ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ಕಾರ್ಯ ಶ್ಲಾಘನೀಯ : ಸಂಸದ ನಳಿನ್
ಮುಕ್ಕೂರು : ಹತ್ತಾರು ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ಕಾರ್ಯವನ್ನು ಯುವಸೇನೆ ತಂಡ ಕ್ರಿಕೆಟ್ ಕೂಟ ಆಯೋಜನೆಯ ಮೂಲಕ ಮಾಡಿರುವುದು ಉತ್ತಮ ಪ್ರಯತ್ನ ಎಂದು ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷ, ದ.ಕ.ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.
ಯುವಸೇನೆ ಮುಕ್ಕೂರು, ಜ್ಯೋತಿ ಯುವಕ ಮಂಡಲ ಮುಕ್ಕೂರು- ಪೆರುವಾಜೆ ಇದರ ಆಶ್ರಯದಲ್ಲಿ ಮುಕ್ಕೂರು ಶಾಲಾ ವಠಾರದಲ್ಲಿ ನಡೆದ ಯುವಸೇನೆ ಟ್ರೋಫಿ ಸಮಾರೋಪ ಸಮಾರಂಭ ಹಾಗೂ ಸಾಧಕರಿಗೆ ಸಮ್ಮಾನ ಕಾರ್ಯಕ್ರಮ ನೆರವೇರಿಸಿ ಅವರು ಮಾತನಾಡಿದರು. ರಾಷ್ಟ್ರ ಸೇವಕನಾಗಿರುವ ಸೈನಿಕನನ್ನು ಗುರುತಿಸಿ ಯುವ ಸಮುದಾಯಕ್ಕೆ ಪ್ರೇರಣೆ ನೀಡುವ ಕಾರ್ಯವನ್ನು ಯುವಸೇನೆ ಮಾಡಿದೆ. ಸಾವಯವ ಕೃಷಿ ಕ್ಷೇತ್ರದ ಸಾಧಕಿಯನ್ನು ಗುರುತಿಸಿ ಕೃಷಿಕರಿಗೂ ಸ್ಪೂರ್ತಿ ತುಂಬಿದೆ ಎಂದರು.
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ವಠಾರದ ಗಣೇಶೋತ್ಸವ ಸಮಿತಿ ಅಧ್ಯಕ್ಷ ಅರುಣ್ ಕುಮಾರ್ ಪುತ್ತಿಲ ಮಾತನಾಡಿ, ಸಮಾಜದಲ್ಲಿ ಸಂಘಟನೆಗಳು ಸಾಮಾಜಿಕ ಬದ್ಧತೆಯ ಆಧಾರದಲ್ಲಿ ಸಾಗಬೇಕಾದ ಅನಿವಾರ್ಯತೆ ಇಂದಿದೆ. ಸಮಾಜಪರ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ ಸಂಘಟನೆ ಇನ್ನಷ್ಟು ವಿಸ್ತಾರವಾಗಿ ಬೆಳೆಯಲಿ. ತನ್ಮೂಲಕ ರಾಷ್ಟ್ರೀಯ ಹಿತಕ್ಕೆ ಸ್ಪಂದಿಸುವ ಕೆಲಸವು ಆಗಲಿ ಎಂದರು.
ಪುತ್ತೂರು ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು ಮಾತನಾಡಿ, ಕೃಷಿ ಮತ್ತು ಸೈನ್ಯದಲ್ಲಿ ಸೇವೆ ಸಲ್ಲಿಸಿದ ಇಬ್ಬರು ಸಾಧಕರನ್ನು ಗುರುತಿಸುವ ಕಾರ್ಯ ಇಲ್ಲಿ ನಡೆದಿದೆ. ಜತೆಗೆ ಕ್ರೀಡಾಕೂಟ ಆಯೋಜನೆಯ ಮೂಲಕ ಒಗ್ಗಟ್ಟು, ದೇಶಪ್ರೇಮ ಉದ್ದಿಪನದ ಕಾರ್ಯವು ಆಗಿದೆ ಎಂದರು.
ಬಿಜೆಪಿ ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷ ಸಹಜ್ ರೈ ಬಳಜ್ಜ ಮಾತನಾಡಿ, ಜಾತಿ, ಮತದ ಬೇಧಭಾವ ಇಲ್ಲದ ಕೂಟ ಅಂದರೆ ಅದು ಕ್ರೀಡಾಕೂಟ. ಸ್ಪರ್ಧಾ ಮನೋಭಾವದಿಂದ ಇಲ್ಲಿ ಸೇರುವ ತಂಡಕ್ಕೆ ಸೋಲು-ಗೆಲುವು ಎರಡರ ಅನುಭವ ದೊರೆಯುತ್ತದೆ. ಈ ಮೂಲಕ ಬದುಕಿನಲ್ಲಿಯು ಇವೆರಡನ್ನು ಸಮಚಿತ್ತದಿಂದ ಸ್ವೀಕರಿಸಲು ಸಾಧ್ಯವಾಗುತ್ತದೆ ಎಂದರು.
