ಚೆಂಬು ಗ್ರಾಮದ ಚಂದ್ರಶೇಖರ ಕಾಚೇಲು(50) ರವರು ಮೇ 29 ರಂದು ರಾತ್ರಿ ಮೃತಪಟ್ಟಿದ್ದು, ಅವರಿಗೆ ಜ್ವರ ಭಾದಿಸಿರುವ ಹಿನ್ನೆಲೆಯಲ್ಲಿ ಮೇ 30 ಅವರ ಮೃತದೇಹವನ್ನು ಮಡಿಕೇರಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ ಎಂದು ತಿಳಿದು ಬಂದಿದೆ . ಚಂದ್ರಶೇಖರ ಅವರಿಗೆ ಕೆಲವು ದಿನಗಳಿಂದ ಜ್ವರ ಬಾಧೆಯಿತ್ತೆನ್ನಲಾಗಿದೆ . ಇದಕ್ಕಾಗಿ ಸ್ಥಳೀಯ ಆಸ್ಪತ್ರೆಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು . ನಿನ್ನೆ ಸಂಜೆ ಅವರು ಅಸ್ವಸ್ಥತೆಗೀಡಾದಾಗ ಕಲ್ಲುಗುಂಡಿಯ ವೈದ್ಯರು ಸಂಪಾಜೆ ಆಸ್ಪತ್ರೆಗೆ ಕರೆದೊಯ್ಯುವಂತೆ ಸಲಹೆ ನೀಡಿದರೆನ್ನಲಾಗಿದೆ . ಆದರೆ ಮನೆಗೆ ತಲುಪಿದ ಕೆಲವೇ ಹೊತ್ತಿನಲ್ಲಿ ಅವರು ಕೊನೆಯುಸಿರೆಳೆದಿದ್ದರು.
ಅವರಿಗೆ ಜ್ವರ ಬಾಧೆಯಿದ್ದುದರಿಂದ ಈ ಕುರಿತು ಆರೋಗ್ಯ ಇಲಾಖೆಗೆ ಮಾಹಿತಿ ನೀಡಲಾಯಿತು . ಇಂದು ಬೆಳಿಗ್ಗೆ ಅವರ ಮನೆಗೆ ಬಂದ ಆರೋಗ್ಯ ಇಲಾಖೆಯವರು ಮೃತದೇಹವನ್ನು ಮಡಿಕೇರಿ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ . ಚೆಂಬು ಭಾಗದಲ್ಲಿ ಕಳೆದ ಕೆಲವು ದಿನಗಳಿಂದ ಡೆಂಗ್ಯು ಹಾವಳಿಯೂ ಇದ್ದು , ಈ ಎಲ್ಲಾ ಹಿನ್ನಲೆಯಲ್ಲಿ ಮೃತದೇಹವನ್ನು ಮಡಿಕೇರಿಗೆ ಪರೀಕ್ಷೆಗಾಗಿ ಕೊಂಡೊಯ್ಯಲಾಗಿದೆ ಎಂದು ತಿಳಿದು ಬಂದಿದೆ. ಮೇ 31 ರಂದು ಮೃತದೇಹದ ಪರೀಕ್ಷಾ ವರದಿ ಬಂದಿದ್ದು ಜನ ನಿಟ್ಟುಸಿರು ಬಿಟ್ಟಿದ್ದಾರೆ. ಜ್ವರ ವಿಪರೀತ ಉಲ್ಬಣಗೊಂಡಿದ್ದರಿಂದ ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ. ಮೃತ ಚಂದ್ರಶೇಖರ ಅವರಿಗೆ ಮೇ 24 ರಂದು ವಿವಾಹವಾಗಿತ್ತು .