂತಾದ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಅನೇಕ ಪೊಲೀಸ್ ಠಾಣೆಗಳಲ್ಲಿ ಸಿಬ್ಬಂದಿಗಳ ಕೊರತೆ ಇದ್ದು ಗೃಹರಕ್ಷಕ ದಳದವರ ಸಹಕಾರದಿಂದ ನಿರ್ವಹಿಸಲ್ಪಡುತ್ತಿದೆ. ಪೊಲೀಸ್ ಇಲಾಖೆಯ ಅಧೀನದಲ್ಲಿ ಸುಮಾರು ಹನ್ನೆರಡು ಸಾವಿರ ಮಂದಿಯನ್ನು ಕೈ ಬಿಡಲಾಗುತ್ತಿದ್ದು ಆಡಳಿತ ವ್ಯವಸ್ಥೆ ಹಾಗೂ ಆದ್ಯತೆಗಳನ್ನು ಕಡೆಗಣಿಸುತ್ತಿರುವ ರಾಜ್ಯಸರ್ಕಾರದ ವೈಫಲ್ಯಕ್ಕೆ ಸಾಕ್ಷಿಯಾಗಿದೆ. ಸುಮಾರು ಹದಿನೈದು ವರ್ಷಗಳಿಂದಲೂ ಹೆಚ್ಚು ಕಾಲದಿಂದ ಸೇವೆಸಲ್ಲಿಸಿದ ಬಡ ಸಿಬ್ಬಂದಿಗಳನ್ನುಕೈ ಬಿಡುತ್ತಿರುವುದು ಜನತಾದಳ ತೀವ್ರವಾಗಿ ಖಂಡಿಸುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದ 250 ರ ಪೈಕಿ ಕೇವಲ 80 ಮಂದಿಯನ್ನು ಉಳಿಸಿಕೊಳ್ಳಲಾಗುತ್ತದೆ. ಈಗಾಗಲೇ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಮುಖಾಂತರ ಮುಖ್ಯಮಂತ್ರಿಗಳಿಗೆ ಒತ್ತಡ ಹೇರಲು ಕೋರಲಾಗಿದೆ. ಇದೀಗ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದವರನ್ನು ಕೈ ಬಿಡುವ ಮೂಲಕ ಕರೋನ ಸಾಂಕ್ರಾಮಿಕ ಹೆಸರಿ ನಲ್ಲಿ ಯುವಜನಾಂಗವನ್ನು ಬಲಿ ಕೊಡುತ್ತಿರುವುದು ದುರ್ದೈವ. ಕೆಲವು ಹೊರ ಗುತ್ತಿಗೆದಾರರ ಸಂಬಳವನ್ನು ಪಾವತಿಸಿದೆ ಕೈಬಿಟ್ಟಿದ್ದಾರೆ. ಕೋವಿಡ್ ವಾರಿಯರ್ಸ್ ಎಂದು ವೈದ್ಯರನ್ನು ಹೊಗಳಿ ಎರಡು ತಿಂಗಳಿನಿಂದ ವೇತನ ಪಾವತಿಸದೇ ಇರುವ ಅಮಾನವೀಯ ಘಟನೆಗಳು ಕಂಡುಬಂದಿದೆ. ಎಂದು ರಾಜ್ಯ ಜೆಡಿಎಸ್ ಉಪಾಧ್ಯಕ್ಷ ಎಂಬಿ ಸದಾಶಿವ ಪತ್ರಿಕಾ ಪ್ರಕಟಣೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
- Sunday
- November 24th, 2024