ಸಮಾರಂಭದಲ್ಲಿ ಕಾನಾವು ಕ್ಲಿನಿಕ್ನ ವೈದ್ಯ ಡಾ|ನರಸಿಂಹ ಶರ್ಮಾ, ನಿವೃತ್ತ ಕಸ್ಟಮ್ ಅಧಿಕಾರಿ ಆರ್.ಕೆ.ಭಟ್ ಕುರುಂಬುಡೇಲು, ಮುಕ್ಕೂರು ಹಾಲು ಉತ್ಪಾದಕರ ಸಹಕಾರ ಸಂಘದ ಮಾಜಿ ಅಧ್ಯಕ್ಷ ಕುಂಬ್ರ ದಯಾಕರ ಆಳ್ವ, ಪ್ರಗತಿಪರ ಕೃಷಿಕ ಸುಬ್ರಾಯ ಭಟ್ ನೀರ್ಕಜೆ, ಬಿಜೆಪಿ ಮುಖಂಡ ಜಗದೀಶ್ ಅಧಿಕಾರಿ, ಪೆರುವಾಜೆ ಗ್ರಾ.ಪಂ.ಮಾಜಿ ಉಪಾಧ್ಯಕ್ಷ ಸುನಿಲ್ ರೈ, ಮುಕ್ಕೂರು ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುಧಾಕರ ರೈ ಕುಂಜಾಡಿ, ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಉಮೇಶ್ ಕೆಎಂಬಿ, ಯುವಸೇನೆ ಮುಕ್ಕೂರು ಅಧ್ಯಕ್ಷ ಸಚಿನ್ ರೈ ಪೂವಾಜೆ, ಜ್ಯೋತಿ ಯುವಕ ಮಂಡಲದ ಅಧ್ಯಕ್ಷ ನಿತಿನ್ ಕಾನಾವು ಮೊದಲಾದವರು ಉಪಸ್ಥಿತರಿದ್ದರು. ರಮೇಶ್ ಬೆಳ್ಳಾರೆ ಸ್ವಾಗತಿಸಿ, ಏನೆಕಲ್ ಅಂಚೆ ಪಾಲಕಿ ದೀಕ್ಷಾ ನೀರ್ಕಜೆ ವಂದಿಸಿದರು. ಪುರುಷೋತ್ತಮ ಕುಂಡಡ್ಕ ನಿರೂಪಿಸಿದರು.
ಸನ್ಮಾನ ಸಮಾರಂಭ- ಈ ಸಂದರ್ಭದಲ್ಲಿ ಕೃಷಿ ಕ್ಷೇತ್ರದ ಸಾಧನೆಗಾಗಿ ಪ್ರಶಸ್ತಿ ಪುರಸ್ಕೃತರಾದ ಶ್ವೇತಾ ನರಸಿಂಹ ತೇಜಸ್ವಿ ಕಾನಾವು, ಮಾಜಿ ಸೈನಿಕ ಸುದಾನಂದ ಮಣಿಯಾಣಿ ಅವರನ್ನು ಸಂಸದ ನಳಿನ್ ಕುಮಾರ್ ಕಟೀಲು ಅವರು ಸಮ್ಮಾನಿಸಿದರು. ಭಾಗ್ಯಶ್ರೀ ಪೂವಾಜೆ ಸಮ್ಮಾನಪತ್ರ ವಾಚಿಸಿದರು.
ಬಹುಮಾನ ವಿತರಣೆ- ಕ್ರಿಕೆಟ್ ಪಂದ್ಯಾಕೂಟದಲ್ಲಿ ಆಶೀರ್ವಾದ ಅಲೆಕ್ಕಾಡಿ (ಪ್ರ), ಪ್ಲವರ್ ಗೈಸ್ ಬೆಳ್ಳಾರೆ (ದ್ವಿ), ಟಾಸ್ಕೋ ಚಾಲೆಂಜರ್ಸ್ ಸವಣೂರು (ತೃ), ಶ್ರೀ ದುರ್ಗಾ ಪೆರುವಾಜೆ (ಚ) ಸ್ಥಾನ ಪಡೆಯಿತು.
ಉದ್ಘಾಟನಾ ಸಮಾರಂಭ- ಬೆಳಗ್ಗೆ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪದ್ಮನಾಭ ಶೆಟ್ಟಿ ಪೆರುವಾಜೆ ಉದ್ಘಾಟಿಸಿದರು. ಪ್ರಗತಿಪರ ಕೃಷಿಕ ರಾಮಚಂದ್ರ ಭಟ್ ಕೋಡಿಬೈಲು ಅಧ್ಯಕ್ಷತೆ ವಹಿಸಿದ್ದರು. ಪೆರುವೋಡಿ ಶ್ರೀ ವಿಷ್ಣುಮೂರ್ತಿ ದೇವಾಲಯದ ಮೊಕ್ತೇಸರ ಬಾಲಚಂದ್ರ ರಾವ್ ಕೊಂಡೆಪ್ಪಾಡಿ, ಗ್ರಾ.ಪಂ.ಸದಸ್ಯೆ ಗುಲಾಬಿ ಬೊಮ್ಮೆಮಾರು, ಜ್ಯೋತಿ ಯುವಕ ಮಂಡಲದ ಮಾಜಿ ಅಧ್ಯಕ್ಷ ಸತ್ಯಪ್ರಸಾದ್ ಕಂಡಿಪ್ಪಾಡಿ, ಮುಕ್ಕೂರು ಶ್ರೀ ಶಾರದೋತ್ಸವ ಸಮಿತಿ ಅಧ್ಯಕ್ಷ ಕಿರಣ್ ಚಾಮುಂಡಿಮೂಲೆ ಮೊದಲಾದವರು ಉಪಸ್ಥಿತರಿದ್ದರು. ಸಂಜೆ ಸಾಂಸ್ಕೃತಿಕ ವೇದಿಕೆಯಲ್ಲಿ ದೇವದಾಸ್ ಕಾಪಿಕಾಡು ನಿರ್ದೇಶನದ ಕೊಡೆ ಬುಡ್ಪಾಲೆ ತುಳು ನಾಟಕ ಪ್ರದರ್ಶನಗೊಂಡಿತು.